ರಸ್ತೆ ಇಕ್ಕೆಲಗಳಲ್ಲಿ ರಿಫ್ಲೆೆಕ್ಟಿವ್ ಸ್ಟೈನ್‌ಲೆಸ್ ಸ್ಟೀಲ್ ಶೀಟ್‌ನ ತಡೆಗೋಡೆ ನಿರ್ಮಾಣ
- ರಸ್ತೆ ಇಕ್ಕೆಲಗಳಲ್ಲಿ ರಿಫ್ಲೆೆಕ್ಟಿವ್ ಸ್ಟೈನ್‌ಲೆಸ್ ಸ್ಟೀಲ್ ಶೀಟ್‌ನ ತಡೆಗೋಡೆ ನಿರ್ಮಾಣ
- ಎಂಸಿಸಿಯಿಂದ ಹೊಸ ಪ್ರಯೋಗ
ಸಾಂಸ್ಕೃತಿಕ ನಗರಿ ಮೈಸೂರಿನ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಿರುವ ಮೈಸೂರು ನಗರ ಪಾಲಿಕೆ (ವಾಣಿ ವಿಲಾಸ ನೀರು ಸರಬರಾಜು ಮಂಡಳಿಯ ಒಳಚರಂಡಿ ವಿಭಾಗ) ಸಿಕ್ಕ ಸಿಕ್ಕಲ್ಲಿ ಮೂತ್ರ ವಿಸರ್ಜನೆ ಮಾಡುವುದನ್ನು ತಪ್ಪಿಸಲು ಮಾಸ್ಟರ್ ಪ್ಲಾನ್ ರೂಪಿಸಿದೆ...!
ನಗರದ ಕೇಂದ್ರ ಬಸ್ ನಿಲ್ದಾಣ ಮುಂಭಾಗದ ಪೀಪಲ್ಸ್ ಪಾರ್ಕ್‌ಗೆ ಹೊಂದಿಕೊಂಡಂತೆ ಇರುವ ರಾಜಕಾಲುವೆ ಬಳಿ ಸಾರ್ವಜನಿಕರು ಮೂತ್ರ ವಿಸರ್ಜಿಸುವುದನ್ನು ತಪ್ಪಿಸುವ ಉದ್ದೇಶದಿಂದ ಕನ್ನಡಿ ಮಾದರಿಯ ಪಾಲಿಶ್ ಮಾಡಿರುವ ರಿಫ್ಲೆೆಕ್ಟಿವ್ ಸ್ಟೈನ್‌ಲೆಸ್ ಸ್ಟೀಲ್ ಶೀಟ್‌ನಲ್ಲಿ ತಡೆಗೋಡೆ ನಿರ್ಮಿಸಿದೆ.
ಪಕ್ಕದಲ್ಲಿಯೇ ಸಾರ್ವಜನಿಕ ಶೌಚಗೃಹ ಇದ್ದರೂ ಸದರಿ ಜಾಗದಲ್ಲಿ ಪ್ರತಿದಿನ ನೂರಾರು ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುತ್ತಿದ್ದರು. ಇದರಿಂದ ಸ್ವಚ್ಛತೆ ಹಾಳಾಗುವುದರ ಜತೆಗೆ ಬಿ.ಎನ್.ರಸ್ತೆಯಲ್ಲಿ ಸಂಚರಿಸುವವರು ಮುಜುಗರಕ್ಕೀಡಾಗುತ್ತಿದ್ದರು. 85 ಮೀಟರ್ ವಿಸ್ತೀರ್ಣದಲ್ಲಿ ಪಾಲಿಶ್ ಮಾಡಿರುವ ‘ರಿಫ್ಲೆೆಕ್ಟಿವ್ ಸ್ಟೈನ್‌ಲೆಸ್ ಸ್ಟೀಲ್ ಶೀಟ್‌ಗಳನ್ನು ತಡೆಗೋಡೆ ಮಾದರಿಯಲ್ಲಿ ಅಳವಡಿಸಲಾಗಿದೆ. ಕನ್ನಡಿಯಂತೆ ಕಾಣುವ ಈ ರಿಫ್ಲೆಕ್ಟಿಟ್ ಸ್ಟೈನ್‌ಲೆಸ್ ಸ್ಟೀಲ್ ಶೀಟ್ ಮುಂದೆ ಇರುವವರ ಮುಖ ಚಹರೆ ಸ್ಪಷ್ಟವಾಗಿ ಕಾಣಿಸುತ್ತದೆ. ಅಲ್ಲದೆ, ಬಿ.ಎನ್.ರಸ್ತೆಯಲ್ಲಿ ಓಡಾಡುವವರು ಹಾಗೂ ವಾಹನದ ಬಿಂಬವೂ ಕಾಣಿಸುವುದರಿಂದ ಮೂತ್ರ ವಿಸರ್ಜನೆ ಮಾಡಲು ಬರುವವರಿಗೆ ಮುಖಕ್ಕೆ ಹೊಡೆದಂತೆ ಭಾಸವಾಗಲಿದೆ. ಇದರಿಂದ ಅವರು ಬಯಲು ಮೂತ್ರ ವಿಸರ್ಜನೆ ಮುಂದಾಗದೆ ವಾಪಸ್ ಹೋಗಲಿದ್ದಾರೆ.
ಈ ಭಾಗದಲ್ಲಿ ಹೊಸದಾಗಿ ಇಂಟರ್‌ಲಾಕ್ ಅಳವಡಿಸಿ, ಪಾದಚಾರಿ ಮಾರ್ಗ ನಿರ್ಮಿಸಲಾಗಿದೆ. ಪಾಲಿಶ್ ಮಾಡಿರುವ ರಿಫ್ಲೆೆಕ್ಟಿವ್ ಸ್ಟೈನ್‌ಲೆಸ್ ಸ್ಟೀಲ್ ಶೀಟ್ ಸುತ್ತಲೂ ಎಲ್‌ಇಡಿ ಲೈಟ್ ಅಳವಡಿಸಿರುವುದರಿಂದ ರಾತ್ರಿ ವೇಳೆ ಬೀದಿ ದೀಪ ಆನ್ ಆಗುತ್ತಿದ್ದಂತೆ ಎಲ್‌ಇಡಿ ಬಲ್ಬ್ ಆನ್ ಆಗುವುದರಿಂದ ಆ ಸ್ಥಳವನ್ನು ದೀಪಾಲಂಕಾರ ಮಾಡಿದಂತೆ ಕಾಣುತ್ತದೆ. ಈ ಕಾರಣದಿಂದಲೂ ರಾತ್ರಿ ವೇಳೆ ಮೂತ್ರ ವಿಸರ್ಜನೆ ಮಾಡಲು ಬರುವವರಿಗೆ ಮುಜುಗರವಾಗಲಿದೆ.
‘ಗ್ರಾಮಾಂತರ ಬಸ್ ನಿಲ್ದಾಣದ ಮುಂದೆ ಮೂತ್ರ ವಿಸರ್ಜನೆಯಿಂದ ಹಳದಿ ಸ್ಪಾಟ್ ಎಂದು ಗುರುತಿಸಲಾಗಿತ್ತು. ತಿಳಿವಳಿಕೆಯ ಫಲಕ ಹಾಕಿದ್ದರೂ, ಜನ ಸ್ಪಂದಿಸುತ್ತಿರಲಿಲ್ಲ. ಇದರಿಂದ ಪರಿಣಾಮಕಾರಿಯಾಗಿ ಏನಾದರೂ ಕ್ರಮ ಕೈಗೊಳ್ಳಬೇಕು ಎಂದು ಉದ್ದೇಶಿಸಲಾಗಿತ್ತು. ಈ ವೇಳೆ ಪಾಲಿಶ್ ಮಾಡಿರುವ ರಿಫ್ಲೆೆಕ್ಟಿವ್ ಸ್ಟೈನ್‌ಲೆಸ್ ಸ್ಟೀಲ್ ಶೀಟ್ ಅಳವಡಿಸಲಾಗಿದೆ. ಇದು ಪ್ರಾಯೋಗಿಕವಾಗಿ ಕೈಗೊಂಡ ಕ್ರಮವಾಗಿದ್ದು, ಸಾರ್ವಜನಿಕ ವಲಯದಿಂದ ಪ್ರಶಂಸೆ ವ್ಯಕ್ತವಾಗಿದೆ. ಪಾದಚಾರಿ ಮಾರ್ಗದ ಕಾಮಗಾರಿ ಒಳಗೊಂಡಂತೆ ಈ ಕಾಮಗಾರಿಗೆ 9.50 ಲಕ್ಷ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ’ ಎಂದು ವಾಣಿವಿಲಾಸ ನೀರು ಸರಬರಾಜು ಮಂಡಳಿ ಎಇಇ ಮುಸ್ತಫಾ ಮಾಹಿತಿ ನೀಡಿದ್ದಾರೆ.
ದಂಡದ ಬೋರ್ಡಿಗೂ ಕ್ಯಾರೆ ಎನ್ನದ ಜನ:
ಸ್ವಚ್ಛ ಸರ್ವೇಕ್ಷಣೆಯಲ್ಲಿ ಗ್ರಾಮಾಂತರ ಬಸ್ ನಿಲ್ದಾಣದ ಎದುರು ಬಿ.ಎನ್.ರಸ್ತೆ ಬದಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುವುದರಿಂದ ಆ ಸ್ಥಳವನ್ನು ಹಳದಿ ವಲಯ ಎಂದು ಘೋಷಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆ ಸ್ಥಳದಲ್ಲಿ ಬಯಲಲ್ಲಿ ಮೂತ್ರ ವಿಸರ್ಜಿಸಿದರೆ ದಂಡಾಸ್ತ್ರ ಪ್ರಯೋಗಿಸುವುದಾಗಿ ಎಚ್ಚರಿಕೆ ಸಂದೇಶದ ಬ್ಯಾನರ್ ಹಾಗೂ ಬೋರ್ಡ್ ಅಳವಡಿಸಲಾಗಿತ್ತು. ಆದರೂ, ಜನ ಅದಕ್ಕೆ ಸೊಪ್ಪು ಹಾಕದೆ ಬಯಲಿನಲ್ಲಿಯೇ ಮೂತ್ರ ವಿಸರ್ಜಿಸಿ ವಾತಾವರಣ ಕಲುಷಿತಗೊಳ್ಳುವಂತೆ ಮಾಡುತ್ತಿದ್ದರು.