ಸರಗೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಶಿವಸ್ವಾಮಿ, ರವಿ, ಶ್ರೀನಿವಾಸ, ಮದುಸೂದನ್, ದಯಾನಂದ ಇತರರು ಇದ್ದರು.
ಸರಗೂರು: ಕಲಿಯುವ ಛಲವಿದ್ದರೆ ಅಸಾಧ್ಯವಾದದ್ದನ್ನು ಸಾಧಿಸಬಹುದು. ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾದದ್ದು. ಈ ಸಮಯದಲ್ಲಿ ತಮ್ಮ ಮನಸನ್ನು ಹತೋಟಿಯಲ್ಲಿಟ್ಟುಕೊಂಡು ಗುರಿ ಸಾಧಿಸಬೇಕು ಎಂದು ನಿವೃತ್ತ ಪ್ರಾಧ್ಯಾಪಕ ಕಾಲೇಜು ಶಿಕ್ಷಣ ಇಲಾಖೆ ಪ್ರೊ.ಎಂ.ಎಂ .ಶಿವಸ್ವಾಮಿ ಕಿವಿಮಾತು ಹೇಳಿದರು.
ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಕಾಲೇಜು ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಕ್ರೀಡೆ, ಎನ್‌ಸ್‌ಎಸ್ ಹಾಗೂ ಗೈಡ್ಸ್ ಮತ್ತು ರೆಡ್ ಕ್ರಾಸ್ ಚಟುವಟಿಕೆಗಳ ಸಮಾರೋಪ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಲ್ಲ ರಂಗದಲ್ಲೂ ಮುಂದಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಳವಣಿಗೆಗೆ ಅವಕಾಶವಿದ್ದು, ಸ್ಥಳೀಯರು ಇದನ್ನು ಬೆಳೆಸಬೇಕು. ಕಾಲೇಜು ಉತ್ತಮ ಉಪನ್ಯಾಸಕ ವೃಂದ ಹೊಂದಿರುವುದು ಸಂತೋಷದ ವಿಷಯ. ಈಗಿನ ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾದ ವ್ಯವಸ್ಥೆಯನ್ನು ಸರ್ಕಾರ, ದಾನಿಗಳು, ಪಾಲಕರು ಮಾಡಿಕೊಟ್ಟಿದ್ದಾರೆ. ಇದನ್ನು ವಿದ್ಯಾರ್ಥಿಗಳು ಅರಿತು ವಿದ್ಯಾಭ್ಯಾಸದಲ್ಲಿ ತೊಡಗಬೇಕು ಎಂದರು.
ಕಾಲೇಜು ಸಮಿತಿ ಸದಸ್ಯ ಹಾಗೂ ಜಿಪಂ ಮಾಜಿ ಸದಸ್ಯ ಪಿ.ರವಿ ಮಾತನಾಡಿ, ಕೂಲಿ ಕಾರ್ಮಿಕರಾಗಿ ದುಡಿಯುವವರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಈ ಪರಿಸ್ಥಿತಿ ಬದಲಾದಾಗ ಮಾತ್ರ ದೇಶ ಅಭಿವೃದ್ಧಿ ಸಾಧ್ಯ. ಇದನ್ನು ಬದಲಿಸುವ ಶಕ್ತಿ ಶಿಕ್ಷಣಕ್ಕಿದೆ. ಗುರಿ ಸಾಧನೆಯ ಹಾದಿಯಲ್ಲಿ ಎದುರಾಗುವ ಆತಂಕಗಳನ್ನು ದಿಟ್ಟತನದಿಂದ ಎದುರಿಸುವ ಆತ್ಮಸ್ಥೈರ್ಯ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು.
ಕಲಿಕೆಯ ಜತೆಜತೆಗೆ ಜೀವನ ಮೌಲ್ಯಗಳು ವಿದ್ಯಾರ್ಥಿಗಳ ಬದುಕಿಗೆ ಭದ್ರ ಅಡಿಪಾಯವಾಗಬೇಕು ಎಂದು ತಿಳಿಸಿದರು.
ಕಾಲೇಜು ಪ್ರಾಂಶುಪಾಲ ಡಾ.ಬಿ.ಮಧುಸೂದನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ವಾರ್ಷಿಕ ವರದಿಯನ್ನು ಉಪನ್ಯಾಸಕ ಮಂಡಿಸಿದರು. ವಿವಿಧ ಭಾಗದಿಂದ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಪಪಂ ಸದಸ್ಯರಾದ ಶ್ರೀನಿವಾಸ, ಚೆಲುವ ಕೃಷ್ಣ, ಕಸಾಪ ಅಧ್ಯಕ್ಷ ಕೆಂಡಗ್ಗಣಸ್ವಾಮಿ, ಸಮಾಜ ಸೇವಕ ಸುರೇಶ್ ಜೈನ್, ಕಾಲೇಜು ವೃಂದ ಸಾಂಸ್ಕೃತಿಕ ಸಮಿತಿ ಸಂಚಾಲಕಿ ಪ್ರೊ.ವೆಂಕಟಮ್ಮ, ರಾಷ್ಟ್ರೀಯ ಸೇವಾ ಯೋಜನೆ ಸಂಚಾಲಕ ಎಸ್.ಆರ್.ಯತೀಶ್, ಕ್ರೀಡಾ ಸಮಿತಿ ಸಂಚಾಲಕ ಎಂ.ಜೆ.ದಯಾನಂದ, ರೋವರ್ಸ್ ಮತ್ತು ರೇಂಜರ್ಸ್ ಸಮಿತಿ ಸಂಚಾಲಕರಾದ ಎಸ್.ಮಂಜುಳಾದೇವಿ, ಡಾ.ಎಲ್.ಎಂ.ತಿಮ್ಮಯ್ಯ, ರೇಡ್ ಕ್ರಾಸ್ ಸಮಿತಿ ಸಂಚಾಲಕ ಡಾ.ಎಂ.ಬಿ.ದೀಪಾ , ಐಕ್ಯೂಎಸಿ ಸಮಿತಿ ಸಂಚಾಲಕ ಡಾ.ಎಸ್.ಯೋಗಿತಾ, ಬೃಂದಾ, ಇನ್ನೂ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.