ತಿ.ನರಸೀಪುರದ ಗುರುಭವನದಲ್ಲಿ ಹಿಂದುಳಿದ ವರ್ಗಗಳ ಇಲಾಖೆಯಿಂದ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಟಿ.ಜಿ.ಸುರೇಶಾಚಾರ್, ಗೋವಿಂದರಾಜು, ಎಂ.ರಾಜಣ್ಣ, ಕೆ.ರಂಗಸ್ವಾಮಿ, ಎಸ್.ಸಿ.ಶಿವಮೂರ್ತಿ ಇತರರು ಇದ್ದರು. 
ಮೈಸೂರು

ಎದೆಗುಂದೆ ಸಾಗಿದರೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಸಾಧ್ಯ

ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್ ಅಭಿಪ್ರಾಯ

ತಿ.ನರಸೀಪುರ: ವಿದ್ಯಾರ್ಥಿಗಳು ಜೀವನದುದ್ದಕ್ಕೂ ಎದುರಾಗುವ ವ್ಯತಿರಿಕ್ತ ಪರಿಸ್ಥಿತಿ ಮತ್ತು ಪ್ರಭಾವಕ್ಕೆ ಎದೆಗುಂದದೆ ಸಾಗಿದರೆ ಮಾತ್ರ ನಿಶ್ಚಿತ ಗುರಿಯೊಂದಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್ ಅಭಿಪ್ರಾಯಪಟ್ಟರು.
ಪಟ್ಟಣದ ಗುರುಭವನದಲ್ಲಿ ಶನಿವಾರ ಹಿಂದುಳಿದ ವರ್ಗಗಳ ಇಲಾಖೆ ವತಿಯಿಂದ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ವ್ಯಾಸಂಗದ ಅವಧಿಯಲ್ಲಿ ಕಟ್ಟುನಿಟ್ಟಾಗಿ ಶಿಸ್ತನ್ನು ಪಾಲನೆ ಮಾಡಬೇಕು. ಜತೆಗೆ ಏಕಾಗ್ರತೆ, ಸಂಯಮ, ನಿರಂತರ ಅಭ್ಯಾಸದಿಂದ ಅಚಲವಾದ ಯಶಸ್ಸು ಕಾಣಬಹುದು ಎಂದರು.
ಸಿಡಿಪಿಒ ಗೋವಿಂದರಾಜು ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಾವು ಏನು ಮಾಡಬೇಕು ಅನ್ನುವುದಕ್ಕಿಂತ ಏನನ್ನು ಮಾಡಬಾರದು ಎಂಬುದಷ್ಟೇ ಮುಖ್ಯ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳು ಅಭ್ಯಾಸಕ್ಕೆ ನಿರ್ದಿಷ್ಟ ಸಮಯ ನಿಗದಿ ಪಡಿಸಿಕೊಳ್ಳಬೇಕು. ಆ ಸಮಯವನ್ನು ಅಭ್ಯಾಸಕ್ಕೆ ಮಾತ್ರ ಮೀಸಲಿರಿಸಬೇಕು. ಇಂದಿನ ಯುವ ಸಮೂಹ ಮೊಬೈಲ್ ಗೀಳಿಗೆ ಬಿದ್ದು ಸಮಾಜದ ಸ್ವಾಸ್ಥೃ ಮತ್ತು ವೈಯಕ್ತಿಕ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಬೇಸರಿಸಿದರು.
ತಾಪಂ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಕೆ.ರಂಗಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ.ಶಿವಮೂರ್ತಿ, ಬಿ ಆರ್‌ಸಿ ನಾಗೇಶ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಂ.ರಾಜಣ್ಣ, ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕಿ ಶಾಂತಾ, ನಿಲಯ ಪಾಲಕಿ ವರಲಕ್ಷ್ಮೀ, ಸ್ಪರ್ಧಾತ್ಮಕ ಮತ್ತು ವೃತ್ತಿ ಮಾರ್ಗದರ್ಶನ ಸಂಪನ್ಮೂಲ ವ್ಯಕ್ತಿಗಳಾದ ರಮೇಶ್, ಸಿರಿದೇವಿ, ಹಿಂದುಳಿದ ವರ್ಗಗಳ ನಿಲಯಗಳ ಮೇಲ್ವಿಚಾರಕರು ಹಾಗೂ ವಿದ್ಯಾರ್ಥಿಗಳು ಇದ್ದರು.