- ಸಾಮೂಹಿಕ ನಾಯಕತ್ವದ ರೈತಸಂಘ ಎಚ್ಚರಿಕೆ
ಮೈಸೂರು: ತಂಬಾಕು ದರ ಕುಸಿತ ಸಮಸ್ಯೆ ಬಗೆಹರಿಸದಿದ್ದರೆ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳ ವಿರುದ್ಧ ಬಾರುಕೋಲು ಹಾಗೂ ಪೊರಕೆ ಚಳವಳಿ ನಡೆಸಲಾಗುವುದು ಎಂದು ಸಾಮೂಹಿಕ ನಾಯಕತ್ವದ ರೈತಸಂಘ ಎಚ್ಚರಿಸಿದೆ.
ಐಟಿಸಿ ಕಂಪನಿ ವಂಚನೆ, ಇದರೊಂದಿಗೆ ತಂಬಾಕು ಮಂಡಳಿ ಅಧಿಕಾರಿಗಳು ಶಾಮೀಲಾಗಿರುವ ಕಾರಣ ತಂಬಾಕು ದರ ಈ ಭಾಗದಲ್ಲಿ ತೀವ್ರ ಕುಸಿದು ರೈತರು ಸಂಕಷ್ಟ ಎದುರಿಸುತ್ತಿದ್ದಾರೆ.
ಆದ್ದರಿಂದ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಮಧ್ಯಪ್ರವೇಶಿಸಿ ಸಮಸ್ಯೆಗೆ ಪರಿಹಾರ ಕಂಡುಹಿಡಿಯಬೇಕು. ಇಲ್ಲವಾದರೆ ಇವರ ವಿರುದ್ಧ ಹೋರಾಟ ಮಾಡಲಾಗುವುದು ಎಂದು ರೈತ ಮುಖಂಡ ಹೊನ್ನೂರು ಪ್ರಕಾಶ್
ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ವೈಜ್ಞಾನಿಕ ಬೆಲೆ ನೀಡಲು ಸಾಧ್ಯವಾಗದಿದ್ದರೂ ಕನಿಷ್ಠ ಕಳೆದ ಅಕ್ಟೋಬರ್, ನವೆಂಬರ್‌ನಲ್ಲಿ ನೀಡಿದ ದರವನ್ನೇ ನೀಡಬೇಕು. ಸರ್ಕಾರ ಪರ್ಯಾಯ ಬೆಳೆಯ ಮಾರ್ಗವನ್ನೂ ತೋರುತ್ತಿಲ್ಲ. ಹೀಗಾಗಿ ಇವರ ಜಮೀನನ್ನು ಕಿತ್ತುಕೊಳ್ಳುವ ಹುನ್ನಾರ ಇದಾಗಿದೆ ಎಂದು ಕಿಡಿಕಾರಿದರು.
ಮುಖಂಡ ಮಾಡ್ರಳ್ಳಿ ಪಾಪಣ್ಣ ಮಾತನಾಡಿ, ದರ ಕುಸಿತಕ್ಕೆ ಖರೀದಿದಾರ ಕಂಪನಿಯಾದ ಐಟಿಸಿ ಕಾರಣವಾಗಿದೆ. ರಾಷ್ಟ್ರೀಯ ತಂಬಾಕು ಮಂಡಳಿಯ ಅಧಿಕಾರಿಗಳು ಇವರೊಡನೆ ಶಾಮೀಲಾಗಿದ್ದಾರೆ. ಮೊದಲು ಜಿಎಸ್‌ಟಿ ನೆಪ ಹೇಳಿ ವಂಚಿಸಿದರು. ಈಗ ಅದನ್ನೇ ಮುಂದುವರಿಸಿದ್ದಾರೆ. ಇತರ ಕಂಪನಿಗಳು ಖರೀದಿಗೆ ಬಾರದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಸಂಘದ ಚಕ್ಕೋಡನಹಳ್ಳಿ ಡಿ.ಪುನೀತ್, ಚಂಗಡಿ ಕರಿಯಪ್ಪ ಇದ್ದರು.