ನಗರದ ವಾಲ್ಮೀಕಿ ಭವನದಲ್ಲಿ ಸೋಮವಾರ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು. ಶಾಸಕ ದರ್ಶನ್, ವಿಧಾನ ಪರಿಷ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ, ಸಂಸದ ಸುನಿಲ್ ಬೋಸ್, ತಾಲೂಕು ಪಂಚಾಯಿತಿ ಇಒ ಜರಾಲ್ಡ್ ರಾಜೇಶ್, ತಹಸೀಲ್ದಾರ್ ಡಾ. ಸ್ಮಿತಾ ಇತರರು ಇದ್ದರು.
ನಂಜನಗೂಡು: ಪ್ರತಿ ಬಾರಿಯ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಕಳೆದ ಬಾರಿಯ ಸಮಸ್ಯೆಗಳು ಮುರುಕಳಿಸುತ್ತಿದ್ದು, ಸರಿಯಾಗಿ ಕಾರ್ಯನಿರ್ವಹಿಸಿ, ಇಲ್ಲವೇ ಜಾಗ ಖಾಲಿ ಮಾಡಿ ಎಂದು ಶಾಸಕ ದರ್ಶನ್ ಧ್ರುವನಾರಾಯಣ ತಾಲೂಕು ಮಟ್ಟದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ನಗರದ ವಾಲ್ಮೀಕಿ ಭವನದಲ್ಲಿ ಸೋಮವಾರ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ, ಸಂಸದ ಸುನಿಲ್ ಬೋಸ್ ಜತೆಗೂಡಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಭಾಗವಹಿಸಿ ವಿವಿಧ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.
ನಗರಸಭಾ ಕಚೇರಿಯಲ್ಲಿ ಬಿ ಖಾತಾ ಮಾಡಿಸಲು ದಲ್ಲಾಳಿಗಳ ಕಾಟ ಮಿತಿಮೀರಿದೆ. ಪ್ರತಿದಿನ ನನಗೆ ದೂರುಗಳು ಬರುತ್ತಿವೆ. ಮೊದಲು ದಲ್ಲಾಳಿಗಳ ಮೇಲೆ ಎಫ್‌ಐಆರ್ ದಾಖಲು ಮಾಡಿ. ಇಲ್ಲವಾದಲ್ಲಿ ಸಂಬಂಧಪಟ್ಟ ಎಲ್ಲ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು. ಕಚೇರಿಯಲ್ಲಿ ಸಿಸಿಟಿವಿ ಅಳವಡಿಸಿ. ಹೊಸ ಬಡಾವಣೆಗಳ ಮೂಲ ಸೌಕರ್ಯಗಳನ್ನು ಒದಗಿಸಲು ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ. ಬಸವ ಪುತ್ಥಳಿ ನಿರ್ಮಾಣ ಬಿಡುಗಡೆಯಾಗಿದ್ದ 90 ಲಕ್ಷ ರೂ. ಅನುದಾನ ವಾಪಸ್ ಹೋಗಿದೆ. ಇದಕ್ಕೆ ಯಾರು ಹೊಣೆ? ಎಂದು ಪ್ರಶ್ನೆ ಮಾಡಿದರು.
ನಗರದ 9ನೇ ವಾರ್ಡಿನಲ್ಲಿ ಅಕ್ರಮವಾಗಿ ಗುಜರಿ ಅಂಗಡಿ ಹಾಕಿಕೊಂಡಿದ್ದಾರೆ. ತಕ್ಷಣ ಇದನ್ನು ತೆರವುಗೊಳಿಸಬೇಕು. ಬಜಾಜ್ ಸ್ಟ್ರೀಟ್‌ನಲ್ಲಿ ಪ್ರತಿಬಾರಿಯೂ ಒತ್ತುವರಿ ತೆರವುಗೊಳಿಸಿದರೂ ಸಮಸ್ಯೆ ಬಗೆಹರಿಯುತ್ತಿಲ್ಲ. ನಗರದ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ. ಮುಂಗಾರು ಪ್ರಾರಂಭವಾಗುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಗೆ ಎಪಿಎಂಸಿ ಅಧಿಕಾರಿ ಆಗಮಿಸದ ಹಿನ್ನೆಲೆ ನೋಟಿಸ್ ಜಾರಿ ಮಾಡುವಂತೆ ಸೂಚಿಸಿದರು. ಶ್ರೀಕಂಠೇಶ್ವರ ದೇವಸ್ಥಾನದ ಒಳಗೆ ಹಳೆಯ ಕಾಲದ ಫ್ಯಾನ್‌ಗಳನ್ನು ಅಳವಡಿಸಲಾಗಿದೆ. ತಕ್ಷಣ ಹೊಸ ಮಾದರಿ ಫ್ಯಾನ್‌ಗಳನ್ನು ಅಳವಡಿಸಲು ಕ್ರಮೆ ಕೈಗೊಳ್ಳಿ, ಡಾರ್ಮಿಟರಿಗಳೂ ಬದಲಾಗಬೇಕು. ಕಪಿಲಾ ನದಿ ಬಳಿ ಭಕ್ತಾದಿಗಳಿಂದ ಒಂದು ಬಕೆಟ್ ಬಿಸಿ ನೀರಿಗೆ 50 ರಿಂದ 100 ಪಡೆದುಕೊಳ್ಳ್ಳುತ್ತಿದ್ದಾರೆ ಎನ್ನುವ ಮಾಹಿತಿ ಇದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ತಾಲೂಕಿನಲ್ಲಿ ಯಾವುದೇ ಕೆಲಸಗಳನ್ನು ಮಾಡುತ್ತಿಲ್ಲ. ಇಲಾಖೆ ಕಾಮಗಾರಿ ತೃಪ್ತಿ ತಂದಿಲ್ಲ. ತಕ್ಷಣ ನಡೆದಿರುವ ಕಾಮಗಾರಿಗಳ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ತಾಪಂ ಇಒಗೆ ಸೂಚಿಸಿದರು. ತಾಲೂಕಿನಲ್ಲಿ ಕಾಡು ಪ್ರಾಣಿಗಳ ಕಾಟ ಹೆಚ್ಚುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ರೈತರೊಂದಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸಬೇಕಾಗಿದೆ. ತಾಲೂಕು ಆಸ್ಪತ್ರೆಯಲ್ಲಿ ಶೌಚಗೃಹಗಳ ಸೂಕ್ತ ನಿರ್ವಹಣೆ ಆಗಬೇಕು. ಹೊಸ ಶೌಚಾಲಯಗಳ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಿ ಎಂದು ತಿಳಿಸಿದರು.
ತಾಲೂಕಿನಲ್ಲಿ ಕೆರೆಕಟ್ಟೆಗಳ ಜಾಗ ಒತ್ತುವರಿ ಮಾಡಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ. ತಕ್ಷಣ ಸರ್ವೆ ಮಾಡಿಸಿ ಒತ್ತುವರಿ ತೆರವುಗೊಳಿಸುವಂತೆ ಸೂಚಿಸಿದರು. ನಗರದ ಸುತ್ತಮುತ್ತಲಿನ ಪ್ರದೇಶದಲ್ಲಿ ಗಾಂಜಾ ಹಾವಳಿ ಮಿತಿಮೀರಿದೆ. ಹೊಸ ಬಾರುಗಳು ತಲೆ ಎತ್ತುತ್ತಿವೆ. ಹೊಸ ಬಾರ್‌ಗಳಿಗೆ ಅನುಮತಿ ನೀಡುವ ಮುನ್ನ ನನ್ನ ಗಮನಕ್ಕೆ ತನ್ನಿ ಎಂದು ತಿಳಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ, ಸಂಸದ ಸುನಿಲ್ ಬೋಸ್, ತಹಸೀಲ್ದಾರ್ ಸ್ಮಿತಾ ರಾಮು, ತಾಪಂ ಇಒ ಜರಾಲ್ಡ್ ರಾಜೇಶ್, ಕುರಹಟ್ಟಿ ಮಹೇಶ್, ಚೆನ್ನಪ್ಪ, ಡಿವೈಎಸ್ಪಿ ಧಮೇರ್ಂದ್ರ, ದೇವಸ್ಥಾನದ ಇಒ ಕೃಷ್ಣ, ನಗರಸಭೆ ಆಯುಕ್ತ ಬಸವರಾಜ್, ಸರ್ಕಲ್ ಇನ್ಸ್ಪೆಕ್ಟರ್ ಸಿಎಂ ರವೀಂದ್ರ ಮತ್ತು ತಾಲೂಕಿನ ಅಧಿಕಾರಿಗಳು ಹಾಜರಿದ್ದರು.
ತಡವಾಗಿ ಬಂದ ಜನಪ್ರತಿನಿಧಿಗಳು, ಮೊಬೈಲ್‌ನಲ್ಲೇ ಮುಳುಗಿದ ಅಧಿಕಾರಿಗಳು
ವರುಣ ಮತ್ತು ನಂಜನಗೂಡು ವಿಧಾನಸಭಾ ಕ್ಷೇತ್ರಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧಿಕಾರಿಗಳು ಮೊಬೈಲ್‌ನಲ್ಲಿಯೇ ಮುಳುಗಿರುವುದು ಕಂಡುಬಂತು. ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿಯನ್ನು ಪರಿಶೀಲಿಸುತ್ತಿದ್ದ ವೇಳೆ ಹಿಂದೆ ಕುಳಿತ್ತಿದ್ದ ಅಧಿಕಾರಿಗಳು ಮೊಬೈಲ್ ನೋಡುವುದರಲ್ಲಿ ತಲ್ಲೀನರಾಗಿದ್ದರು. ಇದರ ಜತೆಗೆ 10.30ಕ್ಕೆ ನಿಗದಿಯಾಗಿದ್ದ ಸಭೆ ಆರಂಭವಾಗುವ ಹೊತ್ತಿಗೆ 12.30 ಆಗಿತ್ತು. ಶಾಸಕ ದರ್ಶನ್ ಧ್ರುವನಾರಾಯಣ ಎರಡು ಗಂಟೆ ತಡವಾಗಿ ಆಗಮಿಸಿದರೆ, ನಂತರ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ 1.30ಕ್ಕೆ ಆಗಮಿಸಿದರು. ಸಂಸದ ಸುನೀಲ್ ಬೋಸ್ ಆಗಮಿಸಿದಾಗ ಗಂಟೆ 4.30 ಆಗಿತ್ತು.