ಕನಕದಾಸನಗರ ವಿಶ್ವಪ್ರಜ್ಞ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಪ್ರೊ.ಮೈಸೂರು ಕೃಷ್ಣಮೂರ್ತಿ, ಅಂಶಿ ಪ್ರಸನ್ನಕುಮಾರ್, ಡಾ.ಸ್ವರ್ಶಾ ಶೆಣೈ, ಕೆ.ಎಂ.ಮಹೇಂದ್ರ ಇತರರಿದ್ದರು.
ಮೈಸೂರು: ಬಹು ಸಂಸ್ಕೃತಿ ಉಳಿದರೆ ಭಾರತ ಉಳಿಯುತ್ತದೆ ಎಂದು ಜಾನಪದ ವಿದ್ವಾಂಸ ಪ್ರೊ.ಮೈಸೂರು ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ಕನಕದಾಸ ನಗರದ ವಿಶ್ವಪ್ರಜ್ಞ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾಷೆ ಉಳಿಸಿಕೊಳ್ಳುವುದು ಎಂದರೆ ಅದರೊಳಗಿನ ಸಂಸ್ಕೃತಿ ಉಳಿಸಿಕೊಳ್ಳೋದು. ಈ ರೀತಿಯ ಬಹು ಸಂಸ್ಕೃತಿ ಉಳಿಯಬೇಕು ಎಂದರು.
ಒಂದು ಭಾಷೆಯನ್ನು ಕಲಿಯಬೇಕಾದರೆ ಮತ್ತೊಂದು ಭಾಷೆಯನ್ನು ಬಿಡಬೇಕು ಎಂದಿಲ್ಲ. ಮಾತೃಭಾಷೆಯ ಜತೆಗೆ ಬೇರೆ ಭಾಷೆಗಳನ್ನು ಕಲಿಯಿರಿ ಎಂದು ಸಲಹೆ ಮಾಡಿದರು. ನಮ್ಮದು ವೈವಿಧ್ಯತೆಯಲ್ಲಿ ಏಕತೆ ಇರುವ ದೇಶ. ಹೀಗಾಗಿ ವೈವಿಧ್ಯತೆ ನಾಶವಾದರೆ ಸ್ವಾತಂತ್ರ್ಯ ನಾಶವಾಗುತ್ತದೆ ಎಂದು ಎಚ್ಚರಿಸಿದರು.
ಕನ್ನಡಿಗರು ಕರ್ನಾಟಕ ಅಥವಾ ಭಾರತಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಬೇಕು. ಏಕೆಂದರೆ ಎಲ್ಲೆಡೆ ಕನ್ನಡಿಗರು ದುಡಿಯುತ್ತಿದ್ದಾರೆ. ರಾಮಾಯಣದಲ್ಲಿ ಬರುವ ಹನುಮ, ಮಹಾಭಾರತದಲ್ಲಿ ಬರುವ ಕುಂತಿ ಕರ್ನಾಟಕದವರು. ಸಿಂಧು ನದಿಯ ನಾಗರಿಕತೆ ಪತ್ತೆ ಮಾಡಿದ ಕಣ್ಣನ್ ಕನ್ನಡಿಗ. ಸಂಗೀತಕ್ಕೆ ಕರ್ನಾಟಕ ಸಂಗೀತ ಎಂದೇ ಹೇಳಲಾಗುತ್ತದೆ. ಇದು ನಮ್ಮ ಕನ್ನಡಕ್ಕೆ ಇರುವ ತಾಕತ್ತು ಎಂದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಕಲಾಸ್ಪರ್ಶ ಪ್ರದರ್ಶಕ ಕಲೆಗಳ ಕೇಂದ್ರದ ನಿರ್ದೇಶಕಿ ಡಾ.ಸ್ಪರ್ಶಾ ಶೆಣೈ, ಪ್ರಾಂಶುಪಾಲ ಕೆ.ಎಂ.ಮಹೇಂದ್ರ, ಕವಿ ಬಸಪ್ಪ ಸಿ. ಸಾಲುಂಡಿ, ಸಮರ್ಥ ಜ್ಞಾನಾಶ್ರಯ ಚಾರಿಟಬಲ್ ಟ್ರಸ್ಟಿನ ಸಂಸ್ಥಾಪಕ ಎಚ್.ಸಿ.ಸುನಿಲ್ ರಾಜ್, ಆಡಳಿತಾಧಿಕಾರಿ ಎಂ.ಆರ್. ಸುಧೀಂದ್ರ ಇದ್ದರು.