ಹುಣಸೂರು: ಸಂಘಟಿತ ಪ್ರಯತ್ನವಿದ್ದಲ್ಲಿ ತಾವು ಬೆಳೆದ ಬೆಳೆಗಳಿಗೆ ಪ್ರೊಡ್ಯೂಸರ್ ಕಂಪನಿಯ ಮೂಲಕ ರೈತ ಮಹಿಳೆಯರ ಉತ್ತಮ ಬೆಲೆ ಪಡೆಯಲು ಸಾಧ್ಯವಿದೆ ಎಂದು ತಾಲೂಕು ಪಂಚಾಯಿತಿ ಕಾರ್ ನಿರ್ವಹಣಾಧಿಕಾರಿ ಕೆ.ಹೊಂಗಯ್ಯ ಅಭಿಪ್ರಾಯಪಟ್ಟರು.
ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಸಂಜೀವಿನಿ ಮತ್ತು ಎನ್‌ಆರ್‌ಎಲ್‌ಎಂ ಯೋಜನೆಯಡಿ ಸ್ಥಾಪಿಸಿರುವ ಕಲ್ಪವೃಕ್ಷ ಸಂಜೀವಿನಿ ಮಹಿಳಾ ಕಿಸಾನ್ ಪ್ರೊಡ್ಯೂಸರ್ ಕಂಪನಿಯ 3ನೇ ವರ್ಷದ ವಾರ್ಷಿಕ ಸಾಮಾನ್ಯಸಭೆ ಉದ್ಘಾಟಿಸಿ ಮಾತನಾಡಿದರು. ಕೃಷಿಯಲ್ಲಿ ಆಧುನಿಕತೆಯ ಸ್ಪರ್ಶ ಅಗತ್ಯ. ನೂತನ ತಂತ್ರಜ್ಞಾನಗಳಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ. ಕಲ್ಪವೃಕ್ಷ ಸಂಜೀವಿನಿ ಕಿಸಾನ್ ಕಂಪನಿಯ ಮೂಲ ಉದ್ದೇಶ ರೈತ ಮಹಿಳೆಯರಿಗೆ ಲಾಭ ತಂದುಕೊಡುವುದು ಮತ್ತು ಸೂಕ್ತ ಮಾರುಕಟ್ಟೆ ಕಲ್ಪಿಸುವುದಾಗಿದೆ. ನೀವು ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ಮತ್ತು ದರವನ್ನು ನೀಡುವಲ್ಲಿ ಪ್ರೊಡ್ಯೂಸರ್ ಕಂಪನಿ ಪ್ರಮುಖ ಪಾತ್ರವಹಿಸುತ್ತದೆ. ನಿಮ್ಮ ದುಡಿಮೆ ಸಂಘಟನಾತ್ಮಕವಾಗಿದ್ದಲ್ಲಿ ಮಾತ್ರ ಇದೆಲ್ಲವೂ ಸಾಧ್ಯ ಎಂದು ಹೇಳಿದರು.
ಸಂಜೀವಿನಿ ಕಾರ್ಯಕ್ರಮದ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಮಂಜುಳಾ ನರಗುಂದ ಮಾತನಾಡಿ, ಪ್ರೊಡ್ಯೂಸರ್ ಕಂಪನಿಯಿಂದ ಜಿಲ್ಲೆಯಲ್ಲಿ ಅರಿಶಿನ, ಬಾಳೆ, ರಾಗಿ ಮತ್ತು ಜೋಳದ ಬೆಳೆಗಳನ್ನು ಖರೀದಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಇಷ್ಟೇ ಅಲ್ಲದೆ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಲು ಕಂಪನಿಯು ನಿರ್ಧರಿಸಿದ್ದು, ರಾಗಿಹಿಟ್ಟು, ಮಸಾಲೆ ಪೌಡರ್, ದನಿಯಾ ಪುಡಿ ಹೀಗೆ ವಿವಿಧ ಮಸಾಲೆ ಪದಾರ್ಥಗಳನ್ನು ತಯಾರಿಸಿ ಬ್ರ್ಯಾಂಡ್ ನೀಡಿ ಪ್ಯಾಕಿಂಗ್ ವ್ಯವಸ್ಥೆ ಮಾಡಲು ಕ್ರಮ ವಹಿಸಲಾಗಿದೆ. ಒಂದು ಸಾವಿರ ಷೇರುದಾರರನ್ನು ಹುಣಸೂರು ಶಾಖೆಯು ಹೊಂದಿದ್ದು, ಜಿಲ್ಲೆಯಲ್ಲಿ ನಂಜನಗೂಡು ಮತ್ತು ಎಚ್.ಡಿ.ಕೋಟೆಗಳಲ್ಲಿ ಕಂಪನಿ ಸ್ಥಾಪಿಸಲಾಗಿದೆ. ರಾಜ್ಯದಲ್ಲಿ ಒಟ್ಟು 60 ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ. ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಯಲ್ಲಿ ಹೆಚ್ಚಿನ ಆಸ್ಥೆ ವಹಿಸಬೇಕಿದೆ ಎಂದು ವಿವರಿಸಿದರು.
ಕಂಪನಿ ಅಧ್ಯಕ್ಷೆ ಎಚ್.ಕೆ.ಸವಿತಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಿಇಒ ಎಚ್.ಪಿ.ಗುಣಶೇಖರ 202526ನೇ ಸಾಲಿನ ವಾರ್ಷಿಕ ವರದಿ ಹಾಗೂ ಆಡಿಟ್ ವರದಿ ಮಂಡಿಸಿಸಿದರು. ಬಳಿಕ 2026-27ನೇ ಸಾಲಿನ ಕಾರ್ಯಯೋಜನೆ ಮಂಡಿಸಿದರು. ಕಿಯಾನ್ ಅಗ್ರಿಟೆಕ್ ಕಂಪನಿಯ ಪ್ರತಿನಿಧಿ ಪ್ರದೀಪ್ ಷೇರುದಾರರೊಂದಿಗೆ ಬಾಳೆ ಬೆಳೆ ಬೆಳೆಯುವ ವಿಧಾನ ಹಾಗೂ ಬೆಳೆದ ಬಾಳೆಹಣ್ಣುಗಳನ್ನು ಖರೀದಿಸುವ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದರು.
ಸಭೆಯಲ್ಲಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜು, ಪಶುಸಂಗೋಪನಾ ಇಲಾಖೆಯ ಡಾ.ನಾಗರಾಜು, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಶಂಕರ್, ತಾಪಂ ಆಡಳಿತಾಧಿಕಾರಿ ಹರಿಣಿ, ಕಂಪನಿ ನಿರ್ದೇಶಕರಾದ ಗೀತಾ, ಎಲಿಜಬೆತ್ ರಾಣಿ, ಮಂಗಳಗೌರಿ, ರೂಪಾ, ವಸಂತಮ್ಮ, ಶಾನ್ವಾಜ್, ಶಿವಮ್ಮ ಹಾಗೂ ಸಾಕಮ್ಮ, ಅಕೌಂಟೆಂಟ್ ಮಹೇಶ್, ಮತ್ತು ಫರಹತ್ ಬಾನು ಸೇರಿದಂತೆ ಕಂಪನಿಯ ಷೇರುದಾರರು ಹಾಗೂ ಸಂಜೀವಿನಿ ಒಕ್ಕೂಟದ ಎಂಬಿಕೆ, ಎಲ್‌ಸಿಆರ್‌ಪಿ, ಕೃಷಿ ಪಶು ಸಖಿಗಳು, ಡಿಇಒ, ಬಿಆರ್‌ಪಿಇಪಿ, ಐಎಫ್‌ಸಿ ಹಾಗೂ ಸ್ವೀಪ್ ಪ್ರತಿನಿಧಿಗಳು ಉಪಸ್ಥಿತರಿದ್ದರು.
-