ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳ ಭರ್ತಿಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಎಐಡಿವೈಒನಿಂದ ನಗರದಲ್ಲಿ ಶುಕ್ರವಾರ ಸಹಿ ಸಂಗ್ರಹ ಅಭಿಯಾನ ನಡೆಯಿತು. ಟಿ.ಆರ್.ಸುನೀಲ್, ರಣಜಿತ್, ಪೂರ್ಣಿಮಾ ಇತರರು ಇದ್ದರು. 
ಮೈಸೂರು

ಖಾಲಿ ಹುದ್ದೆಗಳ ಭರ್ತಿಗೆ ಒತ್ತಾಯಿಸಿ ಎಐಡಿವೈಒನಿಂದ ಸಹಿ ಸಂಗ್ರಹ

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು
  • ಅಕ್ರಮ ತಡೆಗಟ್ಟಲು ರಾಜ್ಯ ಸರ್ಕಾರ ಹೋರಾಟ ಸಮಿತಿ ಶಿಫಾರಸುಗಳನ್ನು ಜಾರಿಗೊಳಿಸಬೇಕು
ಮೈಸೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳ ಭರ್ತಿಗೆ ಕ್ರಮಕೈಗೊಳ್ಳಬೇಕು. ಅಲ್ಲದೆ, ನೇಮಕಾತಿಯಲ್ಲಿನ ಅಕ್ರಮ ತಡೆಗಟ್ಟಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ)ನಿಂದ ನಗರದಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಯಿತು.
ಎಐಡಿವೈಒ ಜಿಲ್ಲಾ ಸಮಿತಿಯಿಂದ ನಗರದ ಸಂಗಮ್ ಚಿತ್ರಮಂದಿರದ ಬಳಿ ಸಹಿ ಸಂಗ್ರಹ ಅಭಿಯಾನ ನಡೆಸಿದ ಕಾರ್ಯಕರ್ತರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು. ಎಲ್ಲ ನೇಮಕಾತಿಗಳ ವಯೋಮಿತಿಯಲ್ಲಿ ಕನಿಷ್ಠ 5 ವರ್ಷಗಳ ಸಡಿಲಿಕೆ ನೀಡಬೇಕು. ನೇಮಕಾತಿ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಇರಬೇಕು. ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿದರು.
ಕೆಪಿಎಸ್‌ಸಿಯಲ್ಲಿನ ಅಕ್ರಮ ತಡೆಗಟ್ಟಲು ರಾಜ್ಯ ಸರ್ಕಾರ ಹೋರಾಟ ಸಮಿತಿ ಶಿಫಾರಸುಗಳನ್ನು ಜಾರಿಗೊಳಿಸಬೇಕು. ಗುತ್ತಿಗೆ ವ್ಯವಸ್ಥೆ ರದ್ದುಗೊಳಿಸಬೇಕು. ಎಲ್ಲ ಹುದ್ದೆಗಳಿಗೂ ಕಾಯಂ ನೇಮಕಾತಿ ಮಾಡಬೇಕು. ದೇಶಾದ್ಯಂತ ಗಿಗ್ ಕಾರ್ಮಿಕರನ್ನು ಕಾರ್ಮಿಕರೆಂದು ಪರಿಗಣಿಸಿ ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆ ಖಚಿತಪಡಿಸಬೇಕು ಎಂದು ಒತ್ತಾಯಿಸಿದರು.
ಉದ್ಯೋಗಾವಕಾಶ ದೊರೆಯುವವರೆಗೆ ಗೌರವಯುತ ಜೀವನ ನಡೆಸಲು ಸೂಕ್ತ ನಿರುದ್ಯೋಗ ಭತ್ಯೆ ನೀಡಬೇಕು. ಸರ್ಕಾರಿ ಸಂಸ್ಥೆಗಳ ಖಾಸಗೀಕರಣ ನೀತಿ ರದ್ದುಗೊಳಿಸಬೇಕು. ನೇಮಕಾತಿಗಳಲ್ಲಿ ದುಬಾರಿ ಪರೀಕ್ಷಾ ಶುಲ್ಕ ಕೈಬಿಡಬೇಕು. ಪರೀಕ್ಷಾರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಎಐಡಿವೈಒ ಜಿಲ್ಲಾ ಸಮಿತಿ ಅಧ್ಯಕ್ಷ ಟಿ.ಆರ್.ಸುನೀಲ್ ಮಾತನಾಡಿ, ದೇಶದಲ್ಲಿ ನಿರುದ್ಯೋಗ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೇಂದ್ರ ಸರ್ಕಾರದ 78 ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ 9.78 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ರಾಜ್ಯ ಸರ್ಕಾರದ ಇಲಾಖೆಗಳಲ್ಲೂ 2.85 ಲಕ್ಷ ಹುದ್ದೆಗಳು ಖಾಲಿ ಇವೆ. 2014ರಲ್ಲಿ ಬಿಜೆಪಿ ಪ್ರತಿ ವರ್ಷ ಯುವಜನರಿಗೆ 2 ಕೋಟಿ ಉದ್ಯೋಗ ಒದಗಿಸುವುದಾಗಿ ಭರವಸೆ ನೀಡಿತ್ತು. ಆದರೆ, 12 ವರ್ಷ ಕಳೆದರೂ ಲಕ್ಷ ಹುದ್ದೆಗಳನ್ನೂ ಭರ್ತಿ ಮಾಡಿಲ್ಲ. ರಾಜ್ಯದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಂದು ಲಕ್ಷ ಹುದ್ದೆ ಭರ್ತಿ ಮಾಡುವ ಭರವಸೆ ನೀಡಿದ್ದರು. ಆದರೆ, ಈವರೆಗೆ ನೇಮಕಾತಿ ಮಾಡಲು ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭ್ರಷ್ಟಾಚಾರ, ಪ್ರಶ್ನೆಪತ್ರಿಕೆ ಸೋರಿಕೆ, ಉದ್ಯೋಗಿಗಳ ವಜಾ ಮತ್ತು ಸರ್ಕಾರಿ ಇಲಾಖೆಗಳ ಖಾಸಗೀಕರಣ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ. ಪ್ರತಿಯೊಬ್ಬರಿಗೂ ಅವರವರ ಶಕ್ತಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಉದ್ಯೋಗ ಒದಗಿಸಬೇಕಿರುವುದು ಸರ್ಕಾರದ ಕರ್ತವ್ಯ ಎಂದರು.
ನಿರುದ್ಯೋಗ ಮತ್ತು ತೀವ್ರ ಆರ್ಥಿಕ ಬಿಕ್ಕಟ್ಟಿನಿಂದಾಗಿ ಮಾನಸಿಕ ಖಿನ್ನತೆ, ಕುಟುಂಬ ಸಂಬಂಧಗಳಲ್ಲಿ ಬಿರುಕು ತತ್ಪರಿಣಾಮವಾಗಿ ಯುವಜನರಲ್ಲಿ ಮಾದಕ ವ್ಯಸನಗಳು, ಅಪರಾಧ ಪ್ರವೃತ್ತಿಗಳು ವೇಗವಾಗಿ ಹೆಚ್ಚುತ್ತಿವೆ. ಇದಲ್ಲದೆ ಪ್ರತಿ ವರ್ಷ ಸಾವಿರಾರು ಯುವಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. 2023ರಲ್ಲಿ ಯುವಜನರ ಆತ್ಮಹತ್ಯೆಗಳ ಪ್ರಮಾಣ 14,234ಕ್ಕೆ ಹೆಚ್ಚಿದೆ. ಹೀಗಾಗಿ ಈ ಸಮಸ್ಯೆಗಳಿಂದ ಯುವಜನರನ್ನು ಮುಕ್ತಗೊಳಿಸಲು ಬಲಿಷ್ಠ ಹೋರಾಟ ಕಟ್ಟಬೇಕು ಎಂದು ಹೇಳಿದರು. 
ಕಾರ್ಯದರ್ಶಿ ಎಸ್.ಸುಮಾ, ಜಿಲ್ಲಾ ಸಮಿತಿಯ ಸದಸ್ಯರಾದ ರಣಜಿತ್, ಪೂರ್ಣಿಮಾ ಇತರರು ಇದ್ದರು.