ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ವ್ಯಾಪ್ತಿಯಲ್ಲಿ ಬರುವ ಆಸ್ಪತ್ರೆಗಳ ಕುರಿತು ಮಂಗಳವಾರ ಅಧಿಕಾರಿಗಳ ಸಭೆ
- ಶಾಸಕ ಕೆ.ಹರೀಶ್‌ಗೌಡ ಮಾಹಿತಿ
- 8 ಕೋಟಿ ರೂ. ಬೆಲೆಬಾಳುವ ಎಂಆರ್‌ಐ ಸ್ಕ್ಯಾನರ್‌ಗಳನ್ನು ಸೂಪರ್ ಸ್ಪೆಷಾಲಿಟಿ ಹಾಗೂ ಕೆ.ಆರ್.ಆಸ್ಪತ್ರೆಯಲ್ಲಿ ಅಳವಡಿಕೆ
ಮೈಸೂರು: ನಗರದ ಕೆ.ಆರ್.ಆಸ್ಪತ್ರೆಯಲ್ಲಿರುವ ಚೆಲುವಾಂಬ ಮಕ್ಕಳ ಆಸ್ಪತ್ರೆಯಲ್ಲಿ ‘ಐಸಿಯು ಕ್ರಿಟಿಕಲ್ ಕೇರ್’ ವಿಭಾಗ ತೆರೆಯಲಾಗುವುದು ಎಂದು ಶಾಸಕ ಕೆ.ಹರೀಶ್‌ಗೌಡ ತಿಳಿಸಿದರು.
ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ವ್ಯಾಪ್ತಿಯಲ್ಲಿ ಬರುವ ಆಸ್ಪತ್ರೆಗಳ ಕುರಿತು ಮಂಗಳವಾರ ಅಧಿಕಾರಿಗಳ ಸಭೆ ನಡೆಸಿ ಬಳಿಕ ಮಾತನಾಡಿದರು.
ಟ್ರಾಮಾ ಕೇರ್ ಸೆಂಟರ್ ವಿಚಾರದಲ್ಲಿ ಚೆಲುವಾಂಬ ಆಸ್ಪತ್ರೆಗೆ ಐಸಿಯು ಕ್ರಿಟಿಕಲ್ ಕೇರ್ ಬೇಕಾಗಿದೆ. ಸಂಸ್ಥೆಯ ಹಣದಲ್ಲಿ 56 ಲಕ್ಷ ರೂ. ವೆಚ್ಚದಲ್ಲಿ ಇದರ ನಿರ್ಮಾಣಕ್ಕೆ ತೀರ್ಮಾನ ಮಾಡಲಾಯಿತು ಎಂದು ತಿಳಿಸಿದರು.
ಕೋಟಕ್ ಮಹೀಂದ್ರ ಬ್ಯಾಂಕ್ ಸಿಎಸ್‌ಆರ್ ಅನುದಾನದಲ್ಲಿ ನೀಡಿರುವ 8 ಕೋಟಿ ರೂ. ಬೆಲೆಬಾಳುವ ಎಂಆರ್‌ಐ ಸ್ಕ್ಯಾನರ್‌ಗಳನ್ನು ಸೂಪರ್ ಸ್ಪೆಷಾಲಿಟಿ ಹಾಗೂ ಕೆ.ಆರ್.ಆಸ್ಪತ್ರೆಯಲ್ಲಿ ಅಳವಡಿಸಲಾಗುವುದು ಎಂದು ಹೇಳಿದರು.
ಮೈಸೂರಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆಯಾಗಿಲ್ಲ. ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸಿಸ್ ಸಮಸ್ಯೆಯಾಗಿತ್ತು, ಅದನ್ನೀಗ ಸರಿಪಡಿಸಲಾಗಿದೆ. ಇಲ್ಲಿನ ವೈದ್ಯರು ಬೇರೆ ಕಡೆ ಹೋಗುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ. ಕರ್ತವ್ಯದ ವೇಳೆಯಲ್ಲಿ ವೈದ್ಯರು ಬೇರೆ ಕಡೆ ಹೋಗೋದು ತಪ್ಪು.
ಆಪರೇಷನ್‌ಗೆ ರೋಗಿಯನ್ನು ಕಾಯಿಸುವುದು ಸರಿಯಲ್ಲ. ಲೇಸರ್ ಆಪರೇಷನ್‌ಗೆ ಪರಿಣಿತರ ಬೇಡಿಕೆ ಇದೆ. ಈ ಬಗ್ಗೆ ಸರ್ಕಾರದಿಂದ ಸೂಕ್ತ ಕ್ರಮ ವಹಿಸಲಾಗುತ್ತದೆ ಎಂದು ಪ್ರಶ್ನೆವೊಂದಕ್ಕೆ ಉತ್ತರಿಸಿದರು.
ತಿಂಗಳಿಗೆ ಸಾವಿರ ಜನರಿಗೆ ಡಯಾಲಿಸಿಸ್ ಮಾಡುವ ವ್ಯವಸ್ಥೆ ಇದೆ. ದಿನಕ್ಕೆ 150 ಡಯಾಲಿಸಿಸ್ ಮಾಡುವ ವ್ಯವಸ್ಥೆ ಇದೆ. ಕೆಆರ್ ಆಸ್ಪತ್ರೆಗೆ ಒಂದೇ ಗೇಟ್‌ನಲ್ಲಿ ಪ್ರವೇಶ ಕಲ್ಪಿಸುವುದು ಹಾಗೂ ಸಿಸಿ ಕ್ಯಾಮರಾ ಅಳವಡಿಕೆ ಬಗ್ಗೆ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು
ಸಭೆಯಲ್ಲಿ ಭದ್ರತೆ ಮತ್ತು ಸ್ವಚ್ಛತೆಯ ಬಗ್ಗೆ ಚರ್ಚೆ ಆಯಿತು. ಇದರ ಬಗ್ಗೆ ಹೆಚ್ಚು ಗಮನಹರಿಸುವಂತೆ ತಿಳಿಸಿದ್ದು, ಭದ್ರತಾ ವಿಭಾಗದಲ್ಲಿ ಮಹಿಳೆಯರು ಜಾಸ್ತಿ ಇದ್ದಾರೆ ಎಂಬುದನ್ನು ತಿಳಿಸಿದ್ದು, ಇನ್ನು ಮುಂದೆ ಪುರುಷರನ್ನು ಹೆಚ್ಚಿನ ಸಂಖ್ಯೆಯಲ್ಲಿ ಭದ್ರತೆಗೆ ಬಳಕೆ ಮಾಡಿಕೊಳ್ಳಲು ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಆಸ್ಪತ್ರೆಯ ಹೊರ ಆವರಣದಲ್ಲಿ ನಿರ್ಗತಿಕರು ಮಲಗುತ್ತಿದ್ದರು. ಭದ್ರತೆ ಬಲಪಡಿಸಿ ಹೊರಗಿನವರು ಮಲಗದಂತೆ ಕ್ರಮವಹಿಸಲು ತಿಳಿಸಿದ್ದು, ಹಣ ಕೇಳುವ ಸಿಬ್ಬಂದಿ ಬಗ್ಗೆ ದೂರು ನೀಡಿದರೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಕೆಆರ್ ಆಸ್ಪತ್ರೆಯಲ್ಲಿ ಸದ್ಯಕ್ಕೆ 1300 ಸಿಬ್ಬಂದಿ ಇದ್ದಾರೆ. ಖಾಲಿಯಿರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. ಆಸ್ಪತ್ರೆ ಕಟ್ಟಡದ ನವೀಕರಣ ಕಾಮಗಾರಿ ಕಳಪೆಯಾಗಿದ್ದರೆ ಬಿಲ್ ಕೊಡಲು ಶಿಫಾರಸು ಮಾಡಬಾರದು. ಮರು ಕಾಮಗಾರಿ ನಡೆಸಬೇಕೆಂದು ತಿಳಿಸಲಾಗಿದೆ ಎಂದು ಹೇಳಿದರು.
ಕೆಆರ್ ಆಸ್ಪತ್ರೆ, ಮೆಡಿಕಲ್ ಕಾಲೇಜು ಲ್ಯಾಂಡ್ ಸ್ಕೇಪಿಂಗ್‌ಗೆ ಅನುದಾನವನ್ನು ಲೋಕೋಪಯೋಗಿ ಇಲಾಖೆಯಿಂದ ಕೇಳಲಾಗಿದೆ ಎಂದರು
ಚೆಲುವಾಂಬ ಆಸ್ಪತ್ತೆಯಲ್ಲಿ ನಿತ್ಯ 25 ಹೆರಿಗೆಗಳು ಆಗುತ್ತಿವೆ. ಈ ಆಸ್ಪತ್ರೆ ಸೇರಿದಂತೆ ತಾಯಿ ಮಗು ಸಾವಿನ ಪ್ರಮಾಣ ಜಿಲ್ಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇಳಿಕೆ ಪ್ರಮಾಣದಲ್ಲಿ ಮೈಸೂರು ಜಿಲ್ಲೆ ಇಡೀ ರಾಜ್ಯದಲ್ಲಿ 2ನೇ ಸ್ಥಾನ ಪಡೆದಿದೆ. ಮುಂದಿನ ದಿನಗಳಲ್ಲಿ ತಾಯಿ ಮಗು ಸಾವಿನ ಪ್ರಮಾಣ ಶೂನ್ಯಕ್ಕಿಳಿಯುವ ವಿಶ್ವಾಸವಿದೆ ಎಂದು ತಿಳಿಸಿದರು.
ಮೈಸೂರು ವೈದ್ಯಕೀಯ ಕಾಲೇಜಿನ ಡೀನ್ ಡಾ.ದಾಕ್ಷಾಯಿಣಿ, ಕೆ.ಆರ್.ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಶೋಭಾ ಇನ್ನಿತರರಿದ್ದರು.
ಕಿದ್ವಾಯಿ ಆಸ್ಪತ್ರೆ ಕೆಲಸ ಪೂರ್ಣ
ನಗರದ ಕೆಆರ್‌ಎಸ್ ರಸ್ತೆಯಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಇದು ಉದ್ಘಾಟನೆಗೆ ಸಿದ್ಧವಾಗಿದ್ದು, ಅಗತ್ಯ ಉಪಕರಣ ವ್ಯವಸ್ಥೆ ಮಾಡಲಾಗುವುದು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮಯ ಪಡೆದು ಲೋಕಾರ್ಪಣೆ ಮಾಡಲಾಗುವುದು ಎಂದು ಹರೀಶ್‌ಗೌಡ ತಿಳಿಸಿದರು.