ಮೈಸೂರು ನಗರದ ಮಾನಸಗಂಗೋತ್ರಿ ಬಿ.ಎಂ.ಶ್ರೀ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ವಿಶ್ವಕವಿ ಕುವೆಂಪು’ ಕೃತಿಯನ್ನು ಲೇಖಕ ಅಗ್ರಹಾರ ಕೃಷ್ಣಮೂರ್ತಿ ಬಿಡುಗಡೆ ಮಾಡಿದರು. ಡಾ.ಜೆ.ಶಶಿಧರ ಪ್ರಸಾದ್, ಡಾ.ಎಂ.ನಂಜಯ್ಯ ಹೊಂಗನೂರು ಡಾ.ಕರೀಗೌಡ ಬೀಚನಹಳ್ಳಿ ಇದ್ದರು. 
ಮೈಸೂರು

ರಾಷ್ಟ್ರಕವಿ ಕುವೆಂಪು ದೇಶದ ಐಕಾನ್ : ಅಗ್ರಹಾರ ಕೃಷ್ಣಮೂರ್ತಿ ಬಣ್ಣನೆ

ಮೈಸೂರು: ರಾಷ್ಟ್ರಕವಿ ಕುವೆಂಪು ನಮ್ಮ ನಾಡಿನ ಹಾಗೂ ದೇಶದ ಐಕಾನ್ ಎಂದು ಲೇಖಕ ಅಗ್ರಹಾರ ಕೃಷ್ಣಮೂರ್ತಿ ಬಣ್ಣಿಸಿದರು.
ನಗರದ ಮಾನಸಗಂಗೋತ್ರಿ ಆವರಣದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ಕಿರಂ ಪ್ರಕಾಶನ ವತಿಯಿಂದ ಬುಧವಾರ ಆಯೋಜಿಸಿದ್ದ ಡಾ.ಕರೀಗೌಡ ಬೀಚನಹಳ್ಳಿ ರಚನೆಯ ‘ವಿಶ್ವಕವಿ ಕುವೆಂಪು’ ಕೃತಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾಡಿನ ಎಲ್ಲ ಕ್ಷೇತ್ರಗಳ ಮೇಲೂ ಕುವೆಂಪು ಪ್ರಭಾವ ಬೀರಿದ್ದಾರೆ. ಇಂದಿಗೂ ರಾಜ್ಯದ ಯಾವುದೇ ಭಾಗದಲ್ಲಿ ಕಾರ್ಯಕ್ರಮ ನಡೆದರೂ ಅವರ ರಚನೆಯ ಗೀತೆಯ ಮೂಲಕವೇ ಕಾರ್ಯಕ್ರಮ ಆರಂಭವಾಗುತ್ತದೆ. ರಾಜ್ಯದ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಕುವೆಂಪು ಅವರ ಭಾವಚಿತ್ರಗಳು ಕಾಣಸಿಗುತ್ತವೆ. ಕೆಲವರಿಗೆ ಅವರು ಯಾರು ಎಂಬುದು ತಿಳಿದಿರದಿದ್ದರೂ, ಅವರ ಮಾತುಗಳು, ವಿಚಾರಗಳು ಹಾಗೂ ಸಾಹಿತ್ಯ ನಾಡಿನ ಜನರಲ್ಲಿ ನಿರಂತರವಾಗಿ ಜಿನುಗುತ್ತಿವೆ ಎಂದು ಹೇಳಿದರು.
ಕುವೆಂಪು ಅವರನ್ನು ಕೇವಲ ಲೇಖಕ ಎಂದು ಪರಿಗಣಿಸುವುದು ಅವರಿಗೆ ಮಾಡುವ ಅಪಮಾನ. ಅವರೊಬ್ಬ ದಾರ್ಶನಿಕರು. ಕನ್ನಡ ನಾಡಿನ ಪ್ರತಿಯೊಬ್ಬರ ಸರ್ವಾಂಗೀಣ ಕ್ಷೇಮ ಮತ್ತು ಅಭಿವೃದ್ಧಿಯನ್ನು ಮನಸ್ಸಿನಲ್ಲಿಟ್ಟುಕೊಂಡು ತಮ್ಮ ಸಾಹಿತ್ಯ ಹಾಗೂ ವಿಚಾರಧಾರೆಯಲ್ಲಿ ಅದನ್ನು ವ್ಯಕ್ತಪಡಿಸಿದ್ದಾರೆ ಎಂದರು.
ನ್ಯಾಯಾಧೀಶರಾಗಿದ್ದ ಎ.ಜೆ. ಸದಾಶಿವ ಅವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಕುವೆಂಪು ಕುಲಪತಿಯಾಗಿದ್ದರು. ಆ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ನೌಕರರು ವಿವಿಧ ಕಾರಣಗಳಿಂದ ಮುಷ್ಕರ ನಡೆಸುತ್ತಿದ್ದರು. ಕಿಕ್ಕಿರಿದು ಘೋಷಣೆಗಳನ್ನು ಕೂಗುತ್ತಿದ್ದ ಪ್ರತಿಭಟನಾಕಾರರು, ಕುವೆಂಪು ಅವರು ಕಾರಿನಿಂದ ಬಂದು ಇಳಿದ ತಕ್ಷಣ ಘೋಷಣೆಗಳನ್ನು ನಿಲ್ಲಿಸಿ, ಇಬ್ಬದಿಗೆ ಸರಿದು ಅವರಿಗೆ ದಾರಿ ಮಾಡಿಕೊಟ್ಟ ಘಟನೆಯನ್ನು ಎ.ಜೆ. ಸದಾಶಿವ ಅವರು ಕಣ್ಣಾರೆ ಕಂಡಿದ್ದರು ಎಂದು ಹೇಳಿದರು.
ಕುವೆಂಪು ಅವರು ಬರೆಯದ ಪ್ರಕಾರವೇ ಇಲ್ಲ. ಅವರ ಸಾಹಿತ್ಯವನ್ನು ನಾವೆಲ್ಲರೂ ಓದಬೇಕು. ಅವರೊಂದಿಗೆ ನೇರವಾಗಿ ಸಂಪರ್ಕ ಹೊಂದುವ ಅರ್ಹತೆ ಇಲ್ಲದಿದ್ದರೂ, ಅವರ ವಿಚಾರಧಾರೆ, ಸಾಹಿತ್ಯ ಹಾಗೂ ಅವರು ಪ್ರತಿಪಾದಿಸಿದ ಮೌಲ್ಯಗಳೊಂದಿಗೆ ನಾವು ಸಂಪರ್ಕ ಹೊಂದಬೇಕು. ಕುವೆಂಪು ಪ್ರತಿಪಾದಿಸಿದ ಮಂತ್ರಮಾಂಗಲ್ಯ ಪದ್ಧತಿಯ ಮೂಲಕ ಸಾವಿರಾರು ಮದುವೆಗಳು ನಡೆದಿವೆ ಎಂದರು.
ಕುವೆಂಪು, ಗಾಂಧಿ ಸೇರಿದಂತೆ ಮಹನೀಯರನ್ನು ಆರಾಧಿಸುವುದು ಅಥವಾ ಪೂಜಿಸುವುದಕ್ಕಿಂತ, ಅವರ ವಿಚಾರಗಳು ಮತ್ತು ಆದರ್ಶಗಳೊಂದಿಗೆ ನಮ್ಮನ್ನು ನಾವು ಎಷ್ಟರ ಮಟ್ಟಿಗೆ ಸಂಪರ್ಕಿಸಿಕೊಳ್ಳುತ್ತೇವೆ ಎಂಬುದೇ ಅವರಿಗೆ ಹಾಗೂ ಅವರ ವ್ಯಕ್ತಿತ್ವ ಮತ್ತು ಸಾಹಿತ್ಯಕ್ಕೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಜೆ.ಶಶಿಧರ ಪ್ರಸಾದ್, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ.ಎಂ.ನಂಜಯ್ಯ ಹೊಂಗನೂರು ಹಾಗೂ ಕೃತಿಕಾರ ಡಾ.ಕರೀಗೌಡ ಬೀಚನಹಳ್ಳಿ ಇದ್ದರು.