ಹನಗೋಡಿಗೆ ಸಮೀಪದ ಕಾಳಬೋಚನಹಳ್ಳಿಯ ಬಾರಿಯಂಡ ಮನೆಯ ಕುಟುಂಬಸ್ಥರು ಹುತ್ತರಿ ಹಬ್ಬದಂದು ತಮ್ಮ ಭತ್ತದ ಗದ್ದೆಯಲ್ಲಿ ಧಾನ್ಯಲಕ್ಷ್ಮೀಯನ್ನು ಪೂಜಿಸಿ ಮನೆಗೆ ತಂದರು.
- ಕೊಡಗು ಜಿಲ್ಲೆಯಲ್ಲಿ ಆಚರಿಸುವ ಹುತ್ತರಿ (ಸುಗ್ಗಿ) ಹಬ್ಬ
ಹನಗೋಡು: ಕೊಡಗು ಜಿಲ್ಲೆಯಲ್ಲಿ ಆಚರಿಸುವ ಹುತ್ತರಿ (ಸುಗ್ಗಿ) ಹಬ್ಬವನ್ನು ಹನಗೋಡು ಭಾಗದಲ್ಲಿ ನೆಲೆಸಿರುವ ಕೊಡಗು ಜನತೆ ಸಂಭ್ರಮದಿಂದ ಆಚರಿಸಿದರು.
ಹನಗೋಡು ಹೋಬಳಿ ವ್ಯಾಪ್ತಿಯಲ್ಲಿರುವ ಬಿಲ್ಲೇನಹೊಸಳ್ಳಿ ಕೆ.ಜಿ.ಹೆಬ್ಬನಕುಪ್ಪೆ, ಕಾಳಬೋಚನಹಳ್ಳಿ, ಬಿ,ಆರ್.ಕಾವಲ್, ಉಡುವೇಪುರ, ಕಿಕ್ಕೇರಿಕಟ್ಟೆ, ನೇರಳಕುಪ್ಪೆ ಸೇರಿದಂತೆ ಇತರ ಗ್ರಾಮಗಳಲ್ಲಿ ಕೊಡಗಿನಿಂದ ಬಂದು ನೆಲೆಸಿರುವ ಜನರು ಗುರುವಾರ ರಾತ್ರಿ ಹುತ್ತರಿ ಹಬ್ಬದಲ್ಲಿ ತಾವು ಬೆಳೆದಿರುವ ಭತ್ತದ ತೆನೆಯನ್ನು ತಂದು ಪೂಜಿಸಿ, ಧಾನ್ಯಲಕ್ಷ್ಮೀಯನ್ನು ಮನೆಗೆ ತುಂಬಿಸಿಕೊಂಡರು.
ಈ ಹಬ್ಬದಲ್ಲಿ ತಮ್ಮ ಕೊಡಗು ಸಾಂಪ್ರದಾಯಿಕ ಉಡುಗೆ-ತೊಡುಗೆ ತೊಟ್ಟು ಕಳಸದೊಂದಿಗೆ ಕತ್ತಿ ಕೋವಿಗಳನ್ನು ಪೂಜಿಸಿ, ಪುಲಿ ಪುಲಿ ದೇವಾ ಎಂದು ಜಯ ಘೋಷಣೆಯೊಂದಿಗೆ ಪಟಾಕಿ ಸಿಡಿಸಿ ಹಾಗೂ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಗದ್ದೆಯಲ್ಲಿ ಹೊಸದಾಗಿ ಬೆಳೆದ ಭತ್ತವನ್ನು ಪೂಜಿಸಿದರು. ಮನೆಗೆ ತೆನೆ ಸಮೇತ ಧಾನ್ಯವನ್ನು ತಂದು ಪೂಜಿಸಿ, ವಿಶೇಷ ಅಡುಗೆ ತಯಾರಿಸುವುದೆ ವಿಶೇಷ ಎಂದು ಹಬ್ಬದ ಹಿರಿಮೆಯನ್ನು ಬಾರಿಯಂಡ ಮನೆಯ ಮುಖ್ಯಸ್ಥ ಜೋಯಪ್ಪ ತಿಳಿಸಿದರು.