imprisonment 
ಮೈಸೂರು

ಪತಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ

ಅವಿನಾಶ್ ಜೈನಹಳ್ಳಿ
ಹೆಚ್ಚಿನ ವರದಕ್ಷಿಣೆ ತರುವಂತೆ ಕಿರುಕುಳ ನೀಡಿ ಗೃಹಿಣಿ ಸಾವಿಗೆ ಕಾರಣರಾದ ಪತಿಗೆ ಮೈಸೂರಿನ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲದ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ವಿಜಯನಗರ 1ನೇ ಹಂತದ ನಿವಾಸಿ ಎಚ್.ಆರ್.ಲೋಕೇಶ್ ಶಿಕ್ಷೆಗೆ ಗುರಿಯಾದವ. ಈತ ಎನ್.ಎಸ್.ಉಷಾರಾಣಿ ಸಾವಿಗೆ ಕಾರಣನಾಗಿದ್ದ.
ಏನಿದು ಪ್ರಕರಣ?:
ಎಚ್.ಆರ್.ಲೋಕೇಶ್ ಮತ್ತು ಎನ್.ಎಸ್.ಉಷಾರಾಣಿ 2011ರ ನ. 14 ರಂದು ಮದುವೆಯಾಗಿದ್ದರು. ಈ ವೇಳೆ ಲೋಕೇಶ್ 2 ಲಕ್ಷ ರೂ.ನಗದು, 100 ಗ್ರಾಂ ಚಿನ್ನಾಭರಣ ಮತ್ತು ಬೆಳ್ಳಿಯ ಪದಾರ್ಥ ವರದಕ್ಷಿಣೆಯಾಗಿ ಪಡೆದಿದ್ದರು. ಅಷ್ಟಕ್ಕೆ ತೃಪ್ತಿಪಡದ ಲೋಕೇಶ್, ಬಿಸಿನೆಸ್ ಮಾಡಲು 50,000 ರೂ. ಹೆಚ್ಚಿನ ವರದಕ್ಷಿಣೆಯಾಗಿ ತರುವಂತೆ ಮೃತಳಿಗೆ ಕಿರುಕುಳ ನೀಡಿ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದ. ಈ ಹಿಂಸೆಯನ್ನು ತಾಳಲಾರದೆ ಉಷಾರಾಣಿ 2014ರಲ್ಲಿ ತಾನು ವಾಸವಾಗಿದ್ದ ಮನೆಯ ಬೆಡ್ ರೂಂನ ಸೀಲಿಂಗ್ ಫ್ಯಾನ್‌ಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದರು.
ಈ ಹಿಂದಿನ ಸಹಾಯಕ ಪೊಲೀಸ್ ಆಯುಕ್ತ ಕೆ.ಎನ್.ಮಾದಯ್ಯ ತನಿಖೆ ಪೂರೈಸಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶೆ ಕೆ.ಎನ್.ರೂಪಾ ತೀರ್ಪು ನೀಡಿದ್ದಾರೆ. ಈ ಹಿಂದಿನ ಸರ್ಕಾರಿ ಅಭಿಯೋಜಕ ಬಿ.ಈ.ಯೋಗೇಶ್ವರ ಹಾಗೂ ಹಾಲಿ ಸರ್ಕಾರಿ ಅಭಿಯೋಜಕ ಎ.ಎನ್.ಮಧು ವಾದ ಮಂಡಿಸಿದ್ದರು.