- ದಂಪತಿಗೆ ಮಕ್ಕಳಿರಲಿಲ್ಲ. ಹಣಕಾಸು, ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು
- ನಿತ್ಯಾನಂದರ ಅಣ್ಣ, ಮೃತದೇಹವನ್ನು ನೋಡಿದಾಗ ಕುತ್ತಿಗೆಯಲ್ಲಿ ಬಿಗಿದ ಗುರುತು ಇದ್ದುದ್ದನ್ನು ಕಂಡು ಅನುಮಾನಗೊಂಡು ಪೊಲೀಸರಿಗೆ ದೂರು
ಮೈಸೂರು: ನಗರದ ಕುವಂಪುನಗರದಲ್ಲಿ ಪತ್ನಿಯೇ ಪತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಕುವೆಂಪುನಗರದ ಹುಡ್ಕೊ ಬಡಾವಣೆಯ ನಿತ್ಯಾನಂದ(50) ಮೃತಪಟ್ಟಿದ್ದು, ಪತ್ನಿ ಸುಶೀಲಾಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ನಿತ್ಯಾನಂದ ಹುಣಸೂರಿನ ಕಾರು ಶೋರೂಂನಲ್ಲಿ ಕೆಲಸ ಮಾಡುತ್ತಿದ್ದರೆ, ಪತ್ನಿ ಸುಶೀಲಾ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದರು. 10 ವರ್ಷದ ಹಿಂದೆ ಮದುವೆಯಾಗಿದ್ದ ದಂಪತಿಗೆ ಮಕ್ಕಳಿರಲಿಲ್ಲ. ಹಣಕಾಸು, ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಇತ್ತೀಚೆಗೆ ಸಾಂಸಾರಿಕ ಕಲಹ ಹೆಚ್ಚಾಗಿತ್ತು. ನಿತ್ಯಾನಂದ ಭಾನುವಾರ ರಾತ್ರಿ ಸ್ನೇಹಿತರೊಂದಿಗೆ ಕುಡಿದು ಬಂದಿದ್ದ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಸೋಮವಾರ ಬೆಳಗ್ಗೆ ಎಷ್ಟು ಸಮಯವಾದರೂ ಮನೆ ಬಾಗಿಲು ತೆರೆಯದೆ ಇದ್ದಾಗ ಅಕ್ಕಪಕ್ಕದವರು ನಿತ್ಯಾನಂದ, ಸುಶೀಲಾ ಇಬ್ಬರಿಗೂ ಕರೆ ಮಾಡಿದ್ದಾರೆ ಎನ್ನಲಾಗಿದೆ.
ನಿತ್ಯಾನಂದ ಸ್ನೇಹಿತ ದರ್ಶನ್ ಮನೆಗೆ ಬಂದು ನೋಡಿದಾಗ ಮೃತಪಟ್ಟಿರುವುದು ತಿಳಿದು ಬಂದಿದೆ. ಈ ವೇಳೆ ಸುಶೀಲಾ, ನಿತ್ಯಾನಂದ ಅವರ ಅಣ್ಣ ನವೀನ್‌ಗೆ ಕರೆ ಮಾಡಿ ಹೃದಯಾಘಾತದಿಂದ ನಿತ್ಯಾನಂದ ಮೃತಪಟ್ಟಿದ್ದಾರೆ ಎಂದು ವಿಷಯ ತಿಳಿಸಿದ್ದರು.
ಮನೆಗೆ ಬಂದ ನಿತ್ಯಾನಂದರ ಅಣ್ಣ, ಮೃತದೇಹವನ್ನು ನೋಡಿದಾಗ ಕುತ್ತಿಗೆಯಲ್ಲಿ ಬಿಗಿದ ಗುರುತು ಇದ್ದುದ್ದನ್ನು ಕಂಡು ಅನುಮಾನಗೊಂಡು ಕುವೆಂಪುನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಾಥಮಿಕ ತನಿಖೆ ನಡೆಸಿದಾಗ ಕುಡಿದ ಮತ್ತಿನಲ್ಲಿದ್ದ ನಿತ್ಯಾನಂದರ ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಕೊಲೆ ಮಾಡಿರುವುದು ಕಂಡು ಬಂದಿದ್ದು, ಪತ್ನಿ ಸುಶೀಲಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಗಳು, ಬೆರಳಚ್ಚು ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ಮುಂದಿನ ಕ್ರಮ ಕೈಗೊಂಡರು. ಕುವೆಂಪುನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.