one year in prison 
ಮೈಸೂರು

ಪತಿ, ಅತ್ತೆಗೆ ಒಂದು ವರ್ಷ ಕಾರಾಗೃಹ ಶಿಕ್ಷೆ

ಮಗುವನ್ನು ಸಂಬಂಧಿಕರಿಗೆ ದತ್ತು ನೀಡುವ ವಿಚಾರವಾಗಿ ಮಹಿಳೆಗೆ ಮಾನಸಿಕ ಹಿಂಸೆ ನೀಡಿ ಸಾವಿಗೆ ಕಾರಣರಾದ ಆಕೆಯ ಪತಿ ಮತ್ತು ಅತ್ತೆಗೆ ಮೈಸೂರಿನ ಐದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 1 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಹೇಮಾ ಅವರಿಗೆ ಮಾನಸಿಕ ಹಿಂಸೆ ನೀಡಿದ ಹಿನ್ನೆಲೆಯಲ್ಲಿ ಹುಣಸೂರು ತಾಲೂಕಿನ ಅಂಗಟಹಳ್ಳಿ ಗ್ರಾಮದ ಜಲೇಂದ್ರ ಮತ್ತು ಲಕ್ಷ್ಮಮ್ಮ ಶಿಕ್ಷೆಗೆ ಗುರಿಯಾಗಿದ್ದಾರೆ.
ಏನಿದು ಪ್ರಕರಣ?: ಹೇಮಾ ಅವರನ್ನು ಜಲೇಂದ್ರ ಅವರು ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಇಬ್ಬರು ಮಕ್ಕಳಲ್ಲಿ ಒಂದು ಮಗುವನ್ನು ಸಂಬಂಧಿಕರಿಗೆ ನೀಡಬೇಕೆಂಬ ವಿಚಾರವಾಗಿ ಪತಿ ಮತ್ತು ಪತ್ನಿ ನಡುವೆ ಗಲಾಟೆ ನಡೆಯುತ್ತಿತ್ತು. ಪತಿ ಮತ್ತು ಆತನ ಕುಟುಂಬದವರ ಕಿರುಕುಳದಿಂದ ಬೇಸತ್ತ ಹೇಮಾ 2020ರ ಜೂ. 14ರಂದು ಮನೆಯಲ್ಲಿ ಕ್ರಿಮಿನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಕೆ.ಎನ್.ರೂಪಾ ಅವರು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕ ಎ.ಎನ್.ಮಧು ವಾದ ಮಂಡಿಸಿದ್ದರು.