ಹುಣಸೂರು ನಗರದ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಸಮಿತಿ ಜಿಲ್ಲಾ ಉಪಾಧ್ಯಕ್ಷ ಶಿವಕುಮಾರ್ ಮಾತನಾಡಿದರು. ಅರುಣ್‌ಕುಮಾರ್, ಕಲ್ಕುಣಿಕೆ ರಾಘು, ಕೆ.ಹೊಂಗಯ್ಯ ಇದ್ದರು. 
ಮೈಸೂರು

ಗ್ಯಾರಂಟಿ ಯೋಜನೆ ಶೇ.100 ಸಾಧನೆಯಾಗಲಿ

ಹುಣಸೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಜನರನ್ನು ತಲುಪಲು ಅಧಿಕಾರಿಗಳು ಸೇತುವೆಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಅರುಣ್ ಕುಮಾರ್ ತಿಳಿಸಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕಲ್ಕುಣಿಕೆ ರಾಘು ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಕಳೆದ ಎರಡು ವರ್ಷಗಳಲ್ಲಿ ರಾಜ್ಯ ಸರ್ಕಾರ 1 ಲಕ್ಷ ಕೋಟಿಗೂ ಅಧಿಕ ಮೊತ್ತವನ್ನು ಗ್ಯಾರಂಟಿ ಯೋಜನೆಗಳಿಗೆ ನೀಡಿದೆ. ಇಂತಹ ಕ್ರಾಂತಿಕಾರಿ ಯೋಜನೆ ಇನ್ನಷ್ಟು ಯಶಸ್ಸು ಸಾಧಿಸಲು ಅಧಿಕಾರಿಗಳ ಪಾತ್ರ ಬಹುಮುಖ್ಯ. ಯೋಜನೆ ಫಲಾನುಭವಿಗಳನ್ನು ಗುರುತಿಸುವ, ಯೋಜನೆ ಜಾರಿಯಲ್ಲಿನ ವ್ಯತ್ಯಯಗಳನ್ನು ಸರಿಪಡಿಸುವ ಹೊಣೆಗಾರಿಕೆ ನಿಮ್ಮದು. ಶೇ.100 ಸಾಧನೆ ಆಗಬೇಕಿದೆ. ಸರ್ಕಾರ ಯೋಜನೆಗಳನ್ನು ಘೋಷಿಸಬಹುದು. ಆದರೆ, ಅದನ್ನು ಸಮರ್ಪಕವಾಗಿ ಜಾರಿಗೊಳಿಸುವ ಜವಾಬ್ದಾರಿ ನಿಮ್ಮದಾಗಿದೆ. ತಾಲೂಕಿನಲ್ಲಿ ಯೋಜನೆಗಳ ಜಾರಿಗೆ ಇನ್ನಷ್ಟು ಕ್ರಮವಹಿಸಲು ಸರ್ಕಾರ ಮತ್ತು ಜನರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಉಪಾಧ್ಯಕ್ಷ ಶಿವಕುಮಾರ್ ಮಾತನಾಡಿ, ಹುಣಸೂರು ತಾಲೂಕಿನಲ್ಲಿ 50ಕ್ಕೂ ಹೆಚ್ಚು ಗಿರಿಜನ ಹಾಡಿಗಳಿದ್ದು, ಈ ಎಲ್ಲ ಹಾಡಿಗಳಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ನೂರಕ್ಕೆ ನೂರರಷ್ಟು ಜಾರಿಗೊಳ್ಳುವಂತೆ ಕ್ರಮವಹಿಸಿರಿ. ಸಮಾಜ ಕಲ್ಯಾಣ, ಗಿರಿಜ ಕಲ್ಯಾಣ ಮುಂತಾದ ಇಲಾಖೆ ಅಧಿಕಾರಿಗಳು ಸ್ವತಃ ಗಮನಿಸಿ ಯೋಜನೆಯಿಂದ ಹೊರಗಿರುವವರನ್ನು ಯೋಜನೆಯೊಳಗೆ ಕರೆತನ್ನಿರಿ ಎಂದು ಹೇಳಿದರು.
ಯೋಜನೆಯ ತಾಲೂಕು ಅಧ್ಯಕ್ಷ ಕಲ್ಕುಣಿಕೆ ರಾಘು ಮಾತನಾಡಿ, ತಾಲೂಕಿನಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 75,262 ಫಲಾನುಭವಿಗಳಿದ್ದು, ಶೇ.97 ಗುರಿ ಸಾಧಿಸಲಾಗಿದೆ. ಶಕ್ತಿ ಯೋಜನೆಯಡಿ ಜೂನ್ ತಿಂಗಳಿನಿಂದ ಸೆಪ್ಟೆಂಬರ್‌ವರೆಗೆ ಒಟ್ಟು 18 ಕೋಟಿ 41 ಸಾವಿರ ಮಹಿಳೆಯರು ಯೋಜನೆಯ ಲಾಭ ಪಡೆದಿದ್ದಾರೆ. ಗೃಹಜ್ಯೋತಿ ಯೋಜನೆಯಡಿ ಶೇ.97 ಸಾಧನೆಯಾಗಿದೆ. ಯುವನಿಧಿ ಯೋಜನೆಯಡಿ ಸೆಪ್ಟೆಂಬರ್ ಅಂತ್ಯಕ್ಕೆ 1,152 ಪದವಿ ವಿದ್ಯಾರ್ಥಿಗಳು ಮತ್ತು 7(ಒಟ್ಟು 1159) ಮಂದಿ ಡಿಪ್ಲೊಮಾ ವಿದ್ಯಾರ್ಥಿಗಳು ಸೌಲಭ್ಯ ಪಡೆದಿದ್ದು, ಈವರೆಗೆ 3.10 ಕೋಟಿ ರೂ.ಗಳ ನಿರುದ್ಯೋಗ ಭತ್ಯೆ ನೀಡಲಾಗಿದೆ. ನಿರುದ್ಯೋಗಿಗಳನ್ನು ಗುರುತಿಸುವ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳ ಸಮಿತಿಯ ಸದಸ್ಯರ ಸಹಕಾರ ಪಡೆದುಕೊಳ್ಳಬೇಕು. ಕಾಲೇಜುಗಳ ಸಂಪರ್ಕದೊಂದಿಗೆ ಕ್ರಮವಹಿಸಿರಿ. ತಾಲೂಕಿನ 41 ಗ್ರಾಪಂ ಕಚೇರಿಗಳಲ್ಲೂ ಪಂಚ ಗ್ಯಾರಂಟಿ ಕುರಿತು ಸಮಗ್ರ ಮಾಹಿತಿಯನ್ನು ಕಾಲಕಾಲಕ್ಕೆ ಪ್ರದರ್ಶಿಸುವುದು ಕಡ್ಡಾಯ ಎಂದರು.
ಸದಸ್ಯ ಭಾಮಾ ಯೋಗೀಶ್, ತಾಪಂ ಕಾರ್ಯ ನಿರ್ವಹಣಾಧಿಕಾರಿ ಕೆ.ಹೊಂಗಯ್ಯ, ಸಮಿತಿ ಸದಸ್ಯರಾದ ಕೌಶಿಕ್, ಸುರೇಶ್, ಮುಜೀಬ್ ಹಾಜರಿದ್ದರು.