ಹುಣಸೂರು ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರವನ್ನು ಪೌರಾಯುಕ್ತೆ ಕೆ.ಮಾನಸಾ ಉದ್ಘಾಟಿಸಿದರು. ಸೌಮ್ಯಾ, ಶಶಿಕುಮಾರ್, ಕೃಷ್ಣೇಗೌಡ, ಜಯಮ್ಮ ಇದ್ದರು. 
ಮೈಸೂರು

ನೂತನ ತಂತ್ರಜ್ಞಾನಗಳ ಬಳಕೆ ಅರಿಯಿರಿ

ಲಲಾಟಾಕ್ಷ ಎಸ್
ಹುಣಸೂರು: ವೃತ್ತಿಯಲ್ಲಿ ಕೌಶಲ ಗಳಿಸುವುದು, ಕರ್ತವ್ಯದಲ್ಲಿ ಸಕಾರಾತ್ಮಕ ಬುದ್ಧಿವಂತಿಕೆ ಅನುಸರಿಸುವ ಮೂಲಕ ನಾಗರಿಕರಿಗೆ ಉತ್ತಮ ಸೇವೆ ನೀಡುವತ್ತ ನಗರಸಭೆ ಸಿಬ್ಬಂದಿ ಗಮನಹರಿಸಬೇಕು ಎಂದು ಪೌರಾಯುಕ್ತೆ ಕೆ.ಮಾನಸಾ ಸಲಹೆ ನೀಡಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಗರಸಭೆ ಪೌರಕಾರ್ಮಿಕರು, ನೀರು ಗಂಟಿಗಳು, ಸ್ವಚ್ಛತಾ ಸಿಬ್ಬಂದಿ, ಕಮ್ಯುನಿಟಿ ಮೊಬಲೈಸರ್ಸ್‌ ಹಾಗೂ ಕಚೇರಿ ಸಿಬ್ಬಂದಿಗೆ ಎಸ್‌ಬಿಎಂ 2.0 ಯೋಜನೆಯಡಿ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. 
ನಗರಸಭೆಯಲ್ಲಿ ಸಿಬ್ಬಂದಿ ಕೊರತೆ ನಡುವೆಯೂ ನಾಗರಿಕರ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸಬೇಕಿದೆ. ನಮಗಿರುವ ಸಂಪನ್ಮೂಲಗಳು ಮತ್ತು ಸೌಕರ್ಯಗಳ ಕೊರತೆಯನ್ನೇ ಮುಂದಿಟ್ಟಿಕೊಂಡು ಕಾರ್ಯನಿರ್ವಹಿಸುವಲ್ಲಿ ನೆಪ ಹೇಳುವುದು ಸಲ್ಲದು ಎಂದು ಹೇಳಿದರು.
ವೃತ್ತಿಯಲ್ಲಿ ಕೌಶಲ ಗಳಿಸಿರಿ, ಬುದ್ಧಿವಂತಿಕೆಯಿಂದ ಕಾರ್ಯ ನಿರ್ವಹಿಸುವುದನ್ನು ಕಲಿಯಿರಿ. ನೂತನ ತಂತ್ರಜ್ಞಾನಗಳ ಬಳಕೆ ಅರಿತುಕೊಳ್ಳಿರಿ. ಪೌರಕಾರ್ಮಿಕರು ಹಗಲಿರುಳು ನಗರದ ಸ್ವಚ್ಛತೆಗೆ ದುಡಿಯುತ್ತಾರೆ. ಅವರ ಶ್ರಮವನ್ನು ಮಿಕ್ಕವರು ಅರಿತು ಅವರಿಗೆ ನೆರವಾಗುವಂತೆ ನಾವೆಲ್ಲರೂ ದುಡಿಯೋಣ. ನಿಮ್ಮ ನಿಮ್ಮ ಬದಲಾಗಿರುವ ಕಾರ್ಯಶೈಲಿ, ತಂತ್ರಜ್ಞಾನಗಳ ಬಳಕೆಯ ಕುರಿತು ಮಾಹಿತಿ ನೀಡಲು ತರಬೇತಿ ಕಾರ್ಯಾಗಾರಗಳು ಅವಶ್ಯಕ. ವೃತ್ತಿಯಲ್ಲಿನ ಏಕತಾನತೆಯನ್ನು ತೊಡೆದುಹಾಕಲು ಕೂಡ ಇಂತಹ ಕಾರ್ಯಾಗಾರಗಳು ಅವಕಾಶ ನೀಡಲಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ನಂಜನಗೂಡು ನಗರಸಭೆ ಪರಿಸರ ವಿಭಾಗದ ಎಇಇ ಮೈತ್ರಾವತಿ ಘನತ್ಯಾಜ್ಯ ವಸ್ತುಗಳ ನಿರ್ವಹಣೆ, ವಿಂಗಡಣೆ, ವಿತರಣೆ ಕುರಿತು ಮಾಹಿತಿ ನೀಡಿದರು. ಸರ್ಕಾರೇತರ ಸಂಘಸಂಸ್ಥೆಯ ಜಗದೀಶ್ ಸಿಬ್ಬಂದಿಯ ವೈಯಕ್ತಿಕ ಆರೋಗ್ಯ, ಸುರಕ್ಷತೆ ಪ್ರಾಮುಖ್ಯತೆ ಕುರಿತು ಮಾಹಿತಿ ನೀಡಿದರೆ, ಮೈಸೂರಿನ ಜೆಸಿ ಕಾಲೇಜಿನ ಪ್ರೊ.ಶಿವಪ್ರಸಾದ್ ಒಳಚರಂಡಿ ವ್ಯವಸ್ಥೆ ನಿರ್ವಹಣೆ, ನೆಟ್ ಕನೆಕ್ಟಿವಿಟಿ ಕುರಿತು ಮಾಹಿತಿ ನೀಡಿದರು.
ನಗರಸಭೆ ಪರಿಸರ ವಿಭಾಗದ ಎಇಇ ಸೌಮ್ಯಾ, ಆರೋಗ್ಯ ನಿರೀಕ್ಷಕ ಶಶಿಕುಮಾರ್, ಕೃಷ್ಣೇಗೌಡ, ಪೌರಕಾರ್ಮಿಕರ ಸಂಘದ ಅಧ್ಯಕ್ಷ ರಾಚಯ್ಯ, ಜಯಮ್ಮ, ಮಾದ, ಪೌರಕಾರ್ಮಿಕರು, ಸಿಬ್ಬಂದಿ ಹಾಜರಿದ್ದರು.