ಹುಣಸೂರು ನಗರದ ಸ್ಟೋರ್‌ಬೀದಿಯ ಅಂಗನವಾಡಿ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಪ್ರಧಾನ ಸಿವಿಲ್ ನ್ಯಾಯಾಧೀಶೆ ಆಯಿಷಾಬಿ ಪಿ.ಮಜಿದ್ ಉದ್ಘಾಟಿಸಿದರು. ಎಸ್.ಶಿವಣ್ಣೇಗೌಡ, ಸೋಮಯ್ಯ, ಎಚ್.ಡಿ.ಪಾರ್ವತಿ, ಬಿ.ವಿ.ಶ್ವೇತಾ ಇದ್ದರು. 
ಮೈಸೂರು

ದೌರ್ಜನ್ಯ ಬಚ್ಚಿಟ್ಟು ಅನ್ಯಾಯ ಮಾಡಿಕೊಳ್ಳಬೇಡಿ

ಹುಣಸೂರು: ಮಹಿಳೆಯರು ತಮ್ಮ ಮೇಲಾಗುವ ದೌರ್ಜನ್ಯವನ್ನು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶೆ ಆಯಿಷಾಬಿ ಪಿ.ಮಜಿದ್ ಸಲಹೆ ನೀಡಿದರು.
ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಗುರುವಾರ ನಗರದ ಸ್ಟೋರ್‌ಬೀದಿಯ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ಮಹಿಳೆಯರ ಮೇಲಿನ ದೌರ್ಜನ್ಯ ನಿರ್ಮೂಲನೆ ಅಂತಾರಾಷ್ಟ್ರೀಯ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. 
ದೇಶದಲ್ಲಿ ಸಂವಿಧಾನವು ಸಮಾನತೆಯ ಮೂಲಕ ಮಹಿಳೆಗೆ ಹಕ್ಕುಗಳು ಮತ್ತು ಜವಾಬ್ದಾರಿ ನೀಡಿದೆ. ಸಮಾನತೆ ಎನ್ನುವುದು ಜಾತಿ, ಮತ, ಲಿಂಗ ತಾರತಮ್ಯ ಮೀರಿ ಎಲ್ಲರೂ ಒಂದೇ ಎನ್ನುವ ತತ್ವವನ್ನು ಪಾಲಿಸುತ್ತದೆ. ಇಂತಹ ಸಂದರ್ಭದಲ್ಲೂ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿದೆ. ಬಹುತೇಕ ಪ್ರಕರಣಗಳಲ್ಲಿ ಮಹಿಳೆಯರು ತಮ್ಮ ಮೇಲಾದ ದೌರ್ಜನ್ಯವನ್ನು ಬಚ್ಚಿಟ್ಟು ಅನ್ಯಾಯ ಮಾಡಿಕೊಳ್ಳುತ್ತಾರೆ. ಇದು ನಿಲ್ಲಬೇಕು ಎಂದರು.
ಮಹಿಳೆ ತನ್ನ ಮೇಲಾದ ದೌರ್ಜನ್ಯವನ್ನು ಪ್ರಶಿಸುವ ಮನೋಭಾವ ರೂಪಿಸಿಕೊಳ್ಳಬೇಕು. ಅಡುಗೆ ಮನೆಯಿಂದ ಅಂತರಿಕ್ಷದವರೆಗೆ ಮಹಿಳೆ ತನ್ನ ಸಾಮರ್ಥ್ಯ ತೋರುತ್ತಿದ್ದಾಳೆ. ತೊಟ್ಟಿಲಿನಲ್ಲೇ ಮದುವೆ ಮಾಡಿಕೊಡುವ ಕಾಲ ಈಗಿಲ್ಲ. ಹೆಣ್ಣು ಸುಶಿಕ್ಷಿತೆಯಾಗುವ ಮೂಲಕ ತನ್ನ ಮೇಲಿನ ದೌರ್ಜನ್ಯ ನಿಯಂತ್ರಿಸುವ ಕಡೆ ಗಮನಿಸಬೇಕು ಎಂದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಸ್.ಜಿ.ಹರೀಶ್, ಸಹಾಯಕ ಸರ್ಕಾರಿ ಅಭಿಯೋಜಕಿ ಎಚ್.ಡಿ.ಪಾರ್ವತಿ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಸ್.ಶಿವಣ್ಣೇಗೌಡ, ಉಪಾಧ್ಯಕ್ಷ ಹರೀಶ್‌ಕುಮಾರ್, ಕಾರ್ಯದರ್ಶಿ ಎಚ್.ಜೆ.ಸಂದೀಪ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಜಯಶ್ರೀ ಅಂಗಡಿ, ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು. ಇದೇ ವೇಳೆ ವಕೀಲೆ ಶ್ವೇತಾ ಬಿ.ವಿ.ಮಹಿಳಾ ದೌರ್ಜನ್ಯ ಕುರಿತು ಉಪನ್ಯಾಸ ನೀಡಿದರು.