ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನ ಹೆಮ್ಮಿಗೆ ಅರಣ್ಯ ಪ್ರದೇಶದಲ್ಲಿ ಆದಿವಾಸಿಗಳು ಬುಧವಾರ ಅರಣ್ಯ ಪ್ರವೇಶ ಅಭಿಯಾನ ಕಾರ್ಯಕ್ರಮ ನಡೆಸಿದರು. ಮುಖಂಡರಾದ ಹರ್ಷ, ಮುನಿಮಾರಯ್ಯ, ಲಕ್ಷ್ಮೀ, ಜಯಪ್ಪ ಇತರರು ಹಾಜರಿದ್ದರು.
ಹುಣಸೂರು : ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಒತ್ತಾಯಿಸಿ ಅರಣ್ಯ ಪ್ರವೇಶಿಸಿದ ಆದಿವಾಸಿಗಳು, ಕಲ್ಯಾಣ ದೇವರ ಸನ್ನಿಧಿ ಮತ್ತು ನ್ಯಾಯಪೀಠಕ್ಕೆ ಪೂಜೆ ಸಲ್ಲಿಸಿ ತಮ್ಮ ಬೇಡಿಕೆಗಳ ಈಡೇರಿಕಗೆ ಆಗ್ರಹಿಸಿ ಪೋಸ್ಟರ್ ಹಿಡಿದು ಪ್ರತಿಭಟಿಸಿದರು.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನ ಹೆಮ್ಮಿಹಾಡಿ, ಬೀರತಮ್ಮನಹಳ್ಳಿ ಕಾಡಿಗೆ ಬುಧವಾರ ಪ್ರವೇಶಿಸಿ ತಮ್ಮ ಹಕ್ಕೊತ್ತಾಯಗಳನ್ನು ಈಡೇರಿಸಲು ಸರ್ಕಾರದ ಮೇಲೆ ಒತ್ತಡ ಹೇರಿದ ಪರಿ ಇದಾಗಿತ್ತು.
ಅರಣ್ಯ ಪ್ರವೇಶ ಅಭಿಯಾನದ ಭಾಗವಾಗಿ ಬುಧವಾರ ಹೆಮ್ಮಿಗೆ, ಬೀರತಮನಹಳ್ಳಿ ಹಾಗು ಕರಣಕುಪ್ಪೆ ಹಾಡಿಗಳ ಅರಣ್ಯ ಹಕ್ಕು ಸಮಿತಿಗಳ ಪ್ರತಿನಿಧಿಗಳು ಹೆಮ್ಮಿಗೆ ಬೀರತಮನಹಳ್ಳಿ ಕಾಡಿಗೆ ಪ್ರವೇಶಿಸಿದ ಆದಿವಾಸಿಗಳ ತಂಡ ತಮ್ಮ ಮೂಲ ನೆಲೆ ಗಳಲ್ಲಿರುವ ದೇವರುಗಳನ್ನು ಪೂಜಿಸಿ, ಸರ್ಕಾರಕ್ಕೆ ಸಲ್ಲಿಸಬೇಕಾದ ಮನವಿಪತ್ರಗಳನ್ನು ಓದಿದರು.
ಈ ವೇಳೆ ಮಾತನಾಡಿದ ಹೆಮ್ಮಿಗೆ ಹಾಡಿಯ ಮುಖಂಡ ಹರ್ಷ, ನಮ್ಮ ಹಾಡಿಗೆ ಸಾಮೂಹಿಕ ಹಕ್ಕು ಪತ್ರ ಸಿಕ್ಕಿದೆ. ಈ ಅರಣ್ಯಕ್ಕೆ ಅಭಿವೃದ್ದಿ ಯೋಜನೆ ತಯಾರಿಸಿ ಜೈವಿಕ ಇಂಧನ ಮರಗಳು, ಹಣ್ಣು, ಸೊಪ್ಪಿನ ಮರಗಳು, ನೆಲ್ಲಿ, ಸೀಗೆ, ಆಲ, ಅರಳಿ, ಅತ್ತಿ ಬೇವು, ಬಸರಿ ಗೋಣಿ, ಹಲಸು, ಹುಣಸೆ ಇತ್ಯಾದಿ ಮರನೆಡಲು ಸರ್ಕಾರ ಕ್ರಮವಹಿಸಬೇಕು ಎಂದರು.
ಕಾಡಿನಲ್ಲಿ ಬೆಳೆದಿರುವ ಕಳೆಗಳಾದ ಪಾರ್ಥೇನಿಯಂ, ಗಾಂಧಿಗುಲಾಬಿ, ಉಣ್ಣಿ ಗಿಡ ತೆಗೆಯಲು ಕ್ರಮವಹಿಸಿ ಹುಲ್ಲು ಬೆಳೆಯಲು ಅನುಕೂಲ ಮಾಡಿಕೊಡಲು ಅರಣ್ಯ ಇಲಾಖೆ ಮುಂದಾಗಬೇಕು. ಸಾಮೂಹಿಕ ಹಕ್ಕು ಪತ್ರ ಇರುವ ಕಾಡಿಗೆ ಹಾಡಿ ಆರಣ್ಯ ಹಕ್ಕು ಸಮಿತಿಯ ನಾಮಫಲಕ ಅಳವಡಿಸಬೇಕು. ಪ್ರಾ ಣಿಗಳು ನೀರುಕುಡಿಯಲು ಅನುಕೂಲವಾಗುವಂತೆ ಬೋರ್ ತೆಗೆಸಿ ಖಾಲಿ ಕೆರೆಗಳಿಗೆ ನೀರು ತುಂಬಿಸಲು ಕ್ರಮವಹಿಸಬೇಕೆಂದು ಆಗ್ರಹಿಸಿದರು.
ಬೀರತಮ್ಮನಹಳ್ಳಿ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಮಹೇಶ್ ಮಾತನಾಡಿ, 2006ರ ಆರಣ್ಯ ಹಕ್ಕು ಕಾಯ್ದೆಯ ಅನ್ವಯ ವೈಯಕ್ತಿಕ ಆರಣ್ಯ ಭೂಮಿ ಹಕ್ಕು, ಸಾಮೂಹಿಕ ಅರಣ್ಯಹಕ್ಕು ಹಾಗು ಪರಂಪರೆಯ ಅರಣ್ಯ ನೆಲಸುಗಳ ಮೇಲಿನ ಹಕ್ಕುಗಳಿಗೆ ಮತ್ತು ಕಾಡಿನಿಂದ ಹೊರದೂಡಲ್ಪಟ್ಟ 3,418 ಆದಿವಾಸಿ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ಆಗ್ರಹಿಸಿ ಆರಣ್ಯ ಪ್ರವೇಶ ಅಭಿಯಾನ ನಡೆಸಲಾಗುತ್ತಿದೆ ಎಂದರು.
ಈ ವೇಳೆ ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್. ಶ್ರೀಕಾಂತ್, ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಜಯಪ್ಪ, ಆದಿವಾಸಿ ಮಹಿಳಾಸಂಘದ ಅಧ್ಯಕ್ಷೆ ಲಕ್ಷ್ಮೀ, ಬೊಳ್ ಮಾರಯ್ಯ, ಮುನಿಮಾರಯ್ಯ ಕಲ್ಲೂರ ಸೇರಿದಂತೆ ಆದಿವಾಸಿಗಳು ಭಾಗವಹಿಸಿದ್ದರು.