ಹುಣಸೂರು ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಿಂಡಿ ಸಾರ್ವಜನಿಕರಿಂದ ಸಮಸ್ಯೆ ಆಲಿಸಿದರು. ಡಿವೈಎಸ್‌ಪಿ ರವಿ, ಇನ್‌ಸ್ಪೆಕ್ಟರ್‌ಗಳಾದ ಪುನೀತ್, ಸಂತೋಷ್ ಕಶ್ಯಪ್ ಇದ್ದಾರೆ. ವಿವಿಧ ಸಂಘಟನಗಳ ಮುಖಂಡರು ಭಾಗವಹಿಸಿದ್ದರು.
ಹುಣಸೂರು: ತಾಲೂಕಿನಲ್ಲಿ ಮನೆಮನೆಗೆ ಪೊಲೀಸ್ ಭೇಟಿ ನೀಡುತ್ತಿರುವುದು ಸಾರ್ವಜನಿಕರಲ್ಲಿ ಗಾಬರಿ ಹುಟ್ಟಿಸಿದೆ ಸರ್... ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ಸಾಗಿದೆ ನಿಯಂತ್ರಿಸಿ ಸರ್... ನಗರ ವ್ಯಾಪ್ತಿಯ ಪ್ರಮುಖ ವೃತ್ತಗಳಲ್ಲಿ ಸಿಗ್ನಲ್ ಲೈಟ್ ಅಳವಡಿಸಿ... ಮತಾಂತರದ ಹಾವಳಿ ನಿಯಂತ್ರಿಸಿ ಸರ್...
ಇದು ನಗರದ ಅಂಬೇಡ್ಕರ್ ಭವನದಲ್ಲಿ ಸೋಮವಾರ ಪೊಲೀಸ್ ಇಲಾಖೆ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ತೂರಿಬಂದ ಆಗ್ರಹಗಳು.
ಇಡೀ ಸಭೆಯಲ್ಲಿ ಪ್ರಮುಖವಾಗಿ ಗ್ರಾಮೀಣ ಭಾಗಗಳಲ್ಲಿ ಅಕ್ರಮ ಮದ್ಯ ಮಾರಾಟದ ಹಾವಳಿ ಹೆಚ್ಚಿನ ಚರ್ಚೆಗೆ ಒಳಗಾದರೆ, ನಗರದಲ್ಲಿ ಸಂಚಾರ ದಟ್ಟಣೆ, ಸಿ.ಸಿ ಕ್ಯಾಮರಾ ಅಳವಡಿಕೆಗೆ ಒತ್ತಾಯ ಕೇಳಿ ಬಂದವು.
ಮೈಸೂರು ಜಿಲ್ಲಾ ಮಾಹಿತಿ ಹಕ್ಕು ಮತ್ತು ಮಾನವ ಹಕ್ಕು ಸಂರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಇಂಟೆಕ್ ರಾಜು ಮಾತನಾಡಿ, ಪಟ್ಟಣದ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ಹೆಚ್ಚಿದ್ದು, ಅಪಘಾತಗಳು ನಿರಂತರವಾಗಿ ನಡೆದಿವೆ. ನಗರದ ಕಲ್ಪತರು ವೃತ್ತ, ಕೋರ್ಟ್ ವೃತ್ತ, ಕಲ್ಕುಣಿಕೆ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಸಿಗ್ನಲ್ ಲೈಟ್ ಅಳವಡಿಸಲು ಒತ್ತಾಯಿಸಿದರು. ಸಂಚಾರ ಸಮಸ್ಯೆ ಪರಿಹರಿಸಲು ಸ್ಥಳೀಯ ಆಡಳಿತದೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು ಹಾಗೂ ಇಲಾಖೆಯಿಂದ ಸಿಗ್ನಲ್ ಲೈಟ್ ಅಳವಡಿಕೆಗೆ ಕ್ರಮ ವಹಿಸಲಾಗುವುದು ಎಂದು ಎಸ್ಪಿ ಭರವಸೆ ನೀಡಿದರು.
ಹನಗೋಡಿನಲ್ಲಿ ಉಪಠಾಣೆ ಸ್ಥಾಪಿಸಿ: ದಲಿತ ಮುಖಂಡ ಕಿರಂಗೂರು ಸ್ವಾಮಿ ಮಾತನಾಡಿ, ಹನಗೋಡು ಹೋಬಳಿ ಕೇಂದ್ರದಲ್ಲಿ 10 ವರ್ಷಗಳ ಹಿಂದೆ ಪೊಲೀಸ್ ಔಟ್‌ಪೋಸ್ಟ್ ಸ್ಥಾಪಿಸಲಾಗಿತ್ತು. ಸರ್ಕಾರಿ ಜಾಗದ ಲಭ್ಯತೆಯ ಕೊರತೆಯ ಕಾರಣ ಇತ್ತೀಚಿನ ವರ್ಷಗಳಲ್ಲಿ ಅದನ್ನು ತೆರವುಗೊಳಿಸಲಾಗಿದೆ. ಹನಗೋಡು ಹೋಬಳಿಯಲ್ಲಿ 30ಕ್ಕೂ ಹೆಚ್ಚು ಹಾಡಿಗಳು, 40ಕ್ಕೂ ಹೆಚ್ಚು ಪರಿಶಿಷ್ಟ ಜಾತಿ ಜನಾಂಗದ ಕಾಲನಿಗಳಿದ್ದು, ಸಣ್ಣಪುಟ್ಟ ಸಮಸ್ಯೆಗಳಿಗೂ 20 ಕಿ.ಮೀ.ದೂರದ ಹುಣಸೂರು ಪಟ್ಟಣಕ್ಕೆ ಬರುವಂತಾಗಿದೆ. ಹಾಗಾಗಿ ಪೊಲೀಸ್ ಔಟ್ ಪೋಸ್ಟ್ ಅಥವಾ ಉಪಠಾಣೆಯನ್ನು ಮರುಸ್ಥಾಪಿಸಲು ಕೋರಿದರು.
ಇದಕ್ಕೆ ಪರಿಶಿಷ್ಟ ಜಾತಿ ಪಂಗಡದ ದೌರ್ಜನ್ಯ ತಡೆ ಜಿಲ್ಲಾ ಸಮಿತಿ ಸದಸ್ಯ ನೇರಳಕುಪ್ಪೆ ಮಹದೇವ್ ದನಿಗೂಡಿಸಿದರು. ಈ ಕುರಿತು ಸ್ಥಳ ಪರಿಶೀಲನೆ ನಡೆಸಿ ಕ್ರಮ ವಹಿಸುವುದಾಗಿ ಎಸ್ಪಿ ತಿಳಿಸಿದರು.
ಸಿ.ಸಿ ಕ್ಯಾಮರಾ ಅಳವಡಿಸಿ: ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ನಾಗಣ್ಣ ದೇವಾಡಿಗ ಮಾತನಾಡಿ, ನಗರದಾದ್ಯಂತ ಬಡಾವಣೆಗಳಲ್ಲಿ ಅಲ್ಲಲ್ಲಿ ಕಳ್ಳತನ ಹೆಚ್ಚುತ್ತಿದ್ದು, ಇಲಾಖೆ ವತಿಯಿಂದ ಸಿ.ಸಿ ಕ್ಯಾಮರಾ ಅಳವಡಿಸಬೇಕೆಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಪಟ್ಟಣ ವ್ಯಾಪ್ತಿಯಲ್ಲಿ ಇಲಾಖೆಯಿಂದ ಶೀಘ್ರ 25 ಸಿ.ಸಿ ಕ್ಯಾಮರಾಗಳನ್ನು ಅಳವಡಿಸಲಾಗುವುದು. ಖಾಸಗಿ ವ್ಯಕ್ತಿಗಳು, ಮಾಲ್‌ಗಳು, ಹೋಟೆಲ್ ಮಾಲೀಕರನ್ನು ಈ ಕುರಿತು ಮನವೊಲಿಸಿ ಸಿ.ಸಿ ಕ್ಯಾಮರಾ ಅಳವಡಿಸುವ ಮೂಲಕ ಸಾರ್ವಜನಿಕ ಸೇವೆಯಲ್ಲಿ ಭಾಗವಹಿಸಲು ಕೋರಲಾಗುವುದು ಎಂದರು.
ಆತಂಕ ತಂದ ಪೊಲೀಸ್ ನಡೆ: ಮುಖಂಡ ನಿಲುವಾಗಿಲು ಪ್ರಭಾಕರ್ ಮಾತನಾಡಿ, ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಸಿಬ್ಬಂದಿ ಇಲ್ಲದ ಕಾರಣ ರಾತ್ರಿ ವೇಳೆ ಒಬ್ಬ ಪೊಲೀಸ್ ಪೇದೆಯನ್ನು ಕರ್ತವ್ಯಕ್ಕೆ ನಿಯೋಜಿಸಲು ಕೋರಿದರು. ಗ್ರಾಮಾಂತರ ಭಾಗಗಗಳಲ್ಲಿ ಮನೆಮನೆಗೆ ಪೊಲೀಸ್ ಕಾರ್ಯಕ್ರಮದಡಿ ಪೊಲೀಸರು ಪ್ರತಿ ಮನೆಗೆ ಭೇಟಿ ನೀಡುತ್ತಿರುವುದು ಗ್ರಾಮೀಣರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇಲಾಖೆಯಿಂದ ಸಮೀಕ್ಷೆ ನಡೆಯುತ್ತಿದೆಯೇ? ಗ್ರಾಮೀಣರು ಮಾಹಿತಿ ನೀಡುವುದು ಕಡ್ಡಾಯವೇ ಎಂದು ಪ್ರಶ್ನಿಸಿದರು. ಈ ಕುರಿತು ಉತ್ತರಿಸಿದ ಎಸ್ಪಿ, ಪೊಲೀಸ್ ಇಲಾಖೆ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಗ್ರಾಮದಲ್ಲಿ ಪ್ರತಿ ಮನೆಯವರ ಕುರಿತು ಅರಿತು ಕೊಳ್ಳುವುದಾಗಿದೆ. ಹೊರ ಊರಿನಿಂದ ಬಂದವರಿಗೆ ಆಶ್ರಯ ನೀಡಿದ್ದರೆ ಅದರ ಕುರಿತು ಮಾಹಿತಿ ತಿಳಿದುಕೊಳ್ಳುವ ಉದ್ದೇಶ ಹೊಂದಲಾಗಿದೆ. ಅಲ್ಲದೆ ಗ್ರಾಮದ ಕುಟುಂಬಗಳ ಪರಿಸ್ಥಿತಿಯನ್ನು ಇಲಾಖೆ ಅರಿತುಕೊಂಡಿದ್ದರೆ ಅದಕ್ಕೆ ತಕ್ಕಂತ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ. ಪೊಲೀಸರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುವುದು ಕಡ್ಡಾಯವೇನಲ್ಲ ಎಂದು ತಿಳಿಸಿದರು.
ಮತಾಂತರದ ಹಾವಳಿ: ನಿಲುವಾಗಿಲು ಪ್ರಭಾಕರ್ ಮಾತನಾಡಿ, ತಾಲೂಕಿನಲಿ ಪರಿಶಿಷ್ಟ ಜಾತಿ ಜನಾಂಗದ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದು, ಪರಿಶಿಷ್ಟ ಜಾತಿ ಜನಾಂಗದ ಸಮುದಾಯದವರೇ ಬಲಿಯಾಗುತ್ತಿದ್ದಾರೆ. ಮತಾಂತರವೇ ಆಗದೆ ಚರ್ಚ್ ಫಾದರ್ ಆದವರೂ ಇದ್ದು, ಅವರು ಸರ್ಕಾರದಿಂದ ಎಸ್‌ಸಿ ಸೌಲಭ್ಯ ಮತ್ತು ಚರ್ಚ್‌ನಿಂದಲೂ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಶಾಲಾ ಕಾಲೇಜು ಮಕ್ಕಳಿಗೆ ವಿದ್ಯಾಭ್ಯಾಸ, ಉದ್ಯೋಗ ದೊರಕಿಸಿಕೊಳ್ಳವ ವೇಳೆ ಮತಾಂತರದ ಪಿಡುಗು ದೊಡ್ಡ ಅಡ್ಡಿಯಾಗುತ್ತಿದೆ. ದಯವಿಟ್ಟು ಇದನ್ನು ನಿಯಂತ್ರಿಸಿ ಎಂದು ಕೋರಿದಾಗ, ಖಚಿತವಾಗಿ, ಬಲವಂತವಾಗಿ ಮತಾಂತರವಾಗುತ್ತಿದೆ ಎನ್ನುವ ಪ್ರಕರಣಗಳಿದ್ದರೆ ಪೊಲೀಸರಿಗೆ ಮಾಹಿತಿ ನೀಡಿದರೆ ಕ್ರಮ ವಹಿಸುವುದಾಗಿ ಎಸ್ಪಿ ತಿಳಿಸಿದರು.
ದಲಿತ ಮುಖಂಡ ನಿಂಗರಾಜ ಮಲ್ಲಾಡಿ ಮಾತನಾಡಿ, ಪಟ್ಟಣದಲ್ಲಿ ದಲಿತ-ಬ್ರಾಹ್ಮಣ ಸಮುದಾಯದ ಸಹಪಂಕ್ತಿ ಭೋಜನ ಮತ್ತು ದೇವರ ರಥೋತ್ಸವಕ್ಕೆ ದಲಿತರಿಂದ ಚಾಲನೆ ನೀಡುವ ಕಾರ್ಯಕ್ರಮದ ಮೂಲಕ ಸೌಹಾರ್ದ ಬಾಳ್ವೆಗೆ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದೇವೆ. ಗ್ರಾಮೀಣ ಭಾಗಗಳಲ್ಲಿ ಫ್ಲೆಕ್ಸ್‌ಗಳ ಹಾವಳಿ ಹೆಚ್ಚಾಗಿದೆ. ನಿಗದಿತ ಅವಧಿಯಲ್ಲಿ ತೆರವುಗೊಳಿಸಲು ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಿ ಎಂದು ಕೋರಿದರು. ಮಹದೇವಮ್ಮ ಮಾತನಾಡಿ, ಕಟ್ಟೆಮಳಲವಾಡಿ ಗ್ರಾಮದ ಸರ್ಕಾರಿ ಶಾಲೆಯ ಬಳಿ ಮದ್ಯದಂಗಡಿಗೆ ಅನುಮತಿ ದೊರಕಿದ್ದು, ರದ್ದುಗೊಳಿಸಿರೆಂದು ಒತ್ತಾಯಿಸಿದರು.
ದಲಿತ ಮುಖಂಡ ಕೊಳಗಟ್ಟ ಕೃಷ್ಣ ಮಾತನಾಡಿ, ಮನುಗನಹಳ್ಳಿ ಗೇಟ್ ಬಳಿ 50 ವರ್ಷಗಳಿಂದ ಗುಡಿಸಲಿನಲ್ಲಿ ವಾಸಿಸುತ್ತಿರುವ ಪೌರಕಾರ್ಮಿಕರನ್ನು ಒಕ್ಕಲೆಬ್ಬಿಸಲು ಬಲಿಷ್ಠರು ಯತ್ನಿಸುತ್ತಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲು ಒತ್ತಾಯಿಸಿದರು.
ಅಶೋಕ್ ಮಾತನಾಡಿ, ತಾಲೂಕಿನ ಧಾರ್ಮಿಕ ಕ್ಷೇತ್ರ ಗದ್ದಿಗೆ ಶ್ರೀ ಕೆಂಡಗಣ್ಣಸ್ವಾಮಿ ದೇಗುಲ ವ್ಯಾಪ್ತಿಯ ಆಸುಪಾಸಿನಲ್ಲಿ ಸಂಜೆಯಾದರೆ ಅಕ್ರಮ ಚಟುವಟಿಕೆಗಳ ತಾಣವಾಗಿ ಪರಿವರ್ತಿತವಾಗುತ್ತಿದ್ದು, ಪೊಲೀಸ್ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು. ನಗರದ ಜೆಎಲ್‌ಬಿ ರಸ್ತೆಯಲ್ಲಿ ದ್ವಿಚಕ್ರ ವಾಹನಸವಾರರು ವೇಗವಾಗಿ ಚಾಲನೆ ಮಾಡುತ್ತಿದ್ದು, ನಿಯಂತ್ರಿಸಲು ಮಧು ಕೋರಿದರು.