ಹುಣಸೂರು ನಗರದ ಕಲ್ಕುಣಿಕೆಯಲ್ಲಿ ಆಯೋಜಿಸಿದ್ದ ಜಯಂತಿ ಸಮಾರಂಭದಲ್ಲಿ ಮಾಜದ ಸಾಧಕರನ್ನು ಸನ್ಮಾನಿಸಲಾಯಿತು. ಡಾ.ಲೋಹಿತ್, ಗಣೇಶ್‌ಕುಮಾರಸ್ವಾಮಿ, ಗಣಪತಿ, ಶಿವಾನಂದ ಇತರರಿದ್ದರು.
ಸ್ವಾಮಿನಿಷ್ಠೆ, ತ್ಯಾಗ, ಶೌರ್ಯ ಗುಣಗಳೊಂದಿಗೆ ಬ್ರಿಟಿಷ್ ಸಾಮ್ರಾಜ್ಯಶಾಹಿ ವ್ಯವಸ್ಥೆಯ ವಿರುದ್ಧ ತನ್ನ ಬದುಕನ್ನೇ ಪಣವಾಗಿಟ್ಟು ನಾಡಿನ ಸ್ವಾತಂತ್ರೃ ಹಾಗೂ ಸಾರ್ವಭೌಮತ್ವಕ್ಕಾಗಿ ಹೋರಾಡಿ ಹುತಾತ್ಮನಾದ ಸಂಗೊಳ್ಳಿ ರಾಯಣ್ಣನ ಆದರ್ಶ ಅನುಕರಣೀಯ ಹಾಗೂ ಸಾರ್ವಕಾಲಿಕ ಎಂದು ಶಿಕ್ಷಕ ಜೆ.ಮಹಾದೇವ್ ಕಲ್ಕುಣಿಕೆ ಬಣ್ಣಿಸಿದರು.
ಹುಣಸೂರಿನ ಕಲ್ಕುಣಿಕೆಯ ಸಂಗೊಳ್ಳಿ ರಾಯಣ್ಣ ಯುವಕರ ಸಂಘದ ವತಿಯಿಂದ ಸೋಮವಾರ ಆಯೋಜಿಸಿದ್ದ ಸಂಗೊಳ್ಳಿ ರಾಯಣ್ಣ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
ಕಿತ್ತೂರು ರಾಣಿ ಚೆನ್ನಮ್ಮನ ನೇತೃತ್ವದಲ್ಲಿ ಬ್ರಿಟಿಷರ ಕುಟಿಲತೆ ವಿರುದ್ಧ ಸಂಘಟಿತ ಹೋರಾಟ ರೂಪಿಸಿ ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನವಾಗಿದ್ದ ರಾಯಣ್ಣ ತನ್ನ ತ್ಯಾಗದಿಂದ ನಾಡಿನ ಚರಿತ್ರೆಯಲ್ಲಿ ಅಮರನಾಗಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಗೊಳ್ಳಿ ರಾಯಣ್ಣ ಯುವಕ ಸಂಘದ ಅಧ್ಯಕ್ಷ, ವಕೀಲ ಎ.ಮಹಾದೇವ ಮಾತನಾಡಿ, ಸಂಘವು ಪ್ರತಿವರ್ಷವೂ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಯುವ ಸಮೂಹ ಹಾಗೂ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯ ಮಾಡುತ್ತಿದೆ. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನವನ್ನು ಶ್ರದ್ಧೆ, ಶ್ರಮ,ಪ್ರತಿಭೆಯ ಮೂಲಕಸಾರ್ಥಕಗೊಳಿಸಿಕೊಳ್ಳಬೇಕು. ಸಂಗೊಳ್ಳಿ ರಾಯಣ್ಣನ ಸ್ವಾತಂತ್ರೃ ಪ್ರೇಮ ಹಾಗೂ ಅನ್ಯಾಯದ ವಿರುದ್ಧ ಹೋರಾಟದ ಚರಿತ್ರೆ ಎಲ್ಲರಿಗೂ ಪ್ರೇರಣಾದಾಯಕ ಎಂದು ತಿಳಿಸಿದರು.
ಸಮಾರಂಭವನ್ನು ಉದ್ಘಾಟಿಸಿದ ಕಾವೇರಿ ಸೂಪರ್ ಸ್ಪಷಾಲಿಟಿ ಆಸ್ಪತ್ರೆಯ ಡಾ.ಪಿ.ಎಸ್.ಲೋಹಿತ್ ಹಾಗೂ ಡಾ.ಭರತ್‌ಕುಮಾರ್, ಸಂಗೊಳ್ಳಿ ರಾಯಣ್ಣನ ಆದರ್ಶಗಳನ್ನು ವಿದ್ಯಾರ್ಥಿಗಳು ಹಾಗೂ ಯುವ ಸಮೂಹ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕೆಂದು ಆಶಿಸಿದರು.
ವಿವಿಧ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಗರಸಭಾ ಮಾಜಿ ಅಧ್ಯಕ್ಷ ಗಣೇಶ್‌ಕುಮಾರ ಸ್ವಾಮಿ, ತಾಪಂ ಮಾಜಿ ಸದಸ್ಯ ಗಣಪತಿ, ಮುಖಂಡರಾದ ವೆಂಕಟೇಶಣ್ಣ ಸುರೇಶ ಆನಂದ್, ಬಿಳಿಗೆರೆ ರಾಘು, ಭೋಜೇಗೌಡ, ಪುಟ್ಟಸ್ವಾಮಿಗೌಡ, ಹೊಳಿಯಪ್ಪ, ಶಿವಾನಂದ್, ಮರಿಸ್ವಾಮಿ, ಮೆಡಿಕಲ್ ಕಾಂತರಾಜ್, ಕೆ ಎನ್ ಬಸವರಾಜ್, ಎನ್.ಜೆ.ಮಹಾದೇವ್, ಸಿದ್ದರಾಮು ಎಚ್.ಡಿ.ಸ್ವಾಮಿ, ಸಂಗೊಳ್ಳಿ ರಾಯಣ್ಣ ಯುವಕರ ಸಂಘದ ಪದಾಧಿಕಾರಿಗಳು, ವಿದ್ಯಾರ್ಥಿಗಳ ಪಾಲಕರು ಹಾಜರಿದ್ದರು.