ಕಟ್ಟೆಮಳಲವಾಡಿಯ ಡಿ.ದೇವರಾಜ ಅರಸು ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಪ್ರತಿಭಟನಾನಿರತ ರೈತರನ್ನು ಉದ್ದೇಶಿಸಿ ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು. ಶಾಸಕ ಜಿ.ಡಿ.ಹರೀಶ್‌ಗೌಡ, ಮಾಜಿ ಶಾಸಕ ಅಶ್ವಿನ್‌ಕುಮಾರ್, ಕೆ.ಮಹದೇವ್, ಪ್ರಸನ್ನಕುಮಾರ್, ಹರವೆ ಶ್ರೀಧರ್ ಇದ್ದರು.
- ತಂಬಾಕು ದರದಲ್ಲಿ ದಿಢೀರ್ ಕುಸಿತ
- ತಂಬಾಕು ಮಂಡಳಿ ಅಧಿಕಾರಿಯ ಅನುಚಿತ ಮಾತುಗಳಿಂದ ರೋಸಿ ಹೋದ ರೈತರು
ಹುಣಸೂರು: ತಂಬಾಕು ದರದಲ್ಲಿ ದಿಢೀರ್ ಕುಸಿತ ಮತ್ತು ತಂಬಾಕು ಮಂಡಳಿ ಅಧಿಕಾರಿಯ ಅನುಚಿತ ಮಾತುಗಳಿಂದ ರೋಸಿ ಹೋದ ರೈತರು ಬುಧವಾರ ಹರಾಜು ಮಾರುಕಟ್ಟೆಯನ್ನು ಬಂದ್ ಮಾಡಿ ಪ್ರತಿಭಟಿಸಿದರಲ್ಲದೆ, 4 ಗಂಟೆಗೂ ಹೆಚ್ಚು ಕಾಲ ಹುಣಸೂರು-ಕೆ.ಆರ್.ನಗರ ರಾಜ್ಯ ಹೆದ್ದಾರಿ ಸಂಚಾರ ಬಂದ್ ಮಾಡಿದರು.
ಪ್ರತಿಭಟನಾ ಸ್ಥಳಕ್ಕೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮತ್ತು ಶಾಸಕ ಜಿ.ಡಿ.ಹರೀಶ್‌ಗೌಡ ಭೇಟಿ ನೀಡಿ ರೈತರನ್ನು ಸಮಾಧಾನಿಸಿ ಪ್ರತಿಭಟನೆ ಹಿಂಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾದರು.
ಅಧಿಕಾರಿಯ ಅನುಚಿತ ಮಾತುಗಳು: ಹರಾಜು ಮಾರುಕಟ್ಟೆ 64ರಲ್ಲಿ ರೈತರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ವೇಳೆ ದರ ಕುಸಿತದಿಂದ ಕಂಗಾಲಾಗಿ ಸ್ಥಳದಲ್ಲಿದ್ದ ಫೀಲ್ಡ್ ಆಫೀಸರ್ ಕಿರಣ್‌ಕುಮಾರ್‌ಗೆ ಅವಲತ್ತುಕೊಂಡಿದ್ದಾರೆ. ಈ ವೇಳೆ ಕಿರಣ್‌ಕುಮಾರ್, ದರ ಸಿಗಲಿಲ್ಲವೆಂದರೆ ಮಂಡಳಿ ಏನು ಮಾಡಲು ಸಾಧ್ಯ?. ಬೆಲೆ ಸಿಗುತ್ತಿಲ್ಲವೆಂದು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಿರೆಂದು ಅಸಂಬದ್ಧ ಮಾತುಗಳನ್ನು ಆಡಿದ್ದಾರೆ ಎನ್ನಲಾಗಿದೆ. ಇದರಿಂದ ಕೆರಳಿದ ರೈತರು ಮಾರುಕಟ್ಟೆಯ ಹರಾಜು ಅಧೀಕ್ಷಕ ಮೀನಾ ಮತ್ತು ಫೀಲ್ಡ್ ಆಫೀಸರ್ ಕಿರಣ್‌ಕುಮಾರ್ ಅವರಿಗೆ ಮುತ್ತಿಗೆ ಹಾಕಿ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಅಧೀಕ್ಷಕ ಮೀನಾ ಹೇಗೋ ಅಲ್ಲಿಂದ ತಪ್ಪಿಸಿಕೊಂಡರೆ, ಕಿರಣ್‌ಕುಮಾರ್ ಮೇಲೆ ರೈತರು ಮುಗಿಬಿದ್ದರು. ಅಲ್ಲಿಂದ ಹೇಗೋ ತಪ್ಪಿಸಿಕೊಂಡು ದಾಸ್ತಾನು ಕೊಠಡಿಗೆ ತರೆಳಿ ಬಾಗಿಲು ಮುಚ್ಚಿಕೊಂಡರೂ ಬಾಗಿಲು ಒಡೆದು ನುಗ್ಗಿ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಷಯ ಹರಡುತ್ತಿದ್ದಂತೆ ಮಾರುಕಟ್ಟೆ ಪ್ರಾಂಗಣದಲ್ಲಿದ್ದ ರೈತರು ಕಟ್ಟಡದ ಕಿಟಕಿಗಾಜುಗಳನ್ನು ಕಲ್ಲಿನಿಂದ ಹೊಡದು ಪುಡಿ ಪುಡಿ ಮಾಡಿದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಡಿವೈಎಸ್‌ಪಿ ರವಿ ರೈತರನ್ನು ಸಮಾಧಾನಿಸಿ ಹೊರಕಳುಹಿಸಿದರು.
4 ಗಂಟೆ ಕಾಲ ರಸ್ತೆತಡೆ: ಮಾರುಕಟ್ಟೆಯಿಂದ ಬೆಳಗ್ಗೆ 9 ಗಂಟೆಗೆ ಹೊರಬಂದ ರೈತರು ಸತತ 4 ಗಂಟೆಗಳ ಕಾಲ ಮಂಡಳಿ ಮುಂಭಾಗದ ಮುಖ್ಯರಸ್ತೆ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು. ಮಂಡಳಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಅಧಿಕಾರಿ ವಿರುದ್ಧ ಶಿಸ್ತುಕ್ರಮಕ್ಕೆ ಆಗ್ರಹಿಸಿದರು. ಮತ್ತು ಕೆಜಿಗೆ 320 ರೂ.ಗಳಿಗಿಂತ ಕಡಿಮೆ ದರ ನೀಡದಂತೆ ಆಗ್ರಹಿಸಿದರು.
ಸಸ್ಪೆಂಡ್ ಮಾಡಲು ಆಗ್ರಹ: ಶಾಸಕ ಜಿ.ಡಿ.ಹರೀಶ್‌ಗೌಡರಿಗೆ ವಿಷಯ ತಿಳಿದು ಪಿರಿಯಾಪಟ್ಟಣದಲ್ಲಿ ಬುಧವಾರ ಆಯೋಜನೆಗೊಂಡಿದ್ದ ಜನರೊಂದಿಗೆ ಜನತಾದಳ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಯೊಂದಿಗೆ ಪ್ರತಿಭಟನಾ ಸ್ಥಳಕ್ಕೆ ಧಾವಿಸಿದರು.
ಈ ವೇಳೆ ಮಾತನಾಡಿದ ಶಾಸಕ ಜಿ.ಡಿ.ಹರೀಶ್‌ಗೌಡ, ರೈತರೊಂದಿಗೆ ಅನುಚಿತವಾಗಿ ವರ್ತಿಸಿರುವ ಅಧಿಕಾರಿಯನ್ನು ಸಸ್ಪೆಂಡ್ ಮಾಡಬೇಕು. ನಾವು ಎಂದಿಗೂ ರೈತಪರ ನಿಲುವ ಹೊಂದಿರುವರೆ ಹೊರತು ಅಧಿಕಾರಿಗಳ ಪರವಲ್ಲ. ಕಳೆದ ಸಾಲಿನಲ್ಲೂ ಬೆಲೆ ಕುಸಿತವಾದ ವೇಳೆ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಮೂಲಕ ಕೇಂದ್ರ ವಾಣಿಜ್ಯ ಮಂತ್ರಿ ಪಿಯೂಷ್ ಗೋಯಲ್‌ರನ್ನು ಭೇಟಿ ಸಮಸ್ಯೆ ಪರಿಹರಿಸಲಾಗಿತ್ತು. 50-60 ರೂ. ಕುಸಿದರೆ ರೈತರು ಆತಂಕಪಡುವುದು ಸಹಜ. ಇದೀಗ ಮತ್ತೆ ಕುಮಾರಸ್ವಾಮಿಗೆ ಮಾಹಿತಿ ನೀಡಲಾಗುವುದೆಂದರು.
ಪೋನ್‌ನಲ್ಲಿ ಮಾತನಾಡಿದ ಎಚ್‌ಡಿಕೆ: ಪ್ರತಿಭಟನಾನಿರತರ ಮುಂದೆ ನಿಖಿಲ್ ಕುಮಾರಸ್ವಾಮಿ ತಮ್ಮ ತಂದೆ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಫೋನಾಯಿಸಿ ಸಮಸ್ಯೆ ಕುರಿತು ತಿಳಿಸಿದಾಗ, ಇನ್ನೆರಡು ದಿನಗಳಲ್ಲಿ ತಾವು ದೆಹಲಿಗೆ ತೆರಳುವುದಾಗಿಯೂ, ಆ ವೇಳೆ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್‌ರನ್ನು ಭೇಟಿ ಮಾಡಿ ಸಮಸ್ಯೆಯನ್ನು ತಿಳಿಸಿ ದರ ಏರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ರೈತರು ಆತಂಕಪಡದೆ, ಭಾವೋದ್ವೇಗಕ್ಕೆ ಒಳಗಾಗದೆ ಸಹಕಾರ ನೀಡಲು ಕೋರಿದರು.
ನಂತರ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಅಧಿಕಾರಿಯ ನಡವಳಿಕೆೆ ಖಂಡನೀಯ. ದರ ಏರಿಕಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇವೆ. ನಿಮ್ಮ ಮುಂದೆಯೇ ಕೇಂದ್ರ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ರೈತರು ಆತುರದ ನಿರ್ಧಾರಗಳನ್ನು ಕೈಗೊಳ್ಳದೇ ನಮ್ಮೊಂದಿಗೆ ಸಹಕರಿಸಿ ಎಂದು ಕೋರಿ, ಪ್ರತಿಭಟನೆ ಹಿಂಪಡೆಯಲು ಕೋರಿದಾಗ ರೈತರು ಸಮ್ಮತಿಸಿದರು.
ಪ್ರತಿಭಟನೆಯಲ್ಲಿ ರೈತಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಅಗ್ರಹಾರ ರಾಮೇಗೌಡ, ಮುಖಂಡರಾದ ಹಿರಿಕ್ಯಾತನಹಳ್ಳಿ ಸಂಪತ್ತ, ರವಿ, ಪುಟ್ಟರಾಜು ಮಾದಳ್ಳಿ, ಯೋಗೀಶ್, ಗಣೇಶ್, ಮಹೇಶ್, ರಾಜೇಶ್, ಮಹದೇವ್ ಸೇರಿದಂತೆ ಮೂರೂ ಪ್ಲಾಟ್‌ಫಾರ್ಮ್‌ನ ರೈತರು ಭಾಗವಹಿಸಿದ್ದರು. ಮಾಜಿ ಶಾಸಕ ಅಶ್ವಿನ್‌ಕುಮಾರ್, ಕೆ.ಮಹದೇವ್, ಜೆಡಿಎಸ್ ಜಿಲ್ಲಾಧ್ಯಕ್ಷ ಎಸ್‌ಬಿಎಂ ಚಂದ್ರು, ಪ್ರಸನ್ನಕುಮಾರ್, ದಿಡ್ಡಳ್ಳಿ ನವೀನ, ಉದ್ದನಹಳ್ಳಿ ಮಹದೇವ, ಹರವೆ ಶ್ರೀಧರ್, ಕಿರಿಜಾಜಿ ಶಿವಶಂಕರ್, ತಟ್ಟೆಕೆರೆ ಶ್ರೀನಿವಾಸ್ ಅಗ್ರಹಾರ ನಂಜುಂಡೇಗೌಡ ಇತರರು ಹಾಜರಿದ್ದರು.