ಹುಣಸೂರು ನಗರದಲ್ಲಿ ಹನುಮದ್ ವೃತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಪೊಲೀಸರು ಪಥ ಸಂಚಲನ ನಡೆಸಿದರು.
- ಬಿಗಿ ಪೊಲೀಸ್ ಬಂದೋಬಸ್ತ್
- ಪೊಲೀಸರಿಂದ ಆಕರ್ಷಕ ಪಥ ಸಂಚಲನ
ಹುಣಸೂರು : ಅಂಜನಾದ್ರಿ ಟ್ರಸ್ಟ್ ಮತ್ತು ಹನುಮಂತೋತ್ಸವ ಸಮಿತಿ ವತಿಯಿಂದ ಡಿ.4ರಂದು ಆಯೋಜನೆಗೊಂಡಿರುವ ಹನುಮದ್ ವ್ರತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹುಣಸೂರು ನಗರದಲ್ಲಿ 1500ಕ್ಕೂ ಹೆಚ್ಚು ಸಿಬ್ಬಂದಿಯನ್ನೊಳಗೊಂಡು ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿದೆ.
ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸರ್ವಸನ್ನದ್ಧವಾಗಿದ್ದು, ಅಂತಿಮ ಹಂತದ ತಯಾರಿಗಳನ್ನು ಬುಧವಾರ ಸಂಜೆ ಕೈಗೊಂಡಿತು. ಕೆಎಸ್‌ಆರ್‌ಪಿ, ಎಎಸ್‌ಸಿ ತಂಡಗಳೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ಕೈಗೊಂಡು ನಾಗರಿಕರಿಗೆ ಧೈರ್ಯ ತುಂಬುವ ಕಾರ್ಯ ನಡೆಸಿತು.
1500ಕ್ಕೂ ಹೆಚ್ಚು ಪೊಲೀಸರು: 20ಸಾವಿರಕ್ಕೂ ಅಧಿಕ ಹನುಮಭಕ್ತರು ಹನುಮದ್ ವ್ರತದ ಮೆರವಣಿಗೆಯಲ್ಲಿ ಭಾಗವಹಿಸುವ ನಿರೀಕ್ಷೆ ಇರುವ ಕಾರಣ ನಗರದಾದ್ಯಂತ ಪೊಲೀಸ್ ಬಿಗಿ ಪಹರೆ ಆಯೋಜಿಸಲಾಗಿದೆ.
ಶಾಂತಿ ಮತ್ತು ಸೌಹಾರ್ದತೆ ಕಾಯ್ದುಕೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್‌ರ ನೇತೃತ್ವದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿದೆ. 3 ಅಡಿಷನಲ್ ಎಸ್‌ಪಿಗಳು, 6 ಡಿವೈಎಸ್‌ಪಿ, 22 ಇನ್‌ಸ್ಪೆಕ್ಟರ್‌ಗಳು ಬಂದೋಬಸ್ತ್‌ನ ಮೇಲ್ವಿಚಾರಣೆ ನಡೆಸಲಿದ್ದಾರೆ. 4 ರಂದು 65 ಪಿಎಸ್‌ಐಗಳು, 80 ಎಎಸ್‌ಐ, 796 ಎಸ್‌ಎಪಿಸಿಗಳು, 250 ಗೃಹರಕ್ಷಕದಳ ಸಿಬ್ಬಂದಿ ಬಂದೋಬಸ್ತ್ ಕಾರ್ಯ ನಿರ್ವಹಿಸಲಿದ್ದಾರೆ. 8 ಕೆಎಸ್‌ಆರ್‌ಪಿ ತುಕುಡಿ(ತಲಾ 25ಜನ)ಗಳು, 6 ಆರ್‌ಬಿ ತಂಡ, 6 ಡಿಆರ್‌ಪಿ ತಂಡಗಳು, ಎಎಸ್‌ಸಿ ಒಂದು ತಂಡ ಕಾರ್ಯ ನಿರ್ವಹಿಸಲಿದೆ. ನಗರದಾದ್ಯಂತ ಪ್ರಮುಖ ಸ್ಥಳಗಳಲ್ಲಿ 50ಕ್ಕೂ ಹೆಚ್ಚು ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಖಾಸಗಿ ಅಂಗಡಿ ಮಾಲೀಕರು, ಸಂಸ್ಥೆಗಳ ಸಿಸಿ ಕ್ಯಾಮರಾ ಬಳಸಿಕೊಳ್ಳಲಾಗುವುದು. 5 ಡ್ರೋನ್‌ಗಳ ಕಣ್ಗಾವಲು ಇರಲಿದೆ. 25 ಜನ ಹ್ಯಾಂಡಿ ಕ್ಯಾಮರಾದೊಂದಿಗೆ ಮೆರವಣಿಗೆಯ ಚಿತ್ರೀಕರಣ ಕೈಗೊಳ್ಳಲಿದ್ದಾರೆ. ಅಲ್ಲದೇ ಒಂದು ಕಮಾಂಡೋ ಪಡೆ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಕಾರ್ಯಪ್ರವೃತ್ತವಾಗಲಿದೆ.
ಚೆಕ್‌ಪೋಸ್ಟ್‌ಗಳ ನಿರ್ಮಾಣ: ನಗರವ್ಯಾಪ್ತಿಯ ಹಾಳಗೆರೆ, ಚಿಕ್ಕಹುಣಸೂರು ವೃತ್ತ, ರತ್ನಪುರಿ ರಸ್ತೆ ವೃತ್ತ, ಎಪಿಎಂಸಿ ವೃತ್ತ, ಕಿರಿಜಾಜಿ ವೃತ್ತ ಮತ್ತು ರಂಗನಾಥ ಬಡಾವಣೆ ವೃತ್ತದ ಬಳಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದ್ದು, ನಗರದ ಸುತ್ತಲಿ 5ಕಿ.ಮೀ.ವ್ಯಾಪ್ತಿಯ ಚಿಲ್ಕುಂದ, ಗುರುಪುರ, ಕಟ್ಟಮಳಲವಾಡಿ, ಮೂಕನಹಳ್ಳಿ, ಅಣ್ಣೂರು ಗ್ರಾಮಗಳನ್ನು ಒಳಗೊಂಡು ಬುಧವಾರ ಸಂಜೆಯಿಂದ ಗುರುವಾರ ಮಧ್ಯರಾತ್ರಿ 12ರವರೆಗೆ ಮದ್ಯದಂಗಡಿಗಳನ್ನು ಬಂದ್ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.