ಹುಣಸೂರು ನಗರದಲ್ಲಿ ಹಿಂದೂ ಸಮಾಜೋತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ ಬೃಹತ್ ಶೋಭಾಯಾತ್ರೆಯಲ್ಲಿ ಹಿಂದೂ ಮುಖಂಡರು ಮತ್ತುನಾಗರಿಕರು ಪಾಲ್ಗೊಂಡಿದ್ದರು. ಎಸ್.ರಾಧಾಕೃಷ್ಣ, ಉಮೇಶ್, ಸತ್ಯಪ್ಪ, ದೇವರಳ್ಳಿ ಸೋಮಶೇಖರ್, ಗಣೇಶ್ ಕುಮಾರಸ್ವಾಮಿ ಇತರರಿದ್ದರು. 22ಊಓ2: ಮೆರವಣಿಗೆಯಲ್ಲಿ ಆಸ್ಪತ್ರೆ ಕಾವಲ್ ಗ್ರಾಮದವರಿಂದ ಗೆಜ್ಜೆಕುಣಿತ. 
ಮೈಸೂರು

ಅನುಭವಜನ್ಯ ಧರ್ಮ ಹಿಂದೂ

ಹುಣಸೂರು: ಹಿಂದೂ ಧರ್ಮ ಎನ್ನುವುದು ಅನುಭವಜನ್ಯ ಧರ್ಮವಾಗಿದ್ದು, ವಿಶ್ವದ ಯಾವುದೇ ಧರ್ಮ ಇಂತಹ ವೈಶಿಷ್ಟ್ಯತೆಯನ್ನು ಹೊಂದಿಲ್ಲವೆಂದು ವಿದ್ಯಾಭಾರತಿ ಪ್ರಾಂತ ಸಂಯೋಜಕ ಬೌದ್ಧಿಕ್ ಉಮೇಶ್ ಅಭಿಪ್ರಾಯಪಟ್ಟರು.
ಹಿಂದೂ ಸಮಾಜೋತ್ಸವ ಸಮಿತಿ ವತಿಯಿಂದ ಅಯೋಧ್ಯೆಯಲ್ಲಿ ಶ್ರೀರಾಮಮಂದಿರದ 2ನೇ ವರ್ಷದ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ 100ನೇ ವಾರ್ಷಿಕೋತ್ಸವದ ಅಂಗವಾಗಿ ಗುರುವಾರ ನಗರದಲ್ಲಿ ಆಯೋಜಿಸಿದ್ದ ಹಿಂದೂ ಸಮಾಜೋತ್ಸವ ಬೃಹತ್ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ನಂತರ ಮುನೇಶ್ವರ ಕಾವಲ್ ಮೈದಾನದಲ್ಲಿ ಆಯೋಜಿಸಿದ್ದ ವೇದಿಕೆ ಸಮಾರಂಭದಲ್ಲಿ ಮಾತನಾಡಿದರು.
ಹಿಂದೂ ಎನ್ನುವುದು ಜೀವನಾನುಭವಕ್ಕೆ ಬರುವ ಧರ್ಮ. ಹಿಂದೂ ಧರ್ಮವನ್ನು ಇನ್ನೊಬ್ಬರಿಂದ ಅರ್ಥೈಸಲು ಸಾಧ್ಯವಿಲ್ಲ. ಆದರೆ ಅರ್ಥ ಮಾಡಿಕೊಳ್ಳಬಹುದು. ಹಿಂದೂ ವ್ಯಕ್ತಿ ತನ್ನ ದೇವರ ಹೆಸರನ್ನು ತಾನು ಇಟ್ಟುಕೊಂಡು ಶಾಂತಿ, ಸಮಾಧಾನ, ಸಹನೆ, ಸನ್ನಡತೆ ತಂದುಕೊಳ್ಳಬಹುದು. ವಿಶ್ವದ ಯಾವುದೇ ಧರ್ಮದಲ್ಲಿ ಇದಕ್ಕೆ ಅವಕಾಶವಿಲ್ಲ. ಪುಸ್ತಕದ ಹೆಸರಿನಲ್ಲಿ ಅಥವಾ ದೇವದೂತನ ಹೆಸರಿನಲ್ಲಿ ಭಯೋತ್ಪಾದನೆಯಂತಹ ಕೃತ್ಯಕ್ಕೆ ಹಿಂದೂಧರ್ಮದಲ್ಲಿ ಅವಕಾಶವಿಲ್ಲ. ಹಿಂದೂ ಎಲ್ಲರನ್ನೊಳಗೊಳ್ಳುವ ಸಂಘಟನೆ. ಹಿಂದೂ ಸಂಸ್ಕೃತಿ, ಪರಂಪರೆ, ಸಭ್ಯತೆಯ ಪ್ರತೀಕಗಳಾದ ಆಯುರ್ವೇದ ಪದ್ಧತಿ, ಯೋಗ ಎಲ್ಲವೂ ವಿದೇಶಿಯರನ್ನು ಆಕರ್ಷಿಸಲು ಇದೇ ಕಾರಣವಾಗಿದೆ ಎಂದರು.
ಇತ್ತೀಚಿನ ವರ್ಷಗಳಲ್ಲಿ ಹಿಂದೂ ಸಮುದಾಯ ಸಂಘಟನೆಯತ್ತ ಮುನ್ನುಗ್ಗಿದೆ. ರಾಮಾಯಣ ಸುಳ್ಳು ಎಂದವರ ಪರದೆ ಕಳಚುತ್ತಿದೆ. ಹಿಂದೂ ಎಂದು ಹೇಳಿಕೊಂಡಲ್ಲಿ ಅದು ಘರ್ಜನೆಯಾಗಿ ಪರಿವರ್ತಿತವಾಗುತ್ತಿದೆ. ಹಿಂದೂಶಕ್ತಿ ಬಲಯುತವಾದಲ್ಲಿ ಅಕ್ಕಪಕ್ಕದ ದೇಶಗಳು ಹಿಂದೂ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗುತ್ತವೆ ಎನ್ನುವುದಕ್ಕೆ ಬರ್ಮಾ, ಮಾರೀಷಿಯಸ್, ಥಾಯ್ಲೆಂಡ್ ಮುಂತಾದ ದೇಶಗಳೇ ಜ್ವಲಂತ ಉದಾಹರಣೆಯಾಗಿದೆ ಎಂದರು.
ದೇಶದ ಧಾರ್ಮಿಕ ಕ್ಷೇತ್ರದಲ್ಲಿ ಎಲ್ಲ ಸಂತರೂ ಒಂದೇ ಸೂರಿನಡಿ ಬರುತ್ತಿದ್ದಾರೆ. ಸಾಮಾಜಿಕ ಕ್ಷೇತ್ರದ ನಕಾರಾತ್ಮಕ ಪ್ರತಿಪಾದನೆಗಳಿಗೆ ಉತ್ತರ ಸಿಗುತ್ತಿದೆ. ಈ ಎಲ್ಲ ಸಮಸ್ಯೆಗಳಿಗೆ ಜನಸಾಮಾನ್ಯರು ಸಂಘಟನೆಯಾಗಿ ಹಿಂದೂ ಎನ್ನುವ ಹೆಮ್ಮೆ ಹೊಂದಿದಾಗ ಮಾತ್ರ ಪರಿಹಾರ ಸಾಧ್ಯ. ಆ ದಿಸೆಯಲ್ಲಿ ದೇಶ ಸಾಗುತ್ತಿರುವುದು ಸಂತಸದ ಸಂಗತಿಯಾಗಿದೆ. ಹಾಗೆಂದು ಕೊರತೆಗಳು ಇಲ್ಲವೆಂದಲ್ಲ, ನಾಗರಿಕ ಪ್ರಜ್ಞೆ, ಪರಿಸರ ಕಾಳಜಿ, ಸಾಮರಸ್ಯ ಸ್ಥಾಪಿಸುವ ಮುಂತಾದ ವಿಷಯಗಳಲಿ ಪರಿವರ್ತನೆಯಾಗುವ ಮೂಲಕ ಸಂಘಟನೆ ಶಕ್ತಿಯುತವಾಗಬೇಕಿದೆ. ಅದಕ್ಕಾಗಿಯೇ ದೇಶಾದ್ಯಂತ ಇಂತಹ ಸಮಾಜೋತ್ಸವಗಳು ಆಗಾಗೆ ಅಯೋಜನೆಗೊಳ್ಳಬೇಕಿದೆ ಎಂದರು.
ಸಮಿತಿ ಅಧ್ಯಕ್ಷ ಎಸ್.ರಾಧಾಕೃಷ್ಣ ಮಾತನಾಡಿ, 5 ಶತಮಾನಗಳ ನಿರಂತರ ಹೋರಾಟ, ಲಕ್ಷಾಂತರ ಜನರ ಬಲಿದಾನದ ನಂತರ ಎರಡು ವರ್ಷಗಳ ಹಿಂದೆ ಅಯೋಧ್ಯೆಯಲ್ಲಿ ಬಾಲರಾಮ ಪ್ರತಿಷ್ಠಾಪಿಸಲ್ಪಟ್ಟಿದ್ದಾನೆ. ವಿಶ್ವದ ಯಾವುದೇ ಸಂಘಟನೆ ಶತಮಾನಗಳ ಕಾಲ ತನ್ನ ಅಸ್ತಿತ್ವವನ್ನು ಸಕ್ರಿಯವಾಗಿ ಉಳಿಸಿಕೊಂಡಿರುವ ಉದಾಹರಣೆ ಇಲ್ಲ.ಅದಕ್ಕೆ ಅಪವಾದವೆನ್ನುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘ ನಮ್ಮ ದೇಶದಲ್ಲಿ ದೇಶದ ಸರ್ವರ ಏಳಿಗೆಗಾಗಿ ನಿಸ್ವಾರ್ಥ ಸೇವೆ ನೀಡುತ್ತಿದೆ. ವಿದೇಶಿಯರು ಭಾರತವನ್ನು ಸಾವಿರಾರು ವರ್ಷಗಳ ಕಾಲ ಆಳಿ, ದಾಳಿ ನಡೆಸಿ ದರೋಡೆ ಮಾಡಿದರೂ ನಮ್ಮ ನೆಲದ ಅಂತಃಸತ್ವವನ್ನು ಅಳಿಸಲು ಸಾಧ್ಯವಾಗಲಿಲ್ಲ. ಇದಕ್ಕೆ ಮೂಲ ಕಾರಣ ಹಿಂದೂಧರ್ಮ. ಹಿಂದೂ ಧರ್ಮ ಅದೊಂದು ಜೀವನಶೈಲಿಯಾಗಿದ್ದು, ಹಾಗಾಗಿಯೇ ದಬ್ಬಾಳಿಕೆಗೆ ಮಣಿಯಲಿಲ್ಲ. ಈ ಭೂಮಿಯನ್ನು ನಮ್ಮ ತಾಯಿಯೆಂದು ಪೂಜಿಸುವ ನಮ್ಮ ಸಂಸ್ಕೃತಿಯೇ ನಮ್ಮನ್ನು ಕಾಪಿಡುತ್ತಿದೆ. ಎಲ್ಲರೂ ಒಂದಾಗಿ ಭಾರತಮಾತೆಯನ್ನು ಪೂಜಿಸೋಣ, ಬೆಳೆಸಿ ಉಳಿಸೋಣವೆಂದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಆಂಜನೇಯಸ್ವಾಮಿ ದೇಗುಲದ ಆವರಣದಲ್ಲಿ ಬೃಹತ್ ಶೋಭಾಯಾತ್ರೆಗೆ ಮಾದಳ್ಳಿ ಉಕ್ಕಿನಕಂತೆ ಮಠದ ಶ್ರೀ ಸಾಂಬಸದಾಶಿವ ಸ್ವಾಮೀಜಿ ಚಾಲನೆ ನೀಡಿದರು.
ಶೋಭಾಯಾತ್ರೆಯಲ್ಲಿ ಗಾವಡಗೆರೆಯ ಗೋವಿಂದನಾಯಕ ನೇತೃತ್ವದ ಡೊಳ್ಳುಕುಣಿತ, ಆಸ್ಪತ್ರೆಕಾವಲ್ ಗ್ರಾಮದ ಫಲಕುಣಿತ, ಎಚ್.ಡಿ.ಕೋಟೆ ತಾಲೂಕಿನ ವೀರಗಾಸೆ ತಂಡ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಿದ್ದವು. ಶ್ರೀರಾಮ, ಲಕ್ಷ್ಮಣ, ಸೀತಾಮಾತೆ ಮತ್ತು ಆಂಜನೇಯ ಒಳಗೊಂಡ ಪಂಚಲೋಹದ ವಿಗ್ರಹ, ಶ್ರೀರಾಮದೇವರ ಬೃಹತ್ ಉತ್ಸವಮೂರ್ತಿಯನ್ನು ಭವ್ಯ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮುನೇಶ್ವರ ಕಾವಲ್ ಮೈದಾನದಲ್ಲಿ ಸಂಪನ್ನಗೊಂಡಿತು.
ಶೋಭಾಯಾತ್ರೆಯಲ್ಲಿ ಸಮಿತಿಯ ಪ್ರಧಾನಕಾರ್ಯದರ್ಶಿ ರವಿಕುಮಾರ್, ಸಹಕಾರ್ಯದರ್ಶಿ ಶ್ರೀದತ್ತ, ಸದಸ್ಯರಾದ ಪ್ರಕಾಶ್, ರಮೇಶ್, ವೆಂಕಟೇಶ್, ರಜತ್, ರಘುವೀರ್‌ಜಿ, ಮಹದೇವ್ ಬಾಗಲ್, ನಾರಾಯಣ್, ಸುರೇಶ್, ಹನುಮಂತೋತ್ಸವ ಸಮಿತಿ ಅಧ್ಯಕ್ಷ ವಿ.ಎನ್.ದಾಸ್, ಮುಖಂಡರಾದ ಗಣೇಶ್ ಕುಮಾರಸ್ವಾಮಿ, ಸತ್ಯಪ್ಪ, ದೇವರಳ್ಳಿ ಸೋಮಶೇಖರ್, ಕೃಷ್ಣಕುಮಾರ್, ಆಡಿಟರ್ ನಾಗರಾಜ್, ಸುಬ್ರಮಣ್ಯರಾವ್, ಕಮಲಮ್ಮ, ಯಶೋದಮ್ಮ, ಸವಿತಾ ಚೌಹಾಣ್, ಅರುಣ್ ಚೌಹಾಣ್, ರವಿಕುಮಾರ್, ಸಂಘಪರಿವಾರದ ಸದಸ್ಯರು ಇದ್ದರು. ವೇದಿಕೆ ಕಾರ್ಯಕ್ರಮದಲ್ಲಿ ಮಾಧವ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಸೀತಾಪಹರಣ ನಾಟಕ ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.