ಹುಣಸೂರು ತಾಲೂಕು ಬನ್ನಿಕುಪ್ಪೆ ಗ್ರಾಮದಲ್ಲಿ ತಾಪಂ ಇಒ ಕೆ.ಹೊಂಗಯ್ಯ ಎಸ್‌ಐಆರ್ ಸಹಾಯ ಕೇಂದ್ರಕ್ಕೆ ಚಾಲನೆ ನೀಡಿದರು. ಪಿಡಿಒ ರಾಘವೇಂದ್ರ ಪ್ರಸನ್ನ ಇದ್ದರು. 
ಮೈಸೂರು

41 ಗ್ರಾಪಂಗಳಲ್ಲಿ ಬಿಎಲ್‌ಒ, ವೋಟರ್ ಸಹಾಯ ಕೇಂದ್ರ

ಹುಣಸೂರು: ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯಕ್ರಮ(ಎಸ್‌ಐಆರ್) ಆರಂಭವಾಗಿದ್ದು, ತಾಲೂಕಿನ 41 ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಬಿಎಲ್‌ಒ ಮತ್ತು ವೋಟರ್ ಫೆಸಿಲಿಟೇಷನ್ ಸೆಂಟರ್(ಸಹಾಯ ಕೇಂದ್ರ)ಗಳನ್ನು ತೆರೆಯಲಾಗಿದ್ದು, ಮತದಾರರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸ್ವೀಪ್ ಸಮಿತಿ ತಾಲೂಕು ನೋಡಲ್ ಅಧಿಕಾರಿ ಕೆ.ಹೊಂಗಯ್ಯ ತಿಳಿಸಿದರು.
ಗುರುವಾರ ಬನ್ನಿಕುಪ್ಪೆ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಸಹಾಯಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈಗಾಗಲೇ ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯ ಪ್ರಗತಿಯಲ್ಲಿದ್ದು, ಇದರ ಅಡಿಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಪರಿಶೀಲನೆ ಹಾಗೂ ಹೊಸ ನೋಂದಣಿ ಪ್ರಕ್ರಿಯೆಗಳನ್ನು ನಡೆಸುತ್ತಿದ್ದು, ಗ್ರಾಮೀಣ ಭಾಗದಲ್ಲಿರುವ ಜನರಿಗೆ ಅನುಕೂಲ ಕಲ್ಪಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದ ಪರಿಶೀಲನೆ ಹಾಗೂ ಸೇವೆಗಳನ್ನು ಸುಲಭವಾಗಿ ಒದಗಿಸಲು ಭಾರತೀಯ ಚುನಾವಣಾ ಆಯೋಗದಿಂದ ಸಹಾಯ ಕೇಂದ್ರವನ್ನು ತೆರೆಯಲಾಗಿದೆ ಎಂದರು.
ಮತದಾರರ ಪಟ್ಟಿ ಶುದ್ಧೀಕರಣದ ಉದ್ದೇಶದಿಂದ ನಡೆಯುತ್ತಿರುವ ಮತದಾರರ ಪರಿಷ್ಕರಣೆ ಪ್ರಕ್ರಿಯೆಗೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕಿದ್ದು, ಈ ವೇಳೆ ಹೊಸ ಹೆಸರು ಸೇರ್ಪಡೆ, ತಿದ್ದುಪಡಿ, ಮೃತಪಟ್ಟವರು ಮತ್ತು ಸ್ಥಳಾಂತರಗೊಂಡವರ ಹೆಸರು ತೆಗೆದುಹಾಕುವ ಕೆಲಸ ನಡೆಯಲಿದೆ. ಒಬ್ಬರ ಹೆಸರು ಹಲವು ಕಡೆ ಇರುವುದು, ನಕಲಿ ಮತದಾರರ ಸೇರ್ಪಡೆಯನ್ನು ತಡೆಯಲು ಈ ಪರಿಷ್ಕರಣೆ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.
ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ. ಆ.5 ರಿಂದ ಸೆ.4ರವರೆಗೆ ಆಕ್ಷೇಪಣೆ ಮತ್ತು ಸಲಹೆ ಸಲ್ಲಿಸಲು ಅವಕಾಶವಿದ್ದು, ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ ಎಂದು ತಿಳಿಸಿದರು.
ಪಿಡಿಒ ರಾಘವೇಂದ್ರ ಪ್ರಸನ್ನ ಇದ್ದರು.