ಹುಣಸೂರಿನಲ್ಲಿ ಏರ್ಪಡಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಸಮಾರಂಭವನ್ನು ಪ್ರಧಾನ ಸಿವಿಲ್ ನ್ಯಾಯಾಧೀಶೆ ಆಯಿಷಾಬಿ ಪಿ.ಮಜಿದ್ ಉದ್ಘಾಟಿಸಿದರು. ಎಪಿಪಿ ಎಚ್.ಡಿ.ಪಾರ್ವತಿ, ಸುಮಂಗಲಿ ಇತರರಿದ್ದರು. 
ಮೈಸೂರು

ಆತ್ಮವಿಶ್ವಾಸವಿದ್ದಲ್ಲಿ ಅಂಗವೈಕಲ್ಯ ನಗಣ್ಯ

ಹುಣಸೂರು: ಆತ್ಮವಿಶ್ವಾಸವಿದ್ದಲ್ಲಿ ಅಂಗವೈಕಲ್ಯ ನಗಣ್ಯವಾಗಲಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶೆ ಹಾಗೂ ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ಆಯಿಷಾಬಿ ಪಿ.ಮಜಿದ್ ಅಭಿಪ್ರಾಯಪಟ್ಟರು.
ನಗರದ ತಾಪಂ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಸಿಡಿಪಿಒ ಹಾಗೂ ಹಿರಿಯ ನಾಗರಿಕ ಹಾಗೂ ವಿಶೇಷ ಚೇತನರ ಸಬಲೀಕರಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಎಲ್ಲವೂ ಸರಿಯಿರುವ ವ್ಯಕ್ತಿಗಳಲ್ಲಿಯೂ ಕೆಲಸ ಮಾಡುವ ಸಾಮರ್ಥ್ಯವಿರುವುದಿಲ್ಲ. ಹಾಗಾಗಿ ಆತ್ಮವಿಶ್ವಾಸ ಇರುವ ಕಡೆ ಅಂಗವೈಕಲ್ಯ ಎಂಬುದು ಕಂಡುಬರುವುದಿಲ್ಲ. 2016ರಲ್ಲಿ ಅಂಗವಿಕಲರ ಸಬಲೀಕರಣಕ್ಕಾಗಿ ಅನೇಕ ಯೋಜನೆ ಕಲ್ಪಿಸಿದೆ, ಇದರ ಸೌಲಭ್ಯವನ್ನು ಪಡೆದುಕೊಳ್ಳಬೇಕು. ಐ.ಡಿ. ಕಾರ್ಡ್ ಪಡೆದುಕೊಂಡರೆ ಸಾಲದು, ನಿಮ್ಮ ಹಕ್ಕು ಹಾಗೂ ದೊರೆಯುವ ಉಚಿತ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಡಿ.3ರಂದು ವಿಶ್ವದೆಲ್ಲೆಡೆ ವಿಶ್ವ ಅಂಗವಿಕಲರ ದಿನ ಆಚರಿಸಿ ಸಮಗ್ರ ಮಾಹಿತಿ ನೀಡಲಾಗುತ್ತಿದೆ. ಉಚಿತ ಕಾನೂನು ನೆರವು ದೊರೆಯಲಿದ್ದು, ಪ್ರಯೋಜನ ಪಡೆದುಕೊಳ್ಳುವಂತೆ ಸೂಚಿಸಿದರು.
ವಕೀಲರ ಸಂಘದ ಅಧ್ಯಕ್ಷ ಎಸ್.ಶಿವಣ್ಣೇಗೌಡ ಮಾತನಾಡಿ, ಅಂಗವಿಕಲರಲ್ಲಿ ವಿಶೇಷತೆ ಇರಲಿದೆ. ಆತ್ಮಸ್ಥೈರ್ಯ ಕುಗ್ಗಿಸಿಕೊಳ್ಳದೆ ಎಲ್ಲ ರಂಗಗಳಲ್ಲೂ ನಿಮ್ಮಲ್ಲಿರುವ ಶಕ್ತಿ, ಪ್ರತಿಭೆಯನ್ನು ಪ್ರದರ್ಶಿಸಿರಿ ಎಂದರು.
ತಾಪಂ ಇಒ ಹೊಂಗಯ್ಯ ಮಾತನಾಡಿ, ಅಂಗವಿಕಲರು ಸಮಾನ್ಯ ಜನರೊಂದಿಗೆ ಬದುಕು ರೂಪಿಸಿಕೊಳ್ಳಬೇಕು. ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು. ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಸಾಮಾನ್ಯ ಜನರಂತೆ ಬದುಕು ರೂಪಿಸಿಕೊಳ್ಳಿರೆಂದರು.
ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ-2016ರ ಕುರಿತು ಪ್ಯಾನಲ್ ವಕೀಲ ಎನ್.ಶ್ರೀಧರ್ ಹಾಗೂ ಅಂಗವಿಕಲರಿಗೆ ಇರುವ ಸರ್ಕಾರಿ ಸವಲತ್ತುಗಳ ಕುರಿತು ಹಿರಿಯ ನಾಗರಿಕರ ವಿಶೇಷ ಚೇತನ ಇಲಾಖೆಯ ತಾಲೂಕು ಸಂಯೋಜಕ ದೇವರಾಜು ಉಪನ್ಯಾಸ ನೀಡಿದರು.
ಸಹಾಯಕ ಸರ್ಕಾರಿ ಅಭಿಯೋಜಕಿ ಎಚ್.ಡಿ.ಪಾರ್ವತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಸುಮಂಗಲಿ ಹಾಗೂ ಅಂಗವಿಕಲರು ಭಾಗವಹಿಸಿದ್ದರು.