: ಹುಣಸೂರು ನಗರದ ಬಿಳಿಕೆರೆ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ತಂಡ ಸಮಗ್ರ ಪ್ರಶಸ್ತಿಗೆ ಭಾಜನವಾದ ಹುಂಡಿಮಾಳ ಸರ್ಕಾರಿ ಪ್ರೌಢಶಾಲೆ ಕ್ರೀಡಾಪಟುಗಳು. ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ್, ಮುಖ್ಯಶಿಕ್ಷಕ ಕೆ.ರವಿ ಇತರರಿದ್ದಾರೆ.
ಹುಣಸೂರು : ತಾಲೂಕಿನ ಬಿಳಿಕೆರೆ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಹುಂಡಿಮಾಳ ಸರ್ಕಾರಿ ಪ್ರೌಢಶಾಲೆ ಸಮಗ್ರ ಪ್ರಶಸ್ತಿಗೆ ಭಾಜನವಾಗಿದೆ.
ಕ್ರೀಡಾಪಟುಗಳಾದ ಆದರ್ಶ ಮತ್ತು ಕೀರ್ತನಾ ವೈಯಕ್ತಿಕ ಚಾಂಪಿಯನ್ ಪಟ್ಟ ಗಳಿಸಿದರೆ, ಹ್ಯಾಂಡ್‌ಬಾಲ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ತಾಲೂಕಿಗೆ ಹೆಮ್ಮೆ ತಂದಿದ್ದಾರೆ.
ಬಿಳಿಕೆರೆ ಹೋಬಳಿ ಚಲ್ಲಹಳ್ಳಿಯ ಶ್ರೀ ವಾಲ್ಮೀಕಿ ಪ್ರೌಢಶಾಲೆ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಬಾಲಕರ ವಿಭಾಗದಲ್ಲಿ ಆದರ್ಶ 400 ಮೀ. ಮತ್ತು 800 ಮೀ. ಓಟದಲ್ಲಿ ಪ್ರಥಮ ಸ್ಥಾನ ಹಾಗೂ ತ್ರಿವಿಧ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದು ವೈಯಕ್ತಿಕ ಚಾಂಪಿಯನ್ನಾಗಿ ಹೊರಹೊಮ್ಮಿದನು. ಬಾಲಕಿಯರ ವಿಭಾಗದಲ್ಲಿ ಕೀರ್ತನಾ 800 ಮೀ. ಮತ್ತು 1,500 ಮೀ. ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ವೈಯಕ್ತಿಕ ಚಾಂಪಿಯನ್ ಪಟ್ಟ ಪಡೆದರು.
ಅಲ್ಲದೇ ಪ್ರೀತಮ್ 1500 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ, ಚಿರಂತ್ 3,000 ಮೀ. ಓಟದಲ್ಲಿ ದ್ವಿತೀಯ ಸ್ಥಾನ ಮತ್ತು 5 ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಶಶಿಕುಮಾರ ಎತ್ತರ ಜಿಗಿತ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿದರೆ, 4*100 ಮೀಟರ್ ರಿಲೇಯಲ್ಲಿ ಆದರ್ಶ, ಚಿರಂತ್, ಆಕಾಶ್, ವರುಣ್ ತಂಡ ಪ್ರಥಮ ಸ್ಥಾನ ಪಡೆದಿದ್ದಾರೆ. 4*400 ಮೀಟರ್ ರಿಲೇ ಸ್ಪರ್ಧೆಯಲ್ಲಿ ಪ್ರೀತಮ್, ಆದರ್ಶ, ಚಿರಂತ್ ಮತ್ತು ಆಕಾಶ್ ತಂಡ ಪ್ರಥಮ ಸ್ಥಾನ ಗಳಿಸಿದೆ.
ಬಾಲಕಿಯರ ವಿಭಾಗದಲ್ಲಿ ಸಹನಾ 100 ಮೀ. ಮತ್ತು 200 ಮೀ. ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಅನ್ಫಾ ಕೌಸರ್ 400 ಮೀ. ಓಟದಲ್ಲಿ ದ್ವಿತೀಯ ಮತ್ತು ತ್ರಿವಿಧ ಜಿಗಿತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಸಿಂಚನಾ 3,000 ಮೀ. ಓಟದಲ್ಲಿ ಪ್ರಥಮ ಸ್ಥಾನ, 3 ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ ರೇಷ್ಮಾ ಪ್ರಥಮ ಸ್ಥಾನ ಗಳಿಸಿದರೆ, ಪೃಥ್ವಿನಿ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡರು. ಐಶ್ವರ್ಯಾ ಗುಂಡು ಎಸೆತ ಮತ್ತು ತಟ್ಟೆ ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. 4*100 ಮೀ. ರಿಲೇ ಸ್ಪರ್ಧೆಯಲ್ಲಿ ಸಹನಾ, ಅನ್ಪಾ ಕೌಸರ್, ಲೀಲಾವತಿ ಕೀರ್ತನಾ ತಂಡ ಪ್ರಥಮ ಸ್ಥಾನ ಹಾಗೂ 4*400 ಮೀ. ರಿಲೇಯಲ್ಲಿ ಅನ್ಫಾ ಕೌಸರ್, ಸಿಂಚನಾ, ಪೃಥ್ವಿನಿ, ಕೀರ್ತನಾ ತಂಡ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾದರು.
ರಾಜ್ಯಮಟ್ಟಕ್ಕೆ ಆಯ್ಕೆ : ಮೈಸೂರು ವಿಭಾಗ ಮಟ್ಟದ 17 ವರ್ಷದೊಳಗಿನ ಬಾಲಕಿಯರ ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ಹುಂಡಿಮಾಳ ಶಾಲೆಯ ಬಾಲಕಿಯರ ಹ್ಯಾಂಡ್ ಬಾಲ್ ತಂಡವು ವಿಭಾಗ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಆಯ್ಕೆಯಾಗಿದೆ ಎಂದು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ್ ತಿಳಿಸಿದ್ದಾರೆ. ಕ್ರೀಡಾಕೂಟದಲ್ಲಿ ಸಾಧನೆಗೈದ ಕ್ರೀಡಾಪಟುಗಳನ್ನು ಮುಖ್ಯಶಿಕ್ಷಕರಾದ ಕೆ.ರವಿ, ಎಸ್‌ಡಿಎಂಸಿ ಅಧ್ಯಕ್ಷೆ ನವೀನ, ಶಿಕ್ಷಕರು ಅಭಿನಂದಿಸಿದ್ದಾರೆ.