ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಹುಂಡಿ ಎಣಿಕೆ ಸಂದರ್ಭ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ, ಆಡಳಿತ ಮಂಡಳಿ ಅಧ್ಯಕ್ಷ ಬಸವೇಗೌಡ, ಬ್ಯಾಂಕ್ ಆಫ್ ಬರೋಡಾದ ವ್ಯವಸ್ಥಾಪಕ ಶ್ರೀನಿವಾಸ್ ಮತ್ತು ಸಿಬ್ಬಂದಿ ಹಾಜರಿದ್ದರು.
ನಂಜನಗೂಡು.: ದಕ್ಷಿಣ ಕಾಶಿ ಶ್ರೀ ನಂಜುಂಡೇಶ್ವರ ದೇವಾಲಯದ ಹುಂಡಿ ಎಣಿಕೆ ಮಾಡಿದ್ದು, ರೂ. 2, 64, 29, 500 ನಗದು ಕಾಣಿಕೆ ಸಂಗ್ರಹವಾಗಿದೆ.
ಕಳೆದ 3 ತಿಂಗಳಿನಿಂದ ಹುಂಡಿಯಲ್ಲಿ ಸಂಗ್ರಹವಾಗಿರುವ ಕಾಣಿಕೆಯನ್ನು ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ಆದೇಶದ ಮೇರೆಗೆ ಬುಧವಾರ ಮತ್ತು ಗುರುವಾರ ದೇಗುಲದ 50 ಕ್ಕೂ ಹೆಚ್ಚು ಸಿಬ್ಬಂದಿ ಎಣಿಕೆ ಕಾರ್ಯ ನಡೆಸಿದರು.
ದಾಸೋಹ ಭವನದ ಸಭಾಂಗಣದಲ್ಲಿ 36 ಹುಂಡಿಗಳನ್ನು ತೆರೆದಾಗ ನಗದಿನೊಂದಿಗೆ 97.70 ಗ್ರಾಂ ಚಿನ್ನ, 2 ಕೆಜಿ 660 ಗ್ರಾಂ ಬೆಳ್ಳಿ, ಅಮೆರಿಕ, ನೇಪಾಳ, ಸೌದಿ ಅರೇಬಿಯಾ, ಕುವೈತ್ ಇಂಗ್ಲೆಂಡ್ ಸೇರಿದಂತೆ ಇತರ ದೇಶದ 42 ಕರೆನ್ಸಿಗಳು ಸಂಗ್ರಹವಾಗಿದೆ. ರೂ. 2,000 ಮುಖ ಬೆಲೆಯ ಮೂರು ನಿಷೇಧಿತ ನೋಟುಗಳೂ ಪತ್ತೆಯಾಗಿವೆ. ಎಣಿಕೆ ಸಂದರ್ಭ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಬಸವೇಗೌಡ, ಇಒ ಕೃಷ್ಣ, ಬ್ಯಾಂಕ್ ಆಫ್ ಬರೋಡಾದ ವ್ಯವಸ್ಥಾಪಕ ಶ್ರೀನಿವಾಸ್ ಮತ್ತು ಸಿಬ್ಬಂದಿ ಹಾಜರಿದ್ದರು.