ನಗರದ ಎಸ್‌ಎಂಟಿ ಆಸ್ಪತ್ರೆಯಲ್ಲಿ ಮಂಗಳವಾರ ಆಯೋಜಿಸಿದ್ದ ಗರ್ಭಕಂಠ ಕ್ಯಾನ್ಸರ್ ನಿರೋಧಕ (ಎಚ್‌ಪಿವಿ) ಲಸಿಕಾ ಅಭಿಯಾನದ ಕಾರ್ಯಕ್ರಮದಲ್ಲಿ ಬಾಲಕಿಗೆ ಎಚ್‌ಪಿವಿ ಲಸಿಕೆಯನ್ನು ಹಾಕಲಾಯಿತು. ಡಾ.ಪಿ.ಸಿ.ಕುಮಾರಸ್ವಾಮಿ, ಡಾ.ಮಹಮ್ಮದ್ ಸಿರಾಜ್ ಅಹಮ್ಮದ್, ಡಾ.ಅರುಣಕುಮಾರ, ಡಾ.ಅನುರಾಧ ಇನ್ನಿತರರಿದ್ದರು.
- ಡಾ.ಪಿ.ಸಿ.ಕುಮಾರಸ್ವಾಮಿ ಅಭಿಪ್ರಾಯ ಜಿಲ್ಲಾ ಮಟ್ಟದ ಲಸಿಕಾ ಅಭಿಯಾನ
- ಎಚ್‌ಪಿವಿ ಲಸಿಕೆಯು ಹ್ಯೂಮನ್ ಪ್ಯಾಪಿಲೋಮವೈರಸ್ ವೈರಸ್‌ನಿಂದ ಉಂಟಾಗುವ ಕೆಲವು ಗಂಭೀರ ಕಾಯಿಲೆಗಳನ್ನೂ ತಡೆಗಟ್ಟಲು ಸಹಾಯ
ಮೈಸೂರು: ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಎಚ್‌ಪಿವಿ ಲಸಿಕೆಯು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ ಹೇಳಿದರು.
ನಗರದ ಎಸ್‌ಎಂಟಿ ಆಸ್ಪತ್ರೆಯಲ್ಲಿ ಮಂಗಳವಾರ ಆಯೋಜಿಸಿದ್ದ 14 ವರ್ಷದ ಹೆಣ್ಣು ಮಕ್ಕಳಿಗೆ ಗರ್ಭಕಂಠ ಕ್ಯಾನ್ಸರ್ ನಿರೋಧಕ (ಎಚ್‌ಪಿವಿ) ಲಸಿಕಾ ಅಭಿಯಾನದ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಈ ಲಸಿಕೆಯು ಹ್ಯೂಮನ್ ಪ್ಯಾಪಿಲೋಮವೈರಸ್ ಸೋಂಕಿನಿಂದ ಉಂಟಾಗುವ ಗರ್ಭಕಂಠದ ಕ್ಯಾನ್ಸರ್ ಮತ್ತು ಇತರ ಕ್ಯಾನ್ಸರ್‌ಗಳಿಂದ ರಕ್ಷಿಸುತ್ತದೆ ಎಂದರು.
ಲಸಿಕೆಯು ಹ್ಯೂಮನ್ ಪ್ಯಾಪಿಲೋಮವೈರಸ್ ವೈರಸ್‌ನಿಂದ ಉಂಟಾಗುವ ಕೆಲವು ಗಂಭೀರ ಕಾಯಿಲೆಗಳನ್ನೂ ತಡೆಗಟ್ಟಲು ಸಹಾಯ ಮಾಡುತ್ತದೆ. ಗರ್ಭಕಂಠ, ಯೋನಿ, ಶಿಶ್ನ, ಗುದ ಮತ್ತು ಗಂಟಲು ವಿವಿಧ ಭಾಗದ ಕ್ಯಾನ್ಸರ್‌ಗಳನ್ನು ಎಚ್‌ಪಿವಿ ಲಸಿಕೆಯಿಂದ ತಡೆಗಟ್ಟಬಹುದಾಗಿದೆ. ಇದರಿಂದ ಹೆಣ್ಣುಮಕ್ಕಳ ಆರೋಗ್ಯವು ನಾಡಿನ ಸುಭದ್ರತೆಯ ಭವಿಷ್ಯದ ಬುನಾದಿಯಾಗಿದೆ ಎಂದರು.
ಪ್ರಸ್ತುತ ಸದರಿ ಲಸಿಕೆಯನ್ನು 14 ವರ್ಷ ತುಂಬಿದ ಹಾಗೂ 15 ವರ್ಷ ವಯಸ್ಸಿನ ಒಳಗಿನ ಹೆಣ್ಣು ಮಕ್ಕಳಿಗೆ ಭಾರತ ಸರ್ಕಾರದ ಮಾರ್ಗಸೂಚಿ ಅನುಸಾರ ನೀಡಲಾಗುತ್ತದೆ. ಸದರಿ ಲಸಿಕಾಕರಣವನ್ನು ರಾಷ್ಟ್ರೀಯ ಸಾರ್ವತ್ರೀಕ ಲಸಿಕಾ ಕಾರ್ಯಕ್ರಮ ಮಾರ್ಗಸೂಚಿ ಅನುಸಾರ ಆಯೋಜನೆ ಮಾಡಲಾಗುತ್ತಿದೆ.
ಜಿಲ್ಲೆಯ ಎಲ್ಲ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ವೈದ್ಯರು, ತಜ್ಞ ವೈದ್ಯರ ಮೂಲಕ ಲಸಿಕೆ ನೀಡಲಿದ್ದಾರೆ ಎಂದರು.
ಲಸಿಕೆ ಪಡೆದ ಮ್ಕಕಳಿಗೆ ಯೂ-ವಿನ್ ತಂತ್ರಾಂಶದಲ್ಲಿ ನೋಂದಣಿ ಮಾಡಿ ಆ ಮೂಲಕ ಲಸಿಕೆ ಪಡೆದ ಫಲಾನುಭವಿಗಳಿಗೆ ಪ್ರಮಾಣ ಪತ್ರವನ್ನೂ ನೀಡಲಾಗುತ್ತದೆ.
ಈ ಹಿನ್ನೆಲೆಯಲ್ಲಿ ಎಲ್ಲ ಫಲಾನುಭವಿಗಳು ಆಗತ್ಯವಾದ ಸೂಕ್ತ ಗುರುತಿನ ಚೀಟಿಯೊಂದಿಗೆ ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆಯನ್ನು ಕಡ್ಡಾಯವಾಗಿ ನೀಡಬೇಕು. ಈ ಲಸಿಕೆಯನ್ನು ಪಡೆಯುವ ಮೂಲಕ ಹೆಣ್ಣು ಮಕ್ಕಳ ಸದೃಢ ಆರೋಗ್ಯವನ್ನು ರಕ್ಷಿಸುವ ನಿಟ್ಟಿನಲ್ಲಿ ಎಲ್ಲ ಪಾಲಕರು ಸಹಕಾರ ನೀಡಬೇಕು ಎಂದರು.
ಹೆಣ್ಣು ಮಕ್ಕಳ ಭವಿಷ್ಯವನ್ನು ಸುರಕ್ಷಿತಗೊಳ್ಳಿಸುವುದರೊಂದಿಗೆ ಸುರಕ್ಷಿತ ಲಸಿಕೆ, ಸುಂದರ ಭವಿಷ್ಯ, ನಮ್ಮ ಹೆಣ್ಣು ಮಕ್ಕಳ ಆರೋಗ್ಯ ನಮ್ಮ ಆದ್ಯತೆ ಎಂಬ ಘೋಷವಾಕ್ಯದೊಂದಿಗೆ ಲಸಿಕೆ ನೀಡಲಾಗುತ್ತಿದೆ. ಗರ್ಭಕಂಠದ ಕ್ಯಾನ್ಸರ್‌ಮುಕ್ತ ಸಮಾಜ ಮಾಡಬೇಕಾಗಿದೆ. ಅದಕ್ಕಾಗಿ ಪ್ರತಿಯೊಬ್ಬ ಅರ್ಹ ಎಲ್ಲ ಹೆಣ್ಣು ಮಗುವಿಗೆ ತಲುಪುವ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯಪ್ರವೃತವಾಗಿದೆ ಎಂದರು.
ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಮಹಮ್ಮದ್ ಸಿರಾಜ್ ಅಹಮ್ಮದ್, ತಾಲೂಕು ಆರೋಗ್ಯಾಧಿಕಾರಿ ಡಾ. ಅರುಣಕುಮಾರ, ಆಡಳಿತ ವೈದ್ಯಾಧಿಕಾರಿ ಡಾ.ಅನುರಾಧ ಇನ್ನಿತರರಿದ್ದರು.