ಸಿ.ನಾರಾಯಣಗೌಡ 
ಮೈಸೂರು

ಮೃತ ಅಡುಗೆ ಸಿಬ್ಬಂದಿ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರಕ್ಕೆ ಹೋಟೆಲ್ ಮಾಲೀಕರ ಸಂಘ ಆಗ್ರಹ

ಪ್ರಮುಖ ಮುಖ್ಯಾಂಶಗಳು

  • ದುರ್ಘಟನೆಯಿಂದ ಎಚ್ಚೆತ್ತು ಅನುಭವ ಇಲ್ಲದವರಿಗೆ ಸಿಕ್ಕ ಸಿಕ್ಕಿದ ಕಡೆ ಅಬಕಾರಿ ಲೈಸೆನ್ಸ್ ನೀಡುವುದನ್ನು ನಿಲ್ಲಿಸಲಿ
  • ಭತ್ತದ ಹುಲ್ಲು, ಬಂಬೂ, ಗೋಣಿಚೀಲ, ಸೌದೆ ಅಲಂಕಾರ ಇವೆಲ್ಲವನ್ನು ನಿಷೇಧ ಮಾಡಬೇಕು
ಮೈಸೂರು:ನಗರದ ದಟ್ಟಗಳ್ಳಿಯ ರೆಸ್ಟೋಪಬ್ಗೆ ಬೆಂಕಿ ತಗುಲಿ ಸಜೀವ ದಹನದಿಂದ ಮೃತಪಟ್ಟ ಅಡುಗೆ ಸಿಬ್ಬಂದಿ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಮೈಸೂರು ಹೋಟೆಲ್ ಮಾಲೀಕರ ಸಂಘ ಸರ್ಕಾರವನ್ನು ಆಗ್ರಹಿಸಿದೆ.
ಬೆಂಕಿ ಅನಾಹುತದಲ್ಲಿ ಅಡುಗೆ ಸಿಬ್ಬಂದಿ ಮೃತಪಟ್ಟಿದ್ದು ದುಃಖದ ವಿಷಯ. ಮೃತರು ಮಣಿಪುರ ಮತ್ತು ನೇಪಾಳ ಮೂಲದವರಾಗಿದ್ದು, ಜೀವನ ನಿರ್ವಹಣೆಗೆ ಮೈಸೂರಿಗೆ ಕಾರ್ಮಿಕರಾಗಿ ಬಂದು ಪಬ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಘಟನೆ ಸಂಬಂಧ ಮಾಲೀಕರಿಂದ 25 ಲಕ್ಷ ರೂ. ಹಾಗೂ ಸರ್ಕಾರದಿಂದ 25 ಲಕ್ಷ ರೂ.ಸೇರಿ ಒಟ್ಟು 50 ರೂ.ನೀಡಿದರೆ ಅವರ ಕುಟುಂಬಕ್ಕೆ ನೆರವಾಗುತ್ತದೆ. ಅಲ್ಲದೇ ಮೃತದೇಹಗಳನ್ನು ಅವರ ಹುಟ್ಟೂರಿಗೆ ಕಳುಹಿಸಲು ವ್ಯವಸ್ಥೆ ಮಾಡಬೇಕಾಗಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ದುರ್ಘಟನೆಯಿಂದ ಎಚ್ಚೆತ್ತು ಅನುಭವ ಇಲ್ಲದವರಿಗೆ ಸಿಕ್ಕ ಸಿಕ್ಕಿದ ಕಡೆ ಅಬಕಾರಿ ಲೈಸೆನ್ಸ್ ನೀಡುವುದನ್ನು ನಿಲ್ಲಿಸಲಿ. ಸಿಎಲ್ 2, ಸಿಎಲ್ 7, ಸಿಎಲ್ 9 ಈ ಲೈಸೆನ್ಸ್ ಪಡೆದವರು ಕಾನೂನು ಬದ್ಧವಾಗಿ ನಡೆದುಕೊಳ್ಳಲಾಗುತ್ತಿದೆಯೇ, ಇಲ್ಲವೇ ಎನ್ನುವುದನ್ನು ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಭತ್ತದ ಹುಲ್ಲು, ಬಂಬೂ, ಗೋಣಿಚೀಲ, ಸೌದೆ ಅಲಂಕಾರ ಇವೆಲ್ಲವನ್ನು ನಿಷೇಧ ಮಾಡಬೇಕು. ಈಗಿನ ವ್ಯಾಪಾರಿಗಳಿಗೆ ಸಿಲಿಂಡರ್ ಎಲ್ಲಿ ಇಡಬೇಕು, ಎಲೆಕ್ಟ್ರಿಕಲ್ ಪವರ್ ಹೇಗೆ ಹಾಕಿಸಬೇಕು, ಒಲೆಗಳು ಹೇಗಿರಬೇಕು ಎನ್ನುವ ತಿಳಿವಳಿಕೆ ಇರುವುದಿಲ್ಲ. ಆದ್ದರಿಂದ ನಗರಪಾಲಿಕೆ, ಅಗ್ನಿಶಾಮಕ, ಸೆಸ್ಕ್, ಅಬಕಾರಿ ಇಲಾಖೆ ಸೇರಿದಂತೆ ಇನ್ನಿತರ ಸಂಬಂಧಪಟ್ಟ ಇಲಾಖೆಗಳು ಸರಿಯಾಗಿ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು. ಇಂತಹ ಅವಘಡಗಳು ಸಂಭವಿಸಿದಾಗ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.