ಕೆ.ಆರ್.ನಗರ ಪಟ್ಟಣದ ಜೆಎಸ್‌ಎಸ್ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ರಸಪ್ರಶ್ನೆ ಕಾರ್ಯಕ್ರಮವನ್ನು ಕ್ಷೇತ್ರ ಸಮನ್ವಯಾಧಿಕಾರಿ ವೆಂಕಟೇಶ್ ಉದ್ಘಾಟಿಸಿದರು.ಡಿ.ಆರ್.ಕಾತ್ಯಾಯಿಣಿ, ಮಹೇಶ್ ಜಿ.ಬಳಿಗಾರ್, ಶ್ವೇತಾರಾಣಿ, ನಳಿನಾ, ಶೈಲಾ ಇದ್ದರು.
ಕೆ.ಆರ್.ನಗರ: ಕನ್ನಡ ಭಾಷೆ ಸಂಪತ್ಭರಿತ ಸಾಹಿತ್ಯ ಹೊಂದಿದ್ದು ಅದರ ಹಿರಿಮೆ ಮತ್ತು ಗರಿಮೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು ವಿದ್ಯಾರ್ಥಿಗಳು ಇದಕ್ಕೆ ಒತ್ತಾಸೆಯಾಗಿ ನಿಲ್ಲಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ವೆಂಕಟೇಶ್ ಹೇಳಿದರು.
ಪಟ್ಟಣದ ಜೆಎಸ್‌ಎಸ್ ಪ್ರೌಢಶಾಲೆಯಲ್ಲಿ ಶನಿವಾರ ತಾಲೂಕಿನ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಅಂತರ ವಿದ್ಯಾರ್ಥಿನಿಲಯಗಳ ಕನ್ನಡ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡದ ಅಭಿಮಾನ, ಆಯಾಮಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕಿದೆ ಎಂದರು.
ವಿದ್ಯಾರ್ಥಿಗಳಿಗೆ ಸ್ವಯಂ ಶಿಸ್ತು ಬಹಳ ಮುಖ್ಯ. ಅದನ್ನು ಅಳವಡಿಸಿಕೊಂಡರೆ ಶೈಕ್ಷಣಿಕ ಸಾಧನೆ ಮಾಡಬಹುದು. ತರಗತಿ, ವೇದಿಕೆಗಳಲ್ಲಿ ಹೇಳುವುದನ್ನು ಆಲಿಸಬೇಕು. ಶಿಕ್ಷಕರು, ಪಾಲಕರು, ಹಿರಿಯರ ಮಾರ್ಗದರ್ಶನ ಪಾಲಿಸುವ ಯಾವ ವಿದ್ಯಾರ್ಥಿಯು ಜೀವನದಲ್ಲಿ ಹಿನ್ನಡೆ ಕಂಡಿಲ್ಲ ಎಂದರು.
ನಮ್ಮ ಕವಿಗಳು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಕನ್ನಡ ಭಾವ ನಮ್ಮಲ್ಲಿ ಬಂದರೆ ಕನ್ನಡ ಪದಗಳು ತಲೆಯಲ್ಲಿ ಉಳಿಯಲಿವೆ. ರಸಪ್ರಶ್ನೆ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಲ್ಲಿ ಜ್ಞಾನಾರ್ಜನೆ ಹೆಚ್ಚಾಗಲಿದೆ. ಸ್ಪರ್ಧೆ ವ್ಯಕ್ತಿತ್ವದ ಚೇತನವನ್ನು ಪ್ರೇರೇಪಿಸುವಿಕೆಯ ಕ್ರಿಯೆ. ಮಕ್ಕಳಲ್ಲಿ ದೇಶ ಕಟ್ಟುವ ಚೈತನ್ಯ ಅಡಗಿದೆ. ಅದು ವಿದ್ಯಾರ್ಥಿ ದಿಸೆಯಿಂದಲೇ ಆಗಬೇಕು. ಇಂದಿನ ಸಮಾಜದಲ್ಲಿ ಸಮಾಜಮುಖಿ ಕೆಲಸ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಸಮಾಜದಿಂದ ಬೆಳೆದ ನಾವು ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಹೇಳಿದರು.
ಪಟ್ಟಣದ ವಿವಿಧ ವಿದ್ಯಾರ್ಥಿನಿಲಯಗಳ ಹತ್ತಾರು ಮಕ್ಕಳು ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಪ್ರಸ್ತುತ ಪಡಿಸಿದರು. ಶಾಲಾ ಮುಖ್ಯಶಿಕ್ಷಕಿ ಡಿ.ಆರ್.ಕಾತ್ಯಾಯಿಣಿ, ನಿಲಯ ಮೇಲ್ವಿಚಾರಕ ಮಹೇಶ್ ಜಿ.ಬಳಿಗಾರ್, ಶಿಕ್ಷಕರಾದ ಶ್ವೇತಾರಾಣಿ, ನಳಿನಾ, ಶೈಲಾ, ವಿಕಾಸ್ ಚಂದ್ರ, ಭಾಗ್ಯಲಕ್ಷ್ಮೀ, ಮಹದೇವಪ್ಪ ಇದ್ದರು.