ಎಚ್. ಡಿ. ಕೋಟೆ ಅಂಬೇಡ್ಕರ್ ಭವನದಲ್ಲಿ ವಿಶ್ವಕರ್ಮ ಯುವ ಬ್ರಿಗೇಡ್ ವತಿಯಿಂದ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು. ಶ್ರೀಕಂಠಾಚಾರ್, ಪಿ. ಸುಜ್ಞಾನಮೂರ್ತಿ, ಮಾಜಿ ಅಧ್ಯಕ್ಷ ಎನ್. ನಂದಕುಮಾರ್, ಯುವ ಬ್ರಿಗೇಡ್ ಅಧ್ಯಕ್ಷ ರಾಜು ಆಚಾರ್, ಡಾ. ಆರ್.ಎಚ್. ಪವಿತ್ರಾ ಇತರರು ಇದ್ದರು.
* ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಎಚ್.ಡಿ.ಕೋಟೆ : ಪ್ರಾಚೀನ ಕಾಲದಿಂದಲೂ ಭಾರತದ ಸಂಸ್ಕೃತಿ, ಪರಂಪರೆಗೆ ವಿಶ್ವಕರ್ಮರ ಕೊಡುಗೆ ಅನನ್ಯವಾಗಿದೆ ಎಂದು ಮೈಸೂರು ವಿವಿ ಬಹುಮಾಧ್ಯಮ ಸಂಶೋಧನಾ ಕೇಂದ್ರದ ನಿರ್ದೇಶಕ ಶ್ರೀಕಂಠಾಚಾರ್ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕು ವಿಶ್ವಕರ್ಮ ಯುವ ಬ್ರಿಗೇಡ್ ವತಿಯಿಂದ ಭಾನುವಾರ ಆಯೋಜಿಸಿದ್ದ 4ನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಾಸ್ತುಶಿಲ್ಪ, ಶಿಲ್ಪಕಲೆ, ದೇವಾಲಯ ನಿರ್ಮಾಣ ಹಾಗೂ ವಿವಿಧ ಕೌಶಲಗಳ ಬೆಳವಣಿಗೆಯಲ್ಲಿ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರವಾಗಿದೆ. ಹಿಂದಿನ ಕಾಲದಲ್ಲಿ ಲಿಪಿ ಹುಟ್ಟುವ ಮೊದಲೇ ಕಲ್ಲುಗಳಲ್ಲಿ ಅದ್ಭುತ ಕಲಾಕೃತಿಗಳನ್ನು ರಚಿಸಿ, ಸಂಸ್ಕೃತಿ ಪ್ರಸಾರಕ್ಕೆ ಜೀವನಪೂರ್ಣ ಶ್ರಮಿಸಿದವರು ವಿಶ್ವಕರ್ಮರು ಎಂದರು.
ಪ್ರಾಚೀನ ಜ್ಞಾನ ಮತ್ತು ವೈಜ್ಞಾನಿಕ ಚಿಂತನೆಗಳು ಹಲವು ದೇವಾಲಯಗಳಲ್ಲಿ ಅಡಗಿದೆ. ಇದರ ಹಿಂದೆ ವಿಶ್ವಕರ್ಮ ಶಿಲ್ಪಿಗಳ ಕೈಚಳಕವಿದೆ. ಬೆಳಕಿನ ವಕ್ರೀಭವನ ಸೇರಿದಂತೆ ವೈಜ್ಞಾನಿಕ ತತ್ವಗಳನ್ನು ಶತಮಾನಗಳ ಹಿಂದೆಯೇ ಸಮರ್ಥವಾಗಿ ಬಳಸಿಕೊಂಡು, ಸಾವಿರಾರು ಗುಡಿ, ಗೋಪುರಗಳನ್ನು ನಿರ್ಮಾಣ ಮಾಡಲಾಗಿದೆ.
ಇಂದಿನ ಯಾವ ತಂತ್ರಜ್ಞಾನಕ್ಕೂ ಮಿಗಿಲಾದ ಪ್ರತಿಮೆಗಳಾಗಿ ಪ್ರಾಚೀನ ದೇವಾಲಯದ ವಾಸ್ತವೈಭವ ನಮ್ಮೆದುರಿಗೆ ಇದೆ ಎಂದರೆ ಅದರ ಹಿಂದೆ ಸಾವಿರಾರು ಕುಶಕ ಕರ್ಮಿಗಳ ಸೇವೆ ಇರುವುದನ್ನು ತಿಳಿಯಬೇಕಾಗಿದೆ ಎಂದು ಅವರು ವಿವರಿಸಿದರು.
ವಿದ್ಯಾರ್ಥಿಗಳು ಮತ್ತು ಯುವಜನರು ಮೌಲಿಕ ಪುಸ್ತಕಗಳನ್ನು ಓದುವ ಮೂಲಕ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಿಂದ ಸಲ್ಪ ದೂರವಿದ್ದು, ದೇಶದ ಇತಿಹಾಸ, ಸಂಸ್ಕೃತಿಗಳನ್ನು ಅರಿಯಬೇಕು ಎಂದು ಕಿವಿಮಾತು ಹೇಳಿದರು.
ಮೈಸೂರು ವಿವಿ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ. ಆರ್.ಎಚ್. ಪವಿತ್ರಾ ಮಾತನಾಡಿ, ರಾಜ್ಯದ ವಿವಿಧ ಭಾಗಗಳಲ್ಲಿ ನೆಲೆಸಿರುವ ವಿಶ್ವಕರ್ಮ ಸಮಾಜದವರು ಒಗ್ಗಟ್ಟಾಗಬೇಕು ಎಂದರು. ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ತಂತ್ರಜ್ಞಾನದಿಂದಾಗಿ ಮುಂಬರುವ ದಿನ ದಿನಗಳಲ್ಲಿ ಉದ್ಯೋಗ ಕ್ಷೇತ್ರದಲ್ಲೂ ಮಹತ್ತರ ಬದಲಾವಣೆಗಳು ಸಂಭವಿಸಲಿದೆ. ವಿಶ್ವದ ಶೇ.40ರಷ್ಟು ಉದ್ಯೋಗಗಳು ಎಐ ಆಧಾರಿತವಾಗಲಿವೆ. ಪರಂಪರೆಯಿಂದ ಕುಶಲಿಗಳಾಗಿರುವ ವಿಶ್ವಕರ್ಮ ಸಮಾಜದವರು ಆಧುನಿಕ ಕಾಲಘಟ್ಟದಲ್ಲೂ ಅಸ್ತಿತ್ವ ಉಳಿಸಿಕೊಳ್ಳಬೇಕಾದ ಸವಾಲು ಎದುರಾಗಿದೆ ಎಂದರು.
ಜಾಗತಿಕ ಮಟ್ಟದಲ್ಲಿ ಭಾರತವನ್ನು ಮುಂಚೂಣಿಗೆ ಕೊಂಡೊಯ್ಯುವ ಸಾಮರ್ಥ್ಯ ಯುವಜನರಲ್ಲಿ ಅಡಗಿದೆ. ಸಮಗ್ರ ಶಿಕ್ಷಣವೇ ಇದಕ್ಕೆ ಸ್ಫೂರ್ತಿಯಾಗಬೇಕು. ಸಾಧಕರನ್ನು ಗೌರವಿಸುವ, ಪ್ರೋತ್ಸಾಹಿಸುವ ಕಾರ್ಯಗಳು ಹೆಚ್ಚಾಗಬೇಕು ಎಂದು ಅವರು ಸಲಹೆ ನೀಡಿದರು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿ
ಸಾಧನೆ ಮಾಡಿದ ಸಮುದಾಯದ 200ಕ್ಕೂ ಹೆಚ್ಚು ಪ್ರತಿಭಾವಂತರನ್ನು ಗೌರವಿಸಲಾಯಿತು.
ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ಸುಜ್ಞಾನಮೂರ್ತಿ, ಮಾಜಿ ಅಧ್ಯಕ್ಷ ಎನ್. ನಂದಕುಮಾರ್, ಯುವ ಬ್ರಿಗೇಡ್ ಅಧ್ಯಕ್ಷ ರಾಜು ಆಚಾರ್, ರಾಜು ಕಾರ್ಯ, ವಿಶ್ವಕರ್ಮ ಸಮಾಜದ ತಾಲೂಕು ಘಟಕ ಅಧ್ಯಕ್ಷ ವೆಂಕಟೇಶ್,
ಮುಖಂಡರಾದ ಎಂ. ವಾಸು, ಆರ್. ಜಗದೀಶ್, ಕೆ.ಎಸ್. ರೇವಣ್ಣ, ಲೋಕೇಶ್, ಜನಾರ್ಧನ, ಕಿರಣ್, ದಾಸಾಚಾರಿ, ನಿಂಗರಾಜು ಇತರರು ಉಪಸ್ಥಿತರಿದ್ದರು.