ಮೈಸೂರಿನ ರಾಮಾನುಜ ರಸ್ತೆಯಲ್ಲಿ ಪರಸ್ಪರ ಬಣ್ಣ ಹಚ್ಚುವ ಮೂಲಕ ಹೋಳಿ ಹಬ್ಬವನ್ನು ಸಂಭ್ರಮಿಸಿದ ಸಾರ್ವಜನಿಕರು.
- ಬಣ್ಣದ ಓಕುಳಿಯಲ್ಲಿ ಮಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು
ಮೈಸೂರು: ನಗರದ ಕೆಲ ಭಾಗದಲ್ಲಿ ಹೋಳಿ ಹಬ್ಬವನ್ನು ಜನರು ಸಂಭ್ರಮದಿಂದ ಆಚರಿಸಿದರು. ಕಾಲೇಜಿನ ಕ್ಯಾಂಪಸ್‌ಗಳಲ್ಲೂ ಓಕಳಿ ರಂಗು ಹೆಚ್ಚಾಗಿ ಕಂಡುಬಂತು.
ಕೆಲ ಬೀದಿಗಳಲ್ಲಿ ಕಾಮನಹಬ್ಬ ಹೋಳಿ ಸಡಗರ ಕಳೆಗಟ್ಟಿತ್ತು. ಪರಸ್ಪರ ವಿವಿಧ ಬಗೆಯ ಬಣ್ಣಗಳನ್ನು ಎರಚಿ ಹೋಳಿ ಹಬ್ಬದ ಶುಭಾಶಯವನ್ನು ವಿನಿಮಯ ಮಾಡಿಕೊಂಡು ಸಂತಸಪಟ್ಟರು.
ವಯಸ್ಸಿನ ಬೇಧ-ಭಾವವಿಲ್ಲದೆ ಈ ಸಂಭ್ರಮದಲ್ಲಿ ಮುಳುಗಿದ್ದು ವಿಶೇಷ. ಚಿಣ್ಣರು, ಶಾಲಾ ಬಾಲಕ-ಬಾಲಕಿಯರು ರಂಗಿನಾಟದಲ್ಲಿ ತಲ್ಲೀನರಾಗಿ ಸಂತಸದ ಕೇಕೆ ಹಾಕಿದರು.
ಉತ್ತರ ಕರ್ನಾಟಕದಂತೆ ಇಡೀ ಊರಿಗೆ ಊರೇ ಹೋಳಿಯಲ್ಲಿ ಮೈಸೂರು ಸಕ್ರಿಯವಾಗಲಿಲ್ಲ. ಕೆಲ ಬಡಾವಣೆಗಳು ಮತ್ತು ಬೀದಿಗಳಲ್ಲಿ ಮಾತ್ರ ಅಲ್ಲಲ್ಲಿ ಹೋಳಿ ರಂಗು ಕಾಣಿಸಿಕೊಂಡಿತು. ಅದರಲ್ಲೂ ಜೈನ ಸಮುದಾಯ ಇರುವ, ಪ್ರತಿಷ್ಠಿತ ಬಡಾವಣೆಗಳ ಕೆಲ ಭಾಗದ ಜನರು ಪರಸ್ಪರ ಬಣ್ಣ ಎರಚಿಕೊಂಡರು.
ಆದರೆ, ಅಪರಿಚಿತರಿಗೆ ಬಣ್ಣ ಹಾಕುವ ಧೈರ್ಯ ಮಾಡಲಿಲ್ಲ. ಪರಿಚಿತರು ಮತ್ತು ಸ್ನೇಹಿತರು, ಸಂಬಂಧಿಕರ ನಡುವೆ ಮಾತ್ರ ಈ ಬಣ್ಣದಾಟಕ್ಕೆ ಸೀಮಿತವಾಗಿತ್ತು. ಉಳಿದ ಪ್ರದೇಶದಲ್ಲಿ ಹೋಳಿ ಸಂಭ್ರಮ ಕಂಡುಬರಲಿಲ್ಲ. ಹೀಗಾಗಿ, ಎಂದಿನ ಜೀವನ ಶೈಲಿಯಲ್ಲಿಯೇ ಬಹುತೇಕರು ದಿನ ಕಳೆದರು. ಇನ್ನೂ ಕೆಲವರಿಗೆ ಹೋಳಿ ಹಬ್ಬದ ಕುರಿತು ಮಾಹಿತಿಯೇ ಇರಲಿಲ್ಲ.
ಕೆಲ ಪ್ರದೇಶಗಳಲ್ಲಿ ಯುವಕರು, ಯುವತಿಯರು ಪರಸ್ಪರ ಬಣ್ಣದ ನೀರು, ಹಾಕಿ ಸಂಭ್ರಮಿಸಿದರು. ಇನ್ನು ಯುವತಿಯರು ಅವರವರ ಮನೆಯಲ್ಲೇ ಮತ್ತು ಅಕ್ಕ-ಪಕ್ಕದ ಮನೆಯ ಗೆಳತಿಯರಿಗೆ ಬಣ್ಣದ ನೀರು ಹಾಕಿ ಕುಣಿದಾಡುವ ಮೂಲಕ ಸಂಭ್ರಮಿಸಿದರು. ಬಿಸಿಲ ಬೇಗೆ ಈ ಹಬ್ಬದ ಉತ್ಸಾಹಕ್ಕೆ ಯಾವುದೇ ಅಡ್ಡಿಯನ್ನುಂಟು ಮಾಡಲಿಲ್ಲ ಎನ್ನುವುದು ವಿಶೇಷ.
ವಿವಿಧ ಕಾಲೇಜುಗಳ ಕ್ಯಾಂಪಸ್‌ಗಳಲ್ಲಿ ಹೋಳಿ ರಂಗು ಪ್ರಜ್ವಲಿಸಿತು. ಕೆಲ ವಿದ್ಯಾಸಂಸ್ಥೆಗಳ ಆವರಣದಲ್ಲಿ ವಿದ್ಯಾರ್ಥಿಗಳು ಬಣ್ಣದಲ್ಲಿ ಮಿಂದೇಳುವ ಮೂಲಕ ಸಂತಸಪಟ್ಟರು.
ಬೆಳಗ್ಗೆ ಎಂದಿನಂತೆ ಕಾಲೇಜಿಗೆ ಬಂದ ವಿದ್ಯಾರ್ಥಿಗಳು ಹೋಳಿ ಆಟಕ್ಕೆ ಇಳಿದರು. ಪರಸ್ಪರ ಬಣ್ಣ ಹಾಕಿದರು. ಇದಕ್ಕೆ ಒಪ್ಪದ ಸ್ನೇಹಿತರನ್ನು ಓಡಿಸಿಕೊಂಡು ಹೋಗಿ ಬಣ್ಣದಲ್ಲಿ ಮುಳುಗಿಸಿದರು.