ಸರಗೂರು: ಉತ್ತಮ ಮಳೆ ಸುರಿದು ಕೆರೆಕಟ್ಟೆಗಳು ತುಂಬಿ, ರೈತರಿಗೆ ಸಮೃದ್ಧ ಬೆಳೆ ಬೆಳೆಯಬೇಕು ಹಾಗೂ ಲೋಕ ಕಲ್ಯಾಣವಾಗಬೇಕು ಎಂದು ಪ್ರಾರ್ಥಿಸಿ ಹಂಚೀಪುರ ಮಠದ ತೋಂಟದಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಹಂಚೀಪುರ ಮಠದಿಂದ ಮಲೈ ಮಹದೇಶ್ವರ ಬೆಟ್ಟದವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಶನಿವಾರ ಬೆಳಗಿನ ಜಾವ 5 ಗಂಟೆಗೆ ಹಂಚೀಪುರ ಮಠದಿಂದ ಆರಂಭಗೊಂಡ ಪಾದಯಾತ್ರೆ ಕೊತ್ತೇಗಾಲ ತಲುಪಿದ್ದು, ನೂರಾರು ಭಕ್ತರು ಭಕ್ತಿಭಾವದಿಂದ ಹೆಜ್ಜೆ ಹಾಕಿದರು. ನಂಜನಗೂಡು ಮಾರ್ಗವಾಗಿ ಮಲೈ ಮಹದೇಶ್ವರ ಬೆಟ್ಟದತ್ತ ಯಾತ್ರೆ ಮುಂದುವರಿಯಲಿದ್ದು, ಮಾರ್ಗಮಧ್ಯೆ ವಿವಿಧ ಗ್ರಾಮಗಳ ಭಕ್ತರು ಪಾದಯಾತ್ರೆಯಲ್ಲಿ ಸೇರ್ಪಡೆಯಾಗಲಿದ್ದಾರೆ.
ಕೊತ್ತೇಗಾಲ ಸಮೀಪ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ತೋಂಟದಾರ್ಯ ಸ್ವಾಮೀಜಿ, ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದ್ದು, ರೈತರು ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಭಕ್ತರನ್ನು ಒಗ್ಗೂಡಿಸಿಕೊಂಡು ದೇವರ ಸನ್ನಿಧಿಗೆ ತೆರಳಿ ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಲು ಪಾದಯಾತ್ರೆ ಕೈಗೊಳ್ಳಲಾಗಿದೆ ಎಂದು ಹೇಳಿದರು.
ದೇವರ ಕೃಪೆ: ಪಾದಯಾತ್ರೆ ಆರಂಭಿಸಿದ ಸಂದರ್ಭದಲ್ಲೇ ಮಳೆ ಸುರಿಯಲಾರಂಭಿಸಿದ್ದು, ಇದನ್ನು ದೇವರ ಕೃಪೆಯ ಸಂಕೇತವೆಂದು ಭಕ್ತರು ಭಾವಿಸಿದ್ದಾರೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಿ ಕೆರೆಕಟ್ಟೆಗಳು ಭರ್ತಿಯಾಗಿ, ಕೃಷಿ ಚಟುವಟಿಕೆಗಳು ಚೇತರಿಸಿಕೊಂಡು ರೈತರ ಬದುಕು ಹಸನಾಗಲಿ ಎಂಬುದು ನಮ್ಮ ಪ್ರಾರ್ಥಿಸಿದ್ದೇವೆ ಎಂದು ಯಾತ್ರಿಗಳು ತಿಳಿಸಿದರು.
ಹಿಂದಿನ ಕಾಲದಲ್ಲಿ ಋಷಿಮುನಿಗಳು ಲೋಕ ಕಲ್ಯಾಣಕ್ಕಾಗಿ ಪಾದಯಾತ್ರೆ ಹಾಗೂ ಧಾರ್ಮಿಕ ಕಾರ್ಯಗಳನ್ನು ಕೈಗೊಳ್ಳುತ್ತಿದ್ದರು. ಅದೇ ಪರಂಪರೆಯನ್ನು ಮುಂದುವರಿಸುವ ಉದ್ದೇಶದಿಂದ ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಸಮಾಜದಲ್ಲಿ ಭಕ್ತಿ, ಐಕ್ಯತೆ, ಪರಸ್ಪರ ಸಹಕಾರದ ಮನೋಭಾವ ಬೆಳೆಸುವುದರ ಜತೆಗೆ ಪ್ರಕೃತಿಯ ಅನುಗ್ರಹಕ್ಕಾಗಿ ಸಾಮೂಹಿಕವಾಗಿ ಪ್ರಾರ್ಥಿಸುವುದು ಪಾದಯಾತ್ರೆಯ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು. ಬಿಜೆಪಿಯ ಮಾಜಿ ಅಧ್ಯಕ್ಷ ಹಂಚೀಪುರ ಗುರುಸ್ವಾಮಿ ಮಾತನಾಡಿದರು. ಹಂಚೀಪುರ ಮಠದಿಂದ ಆರಂಭಗೊಂಡಿರುವ ಪಾದಯಾತ್ರೆಯಲ್ಲಿ ನೂರಾರು ಭಕ್ತರು ಭಾಗವಹಿಸಿದ್ದು, ಉತ್ತಮ ಮಳೆ, ಸಮೃದ್ಧ ಬೆಳೆ, ರೈತರ ಸುಖ-ಸಮೃದ್ಧಿ ಹಾಗೂ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸುತ್ತಾ ಮಲೈ ಮಹದೇಶ್ವರ ಬೆಟ್ಟದತ್ತ ಸಾಗುತ್ತಿದ್ದಾರೆ.