ಜೆಎಸ್‌ಎಸ್ ಸ್ಕೂಲ್ ಆಫ್ ನರ್ಸಿಂಗ್‌ನಿಂದ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಶ್ರೀಕಾಂತ್ ಪುಲಾರಿ, ಡಾ. ಸಿ.ಜಿ. ಬೆಟಸೂರಮಠ, ಆರ್.ಮಹೇಶ್, ಡಾ.ಸಿ.ಪಿ. ಮಧು, ಪ್ರೊ.ಅಶ್ವದಿದೇವಿ ಇತರರು ಇದ್ದರು.
- ಇಂದಿಗೂ ಕ್ಷೇತ್ರದಲ್ಲಿ ನರ್ಸ್‌ಗಳ ಕೊರತೆ ಇದ್ದು, ಉದ್ಯೋಗ ಖಾತ್ರಿ ನೀಡುವ ಅತ್ಯಂತ ಪವಿತ್ರ ವೃತ್ತಿ
- ವೈದ್ಯರಿಗಿಂತ ಹೆಚ್ಚು ಜವಾಬ್ದಾರಿ ನರ್ಸಿಂಗ್‌ನಲ್ಲಿದ್ದು, ರೋಗಿಗಳ ಜತೆ ನೇರ ಒಡನಾಡ ಹೊಂದಿರುತ್ತಾರೆ
ಮೈಸೂರು:ರಾಜ್ಯದಿಂದ ಪ್ರತಿವರ್ಷ ಸುಮಾರು 80,000 ನರ್ಸಿಂಗ್ ಪದವೀಧರರು ಹೊರಬರುತ್ತಿದ್ದು, ಇಡೀ ದೇಶದಲ್ಲೇ ಕರ್ನಾಟಕ ಅತಿಹೆಚ್ಚು ಶುಶ್ರೂಷಕರನ್ನು ಕೊಡುಗೆಯಾಗಿ ನೀಡುತ್ತಿದೆ ಎಂದು ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್‌ನ ರಿಜಿಸ್ಟ್ರಾರ್ ಶ್ರೀಕಾಂತ್ ಪುಲಾರಿ ತಿಳಿಸಿದರು.
ಜೆಎಸ್‌ಎಸ್ ಮಹಾವಿದ್ಯಾಪೀಠ, ಜೆಎಸ್‌ಎಸ್ ಕಾಲೇಜ್ ಆಫ್ ನರ್ಸಿಂಗ್‌ನಿಂದ ಜೆಎಸ್‌ಎಸ್ ಆಸ್ಪತ್ರೆಯ ಶ್ರೀರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ ಘಟಿಕೋತ್ಸವ ಹಾಗೂ ಪದವಿಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೌನ್ಸಿಲ್‌ನಿಂದ ಪ್ರತಿವರ್ಷ 70 ರಿಂದ 80 ಸಾವಿರ ನರ್ಸಿಂಗ್ ಅಭ್ಯರ್ಥಿಗಳಿಗೆ ಮಾನ್ಯತೆ ನೀಡುತ್ತಿದ್ದರೂ, ಇಂದಿಗೂ ಕ್ಷೇತ್ರದಲ್ಲಿ ನರ್ಸ್‌ಗಳ ಕೊರತೆ ಇದೆ. ಇದು ಉದ್ಯೋಗ ಖಾತ್ರಿ ನೀಡುವ ಅತ್ಯಂತ ಪವಿತ್ರ ವೃತ್ತಿ ಎಂದು ಅಭಿಪ್ರಾಯಪಟ್ಟರು.
ಜಾಗತಿಕವಾಗಿ ಸಾಫ್ಟ್‌ವೇರ್ ಕ್ಷೇತ್ರವನ್ನು ಹೊರತುಪಡಿಸಿದರೆ ಅತ್ಯಂತ ಹೆಚ್ಚು ಉದ್ಯೋಗಾವಕಾಶ ಹಾಗೂ ಗೌರವ ಹೊಂದಿರುವ ಕ್ಷೇತ್ರ ಎಂದರೆ ಅದು ನರ್ಸಿಂಗ್ ಆಗಿದೆ. ವೈದ್ಯರಿಗಿಂತ ಹೆಚ್ಚು ಜವಾಬ್ದಾರಿ ನರ್ಸಿಂಗ್‌ನಲ್ಲಿದ್ದು, ರೋಗಿಗಳ ಜತೆ ನೇರ ಒಡನಾಡ ಹೊಂದಿರುತ್ತಾರೆ ಎಂದರು.
ಪ್ರಸ್ತುತ ಕರ್ನಾಟಕದಲ್ಲಿ 860ಕ್ಕೂ ಹೆಚ್ಚು ಜಿಎನ್‌ಎಂ ನರ್ಸಿಂಗ್ ಶಾಲೆಗಳು ಹಾಗೂ 680ಕ್ಕೂ ಹೆಚ್ಚು ಬಿಎಸ್ಸಿ ನರ್ಸಿಂಗ್ ಕಾಲೇಜುಗಳಿವೆ. ರಾಜ್ಯದಿಂದ ಪ್ರತಿವರ್ಷ ಸುಮಾರು 80,000 ನರ್ಸಿಂಗ್ ಪದವೀಧರರು ಹೊರಬರುತ್ತಿದ್ದು, ಇದು ದೇಶದಲ್ಲಿಯೇ ಅತಿ ಹೆಚ್ಚು ನರ್ಸಿಂಗ್ ವಿದ್ಯಾರ್ಥಿಗಳನ್ನು ನೀಡಿದ ಕೀರ್ತಿ ಕರ್ನಾಟಕದ್ದು ಎಂದು ಹೇಳಿದರು.
ಜರ್ಮನಿ, ಜಪಾನ್, ಮಧ್ಯಪ್ರಾಚ್ಯ ದೇಶ ಸೇರಿದಂತೆ ಹಲವು ಕಡೆಗಳಲ್ಲಿ ರಾಜ್ಯದಿಂದ ಹೋದ ನರ್ಸ್‌ಗಳಿಗೆ ಭಾರಿ ಬೇಡಿಕೆ ಇದೆೆ. ಈ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರವು ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ಸರ್ಕಾರದಿಂದ ಸರ್ಕಾರಕ್ಕೆ ನೇರ ನೇಮಕಾತಿ ಒಪ್ಪಂದಗಳನ್ನು ಮಾಡಿಕೊಂಡಿದೆ ಎಂದು ತಿಳಿಸಿದರು.
ವಿದೇಶಗಳಿಗೆ ತೆರಳಬಯಸುವ ಶುಶ್ರೂಷಕರಿಗೆ ಸರ್ಕಾರವೇ ಉಚಿತವಾಗಿ ಆಯಾ ದೇಶಗಳ ಭಾಷಾ ತರಬೇತಿ ನೀಡುತ್ತಿದೆ. ಕೊರೊನಾ ಸಾಂಕ್ರಾಮಿಕದ ಸವಾಲಿನ ದಿನಗಳಲ್ಲಿ ನರ್ಸ್‌ಗಳ ನಿಸ್ಪಕ್ಷಪಾತ ಸೇವೆ ಮತ್ತು ತ್ಯಾಗವನ್ನು ಜಗತ್ತೇ ಗುರುತಿಸಿದೆ. ಪ್ರಧಾನಮಂತ್ರಿಗಳು ಸೇರಿದಂತೆ ಎಲ್ಲ ರಾಜ್ಯ ಸರ್ಕಾರಗಳು ನರ್ಸಿಂಗ್ ಕ್ಷೇತ್ರದ ಸೇವೆಯನ್ನು ಶ್ಲಾಘಿಸಿವೆ ಎಂದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಸಿ.ಜಿ.ಬೆಟಸೂರಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ನರ್ಸಿಂಗ್ ಸೇವೆಯು ಅತ್ಯುನ್ನತವಾದ ಸೇವೆಯಾಗಿದ್ದು ತಾವೆಲ್ಲರೂ ಸೇವಾ ಮನೋಭಾವದೊಂದಿಗೆ ಮಾನವೀಯತೆಯೊಂದಿಗೆ ಈ ಕ್ಷೇತ್ರವನ್ನು ಮತ್ತಷ್ಟು ಉಜ್ವಲಗೊಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಬಿಎಸ್ಸಿ ನರ್ಸಿಂಗ್‌ನ 89, ಪಿಬಿ ಬಿಎಸ್ಸಿ ನರ್ಸಿಂಗ್‌ನ 10, ಎಂಎಸ್ಸಿ ನರ್ಸಿಂಗ್ 6 ಸೇರಿದಂತೆ ಒಟ್ಟು 102 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಜೆಎಸ್‌ಎಸ್ ಮಹಾವಿದ್ಯಾಪೀಠದ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್.ಮಹೇಶ್, ಜೆಎಸ್‌ಎಸ್ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಪಿ. ಮಧು, ಜೆಎಸ್‌ಎಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಪ್ರೊ ಅಶ್ವದಿದೇವಿ ಇತರರು ಇದ್ದರು.