ಮೈಸೂರು 
ಮೈಸೂರು

ಪರಂಪರೆ ಸಾರುವ ಕಟ್ಟಡಗಳಿಗೆ ಆಪತ್ತು

ಅವಿನಾಶ್ ಜೈನಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ಮಳೆಗಾಲದಲ್ಲಿ ಕುಸಿಯುವ ಭೀತಿ
  • ಸಂರಕ್ಷಣೆ ಕೊರತೆಯಿಂದ ಶಿಥಿಲಾವಸ್ಥೆ
  • ಕಾಯಕಲ್ಪಕ್ಕೆ ಮುಂದಾಗಬೇಕಿದೆ ಪಾಲಿಕೆ
ಅವಿನಾಶ್ ಜೈನಹಳ್ಳಿ ಮೈಸೂರು
ಸಾಂಸ್ಕೃತಿಕ ನಗರಿ ಮೈಸೂರಿನ ಪರಂಪರೆ ಸಾರುವ ಹೆಗ್ಗುರುತುಗಳಾದ ಶತಮಾನ ಪೂರೈಸಿದ ಕಟ್ಟಡಗಳು ಕುಸಿಯುವ ಅಪಾಯದ ಅಂಚಿನಲ್ಲಿವೆ.
ಹೌದು. ಮಳೆ ಬಂದರೆ ಮರ-ಗಿಡಗಳೊಂದಿಗೆ ವಿದ್ಯುತ್ ಕಂಬಗಳು ಮಾತ್ರ ಬೀಳುತ್ತಿದ್ದವು. ಆದರೆ, ಈಗ ಪಾರಂಪರಿಕ ಕಟ್ಟಡಗಳೂ ಕುಸಿಯುವ ಹಂತಕ್ಕೆ ತಲುಪಿವೆ.
ಇಂತಹ ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳನ್ನು ಗುರುತಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಲ್ಲಿ ಮೈಸೂರು ಮಹಾನಗರ ಪಾಲಿಕೆ ನಿರ್ಲಕ್ಷೃ ವಹಿಸಿದೆ. ಒಣಗಿರುವ ಮರಗಳ ತೆರವಿಗೆ ಕಾಳಜಿ ವಹಿಸುವಂತೆ, ದುಸ್ಥಿತಿಯಲ್ಲಿರುವ ಕಟ್ಟಡಗಳನ್ನು ಗುರುತಿಸಿ ಮುಂದಾಗಬಹುದಾದ ಅಪಾಯವನ್ನು ತಪ್ಪಿಸುವ ಮೂಲಕ ಸಾರ್ವಜನಿಕರ ಪ್ರಾಣ ರಕ್ಷಿಸುವ ಜವಾಬ್ದಾರಿ ಪಾಲಿಕೆ ಮೇಲಿದೆ. ನಗರದ ಹಳೇ ಕಟ್ಟಡಗಳು ಅಪಾಯ ಆಹ್ವಾನಿಸುವಂತಿವೆ. ಸದ್ಯ ಮಳೆಗಾಲ ಆರಂಭವಾದರೂ ಪಾಲಿಕೆ ಮತ್ತು ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಿಲ್ಲ. ಕೆಲ ತಿಂಗಳಿಂದಷ್ಟೇ ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 7 ಜನರು ಮೃತಪಟ್ಟಿದ್ದು, ಇದು ಮೈಸೂರು ಮಹಾನಗರ ಪಾಲಿಕೆಗೆ ಎಚ್ಚರಿಕೆ ಗಂಟೆಯಾಗಿದೆ.

600ಕ್ಕೂ ಹೆಚ್ಚು ಪಾರಂಪರಿಕ ಕಟ್ಟಡ:

ನಗರದಲ್ಲಿ 600ಕ್ಕೂ ಹೆಚ್ಚು ಪಾರಂಪರಿಕ ಕಟ್ಟಡಗಳಿವೆ. 100ಕ್ಕೂ ಹೆಚ್ಚು ಕಟ್ಟಡಗಳಿಗೆ 100 ವರ್ಷ ತುಂಬಿದೆ. 131 ಕಟ್ಟಡಗಳನ್ನು ಸರ್ಕಾರ ಪಾರಂಪರಿಕ ಕಟ್ಟಡಗಳೆಂದು ಘೋಷಿಸಿದೆ. ಇದರಲ್ಲಿ 80 ಕಟ್ಟಡಗಳಿಗೆ ತುರ್ತು ದುರಸ್ತಿ ಅವಶ್ಯಕತೆ ಇದೆ ಎಂದು ಪಾರಂಪರಿಕ ತಜ್ಞರು ವರದಿ ನೀಡಿದ್ದಾರೆ. 30 ಸರ್ಕಾರಿ ಕಟ್ಟಡಗಳಾಗಿದ್ದರೆ, 50 ಖಾಸಗಿ ಕಟ್ಟಡಗಳಾಗಿವೆ. ಬಹುತೇಕ ಸರ್ಕಾರಿ ಕಟ್ಟಡಗಳಲ್ಲಿ ಜನ ಸಂಚಾರವಿದ್ದು, ಇನ್ನೂ ಖಾಸಗಿ ಕಟ್ಟಡಗಳು ಸಾರ್ವಜನಿಕ ಬಳಕೆಯಲ್ಲಿರುವುದರಿಂದ ಅಪಾಯಕ್ಕೆ ಆಹ್ವಾನ ನೀಡುವಂತೆ ಆಗಿದೆ. ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸುವುದಿರಲಿ, ಕೊನೆಯ ಪಕ್ಷ ಮುನ್ನೆಚ್ಚರಿಕೆ ಕ್ರಮವಹಿಸಿ, ಅಪಾಯಕರ ಸ್ಥಳವೆಂದು ಘೋಷಿಸಿ, ನಾಗರಿಕರ ಸಂಚಾರವನ್ನು ನಿರ್ಬಂಧಿಸಿಲ್ಲ.
ಲಾನ್ಸ್‌ಡೌನ್ ಕಟ್ಟಡದ ಹಿಂಭಾಗದ ರಸ್ತೆಯು ಯಮಲೋಕದ ದಾರಿಯಂತಿದ್ದು, ಎರಡೂ ಬದಿ ಹಳೆಯ ಕಟ್ಟಡಗಳು ಪಾಳು ಬಿದ್ದಿವೆ. ಈ ರಸ್ತೆಯಲ್ಲಿ ಮಳಿಗೆಗಳು ಕಾರ್ಯ ನಿರ್ವಹಿಸುತ್ತಿವೆ. ಅವುಗಳ ಮಾಲೀಕರು ಮತ್ತು ಬಾಡಿಗೆದಾರರಿಗೆ ನೋಟಿಸ್ ನೀಡಿ ತೆರವು ಮಾಡಲು ಮುಂದಾಗದಿರುವುದಕ್ಕೆ ಪಾರಂಪರಿಕ ತಜ್ಞರು ಹಾಗೂ ನಾಗರಿಕರಿಂದ ಆತಂಕ ವ್ಯಕ್ತವಾಗಿದೆ. ವಿನೋಬಾ ರಸ್ತೆಯ ಶ್ರೀರಾಂಪೇಟೆಯಲ್ಲಿರುವ ಕಟ್ಟಡ ಪಾಳು ಬಿದ್ದಿದ್ದು, ಐದು ಮಳಿಗೆಗಳಲ್ಲಿ ಒಂದು ಮಳಿಗೆ ನಡೆಯುತ್ತಿದೆ. ಅಪಾಯದ ಕರೆಗಂಟೆಯಾಗಿದೆ. ದೇವರಾಜ ಮಾರುಕಟ್ಟೆಗೆ ಹೋಗಲು ಫುಟ್‌ಪಾತ್ ಬಳಕೆ ಮಾಡುತ್ತಿದ್ದಾರೆ. ಮಳೆ ಬಂದರೆ ಜನರು ನಿಲ್ಲುತ್ತಿದ್ದಾರೆ. ಜಡಿಮಳೆಗೆ ಉರುಳುವ ಭೀತಿ ಮೂಡಿದ್ದರೂ ಇದುವರೆಗೂ ಪಾಲಿಕೆ ಇತ್ತ ತಲೆ ಹಾಕಿಲ್ಲ.
ಈ ದೇವರಾಜ ಮಾರುಕಟ್ಟೆ, ಲ್ಯಾನ್ಸ್‌ಡೌನ್ ಕಟ್ಟಡ, ಮಂಡಿ ಮಾರುಕಟ್ಟೆ, ವಾಣಿವಿಲಾಸ ಮಾರುಕಟ್ಟೆ ಸೇರಿದಂತೆ 80ಕ್ಕೂ ಹೆಚ್ಚು ಕಟ್ಟಡಗಳು ಶಿಥಿಲವಾಗಿದ್ದು, ಕಾಯಕಲ್ಪಕ್ಕೆ ದಶಕಗಳಿಂದಲೂ ಕಾದಿವೆ. ಹಲವು ಅರಮನೆಗಳ ವಿವಿಧ ಭಾಗಗಳು ಶಿಥಿಲಾವಸ್ಥೆಯಲ್ಲಿವೆ.
ಮಂಡಿ ಮಾರುಕಟ್ಟೆಯ ಮಳಿಗೆಗಳ ಹೆಂಚುಗಳು ಒಡೆದಿವೆ. ಗೋಡೆಗಳು ಚಕ್ಕೆಗಳಂತೆ ಏಳುತ್ತಿದ್ದು, ಮೂರ್ನಾಲ್ಕು ಮಳೆಗಾಲ ಬಂದರೆ ಕುಸಿಯುವ ಆತಂಕ ವ್ಯಾಪಾರಿಗಳದ್ದು. ಅಗ್ರಹಾರದ ವಾಣಿವಿಲಾಸ ಮಾರುಕಟ್ಟೆ ಶಿಥಿಲಾವಸ್ಥೆಯಲ್ಲಿದೆ. ಮಳಿಗೆಗಳ ಸೂರು ಕಳಚುತ್ತಿದೆ. ಪ್ರವೇಶದ್ವಾರ ಬೀಳುವ ಹಂತದಲ್ಲಿದ್ದರಿಂದ ಎರಡು ಕಡೆ ಮುಚ್ಚಲಾಗಿದೆ. ಬಾಡಿಗೆದಾರರು ಜೀವಭಯದಲ್ಲಿಯೇ ವ್ಯಾಪಾರ ನಡೆಸಬೇಕಿದೆ. ದೇವರಾಜ ಮಾರುಕಟ್ಟೆಯ ಉತ್ತರದ್ವಾರ 2016ರಲ್ಲಿಯೇ ಬಿದ್ದಿದ್ದರೂ ಅದರ ಮರು ನಿರ್ಮಾಣವಾಗಿಲ್ಲ. ಲ್ಯಾನ್ಸ್‌ಡೌನ್ ಕಟ್ಟಡ ಮರು ನಿರ್ಮಾಣ ದಶಕದಿಂದಲೂ ನನೆಗುದಿಗೆ ಬಿದ್ದಿದೆ.
"

ಮೈಸೂರು ನಗರದಲ್ಲಿರುವ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ಗುರುತಿಸಿ ಕಟ್ಟಡ ಮಾಲೀಕರಿಗೆ ತೆರವು ಗೊಳಿಸುವಂತೆ ನೋಟಿಸ್ ನೀಡುವಂತೆ ಸೂಚನೆ ನೀಡಲಾಗಿದೆ. ಸರ್ಕಾರಿ ಕಟ್ಟಡಗಳಿದ್ದರೆ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ವಿಧಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಏನಾಗಬೇಕು:

* ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ಗುರುತಿಸಬೇಕು.
*ಶಿಥಿಲಾವಸ್ಥೆಯ ಕಟ್ಟಡಗಳಲ್ಲಿ ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧ ವಿಧಿಸಬೇಕು.
*ಕಟ್ಟಡಗಳನ್ನು ನವೀಕರಣಗೊಳಿಸಬೇಕು, ಇಲ್ಲವೇ ತೆರವುಗೊಳಿಸಬೇಕು.
*ಶಿಥಿಲಾವಸ್ಥೆಯಲ್ಲಿರುವ ಖಾಸಗಿ ಕಟ್ಟಡಗಳ ಮಾಲೀಕರಿಗೆ ನೋಟಿಸ್ ನೀಡಿ ತೆರವುಗೊಳಿಸಬೇಕು.