ಹೊಸಹೊಳಲು ಗ್ರಾಮದಲ್ಲಿ ವಾತ್ಸಲ್ಯ ಯೋಜನೆಯಲ್ಲಿ ನಿರ್ಮಿಸಿದ ಮನೆಯನ್ನು ಫಲಾನುಭವಿಗಳಾದ ರತ್ನಮ್ಮ, ಪುಟ್ಟಯ್ಯ ಅವರಿಗೆ ಹಸ್ತಾಂತರಿಸಲಾಯಿತು. ವಿಜಯಕುಮಾರ ನಾಗನಾಳ, ಟಿ.ಮಂಜು ಇತರರು ಇದ್ದರು. 
ಮೈಸೂರು

ವೀರೇಂದ್ರ ಹೆಗ್ಗಡೆಯವರಿಂದ ಬಡವರಿಗೆ ಸಹಾಯ

ಪ್ರಮುಖ ಮುಖ್ಯಾಂಶಗಳು

  • Veerendra Heggade
ಎಚ್.ಡಿ.ಕೋಟೆ: ಅಸಹಾಯಕರಿಗೆ ವಾತ್ಸಲ್ಯ ಯೋಜನೆಯಡಿ ಮನೆ ಮತ್ತು ಮಾಸಾಶನ ನೀಡುವ ಮೂಲಕ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಅನೇಕ ಬಡ ಕುಟುಂಬಗಳಿಗೆ ಸಹಾಯ ಮಾಡಿದ್ದಾರೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ವಿಜಯಕುಮಾರ ನಾಗನಾಳ ತಿಳಿಸಿದರು.
ತಾಲೂಕಿನ ಹೊಸಹೊಳಲು ಗ್ರಾಮದಲ್ಲಿ ವಾತ್ಸಲ್ಯ ಯೋಜನೆಯಲ್ಲಿ ನಿರ್ಮಿಸಿದ ಮನೆಯನ್ನು ಫಲಾನುಭವಿಗಳಾದ ರತ್ನಮ್ಮ, ಪುಟ್ಟಯ್ಯ ಅವರಿಗೆ ಶುಕ್ರವಾರ ಹಸ್ತಾಂತರಿಸಿ ಮಾತನಾಡಿದರು.
ತಾಲೂಕಿನಲ್ಲಿ 136 ಜನರಿಗೆ ಮಾಸಾಶನ ನೀಡಲಾಗುತ್ತಿದೆ. ಅದೇ ರೀತಿ ಅಸಹಾಯಕ ಕುಟುಂಬಗಳಿಗೆ ವಾತ್ಸಲ್ಯ ಯೋಜನೆಯಲ್ಲಿ ರಾಜ್ಯದಲ್ಲಿ 1,100ಕ್ಕೂ ಹೆಚ್ಚು ಮನೆಗಳು ಹಾಗೂ ತಾಲೂಕಿನಲ್ಲಿ 8 ಮನೆಗಳನ್ನು ಕಟ್ಟಿಸಿ ಕೊಡಲಾಗಿದೆ ಎಂದು ತಿಳಿಸಿದರು.
ಹೇಮಾವತಿ ವಿ.ಹೆಗ್ಗಡೆಯವರ ಹುಟ್ಟುಹಬ್ಬದ ಅಂಗವಾಗಿ 136 ಮಾಸಾಶನ ಫಲಾನುಭವಿಗಳ ಮನೆಗಳಿಗೆ ತೆರಳಿ ಹಣ್ಣು-ಹಂಪಲು ವಿತರಿಸಲಾಯಿತು.
ಒಕ್ಕೂಟದ ಅಧ್ಯಕ್ಷ ಟಿ.ಮಂಜು ಮಾತನಾಡಿ, ರತ್ನಮ್ಮ ಮತ್ತು ಪುಟ್ಟಯ್ಯ ಅವರಿಗೆ ಗ್ರಾಮ ಪಂಚಾಯಿತಿಯಿಂದ ಮನೆ ಮಂಜೂರು ಮಾಡಿಸಲು ಸಾಧ್ಯವಾಗಲಿಲ್ಲ. ಆದರೆ ಈ ದಿನ ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆಯಿಂದ ಮನೆ ನೀಡಿರುವುದು ಆ ಕುಟುಂಬಕ್ಕೆ ಸಂತೋಷ ತಂದಿದೆ. ಗ್ರಾಮದಲ್ಲಿ ನಮ್ಮ ಊರು ನಮ್ಮ ಕೆರೆ ಯೋಜನೆಯಲ್ಲಿ ಕೆರೆ ಹೂಳು ತೆಗೆದು ಅಭಿವೃದ್ಧಿ ಮಾಡಿರುವುದರಿಂದ ರೈತರಿಗೆ ಅನುಕೂಲವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಭಾಸ್ಕರ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕನ್ನಡ ಪ್ರಮೋದ, ಮುಖಂಡರಾದ ಬೈರೇಗೌಡ, ಶಿವಪ್ರಕಾಶ್, ಪದ್ಮರಾಜು, ಮಹದೇವು, ಅಂತರಸಂತೆ ವಲಯ ಮೇಲ್ವಿಚಾರಕಿ ಶಾಂತಾ ಹಾಗೂ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಇದ್ದರು.