ಮೈಸೂರಿನಲ್ಲಿ ಗುರುವಾರ ಉತ್ತಮ ಮಳೆ ಸುರಿಯಿತು.
ಕಳೆದ ಕೆಲವು ದಿನಗಳಿಂದ ಮುನಿಸಿಕೊಂಡು ಕಣ್ಮರೆಯಾಗಿದ್ದ ಮಳೆಯು, ಮಂಗಳವಾರ ಮಧ್ಯಾಹ್ನ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭರ್ಜರಿಯಾಗಿ ಸುರಿಯಿತು. ದಿಢೀರನೆ ಸುರಿದ ಧಾರಾಕಾರ ಮಳೆಗೆ ನಗರದ ಜನಜೀವನ ಕೆಲಕಾಲ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತು.
ಬೆಳಗಿನಿಂದಲೇ ನಗರದಲ್ಲಿ ಸೂರ್ಯ-ಮೇಘಗಳ ನಡುವೆ ಕಣ್ಣಾಮುಚ್ಚಾಲೆ ಆಟ ನಡೆಯುತ್ತಿತ್ತು. ಗರಿಷ್ಠ ತಾಪಮಾನದಿಂದ ಕಂಗಾಲಾಗಿದ್ದ ಜನರಿಗೆ ಮೋಡಕವಿದ ವಾತಾವರಣವು ಮಳೆಯ ಸುಳಿವನ್ನು ನೀಡಿತ್ತು. ಅದರಂತೆ ಮಧ್ಯಾಹ್ನ 3.20ರ ಸುಮಾರಿಗೆ ವರುಣದೇವ ಅಬ್ಬರಿಸಲು ಪ್ರಾರಂಭಿಸಿದ. ಸತತ ಅರ್ಧ ಗಂಟೆಯ ಕಾಲ ಅಂದರೆ 3.50ರವರೆಗೆ ಆರ್ಭಟಿಸಿದ ಭಾರಿ ಮಳೆಯಿಂದಾಗಿ ನಗರದ ರಸ್ತೆಗಳು ಜಲಾವೃತಗೊಂಡವು.
ದಿಢೀರ್ ಮಳೆಯಿಂದಾಗಿ ವ್ಯಾಪಾರಿಗಳು, ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ಪರದಾಡುವಂತಾಯಿತು. ತಗ್ಗು ಪ್ರದೇಶಗಳಲ್ಲಿದ್ದ ರಸ್ತೆಗಳಲ್ಲಿ ನೀರು ಸರಾಗವಾಗಿ ಹರಿದು ಹೋಗದೆ ನಿಂತಿದ್ದರಿಂದ ವಾಹನ ಚಾಲಕರು ಕಷ್ಟ ಎದುರಿಸಿದರು.
ಕಳೆದ ಕೆಲವು ದಿನಗಳಿಂದ ಧಗೆಯಿಂದ ಕಂಗಾಲಾಗಿದ್ದ ಮೈಸೂರಿನ ಜನತೆಗೆ ಈ ಮಳೆಯು ತಂಪೆರೆಯಿತು. ವಾತಾವರಣದಲ್ಲಿದ್ದ ಕಾವು ಕಡಿಮೆಯಾಗಿ ತಣ್ಣನೆಯ ಗಾಳಿ ಬೀಸಲಾರಂಭಿಸಿದ್ದರಿಂದ ಸಾರ್ವಜನಿಕರು ಹಾಗೂ ರೈತರಲ್ಲಿ ಸಂತಸ ಮೂಡಿದೆ. ಬಿಸಿಲ ಬೇಗೆಯಿಂದ ಕಂಗಾಲಾಗಿದ್ದ ಧರೆಗೆ ಮಳೆಯು ಜೀವಕಳೆ ತಂದಿದೆ.
ತಮಿಳುನಾಡಿಗೆ ನೀರು ಹರಿಸುತ್ತಿರುವ ಪರಿಣಾಮ ಕಾವೇರಿ ಕಣಿವೆಯ ಜಲಾಶಯಗಳ ಮಟ್ಟ ಮಟ್ಟ ಕುಸಿಯುತ್ತಿದ್ದು, ಕುಡಿಯುವ ನೀರು ಹಾಗೂ ಕೃಷಿಗೆ ನೀರಿನ ಅಭಾವ ಸೃಷ್ಟಿಯಾಗುವ ಭೀತಿ ಎದುರಾಗಿದೆ. ಇದನ್ನು ವಿರೋಧಿಸಿ ರಾಜ್ಯದಲ್ಲಿ ಬಂದ್ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಮಳೆಯ ಆಗಮನ ಹೊಸ ಭರವಸೆ ಮೂಡಿಸಿದೆ.