ಹುಣಸೂರು ನಗರದ ತಾ.ಪಂ.ಸಭಾಂಗಣದಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಶಿವಶಂಕರ್ ಸಭೆಗೆ ಮಾಹಿತಿ ನೀಡಿದರು. ಇಒ.ಕೆ.ಹೊಂಗಯ್ಯ, ಆಡಳಿತಾಧಿಕಾರಿ ಸಿದ್ದಗಂಗಮ್ಮ, ಯೋಜನಾಧಿಕಾರಿ ರಾಜೇಶ್ ಇದ್ದರು. 
ಮೈಸೂರು

ಹೃದಯ ಕಾಯಿಲೆ ಲಸಿಕೆ ದಾಸ್ತಾನು

ಲಲಾಟಾಕ್ಷ ಎಸ್

ಹುಣಸೂರು:

ನಗರದ ಡಿ.ದೇವರಾಜ ಅರಸು ಸಾರ್ವಜನಿಕ ಆಸ್ಪತ್ರೆಯಲ್ಲಿ ಹೃದಯ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಜರೂರಾಗಿ ಅಗತ್ಯವಿರುವ ಟೆನೆಕ್ಟೆ ಪ್ಲಸ್ ಲಸಿಕೆ ಲಭ್ಯವಿದ್ದು, ಸರ್ಕಾರದಿಂದ ಉಚಿತವಾಗಿ ಅಗತ್ಯವಿರುವವರಿಗೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶಿವಶಂಕರ್ ತಿಳಿಸಿದರು.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಹೃದಯಾಘಾತ ಸೇರಿದಂತೆ ವಿವಿಧ ತೊಂದರೆಗಳಿಂದ ಬಳಲುತ್ತಿರುವ ರೋಗಿಗಳಿಗೆ ತುರ್ತಾಗಿ ಈ ಇಂಜೆಕ್ಷನ್ ಅಗತ್ಯವಿದೆ. ಆಸ್ಪತ್ರೆಯಲ್ಲಿ ಈ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತಿದ್ದು ಪ್ರಸ್ತುತ 15 ವಯಲ್ ಇಂಜೆಕ್ಷನ್ ದಾಸ್ತಾನು ಇದೆ ಎಂದರು.
ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 35ಕ್ಕೂ ಹೆಚ್ಚು ಗರ್ಭಿಣಿಯರಿಗೆ ಹೆರಿಗೆ ಮಾಡಲಾಗುತ್ತಿದ್ದು, ಅಗತ್ಯವುಳ್ಳವರಿಗೆ ಸಿಜೇರಿಯನ್ ಶಸ್ತ್ರಚಿಕಿತ್ಸೆ ಮಾಡಿಸಲಾಗುತ್ತಿದೆ. ತಾ.ಪಂ.ಅನುದಾನದಡಿ ಅಲ್ಟ್ರಾಸೌಂಡ್ ಯಂತ್ರ ಬಳಸಲಾಗುತ್ತಿದ್ದು, ವಾರಕ್ಕೆರಡು ದಿನ ತಜ್ಞ ವೈದ್ಯರು ಅಗತ್ಯವುಳ್ಳವರಿಗೆ ಅಲ್ಟ್ರಾಸೌಂಡ್ ಪರೀಕ್ಷೆ ನಡೆಸುತ್ತಿದ್ದಾರೆ. ಆಸ್ಪತ್ರೆಯಲ್ಲಿ 6 ಡಯಾಲಿಸಿಸ್ ಯಂತ್ರಗಳಿದ್ದು ಪ್ರತಿ ವಾರ 42 ಜನರಿಗೆ ಡಯಾಲಿಸಿಸ್ ಸೌಲಭ್ಯ ದೊರೆಯುತ್ತಿದೆ ಎಂದು ಮಾಹಿತಿ ನೀಡಿದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ ಮಾತನಾಡಿ, ಕೇಂದ್ರ ಸರ್ಕಾರ ಗರ್ಭಕಂಠ ಕ್ಯಾನ್ಸ್‌ರ್‌ನಿಂದ ದೇಶದ ಮಹಿಳೆಯರನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಎಚ್‌ಪಿವಿ ಲಸಿಕಾ ಅಭಿಯಾನ ಆ.31ಕ್ಕೆ ಅಂತ್ಯಗೊಳ್ಳಲಿದೆ. ತಾಲೂಕಿನಲ್ಲಿ ಶೇ.81.4 ಗುರಿ ಸಾಧನೆ ಮಾಡಲಾಗಿದೆ. ಹುಣಸೂರು ನಗರ, ಕಟ್ಟೆಮಳಲವಾಡಿ ಮತ್ತು ನೇರಳಕುಪ್ಪೆ ಗ್ರಾಮಗಳಲ್ಲಿ ಶೇಕಡಾವಾರು ಪ್ರಮಾಣದಲ್ಲಿ ಇಳಿಕೆಯಾಗಿದೆ. ಈ ಭಾಗದಲ್ಲಿ 14 ವರ್ಷ ತುಂಬಿದ ಮತ್ತು 15 ವರ್ಷ ಮೀರದ ವಿದ್ಯಾರ್ಥಿನಿಯರ ಪಾಲಕರ ಮನವೊಲಿಸಿ ಅಭಿಯಾನ ಯಶಸ್ವಿಗೊಳಿಸಲು ಶ್ರಮಿಸಲಾಗುವುದು ಎಂದರು.
ಆರೋಗ್ಯ ನಿರೀಕ್ಷಣಾಧಿಕಾರಿ ಚಂದ್ರೇಗೌಡ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆಗೆ ಕೈಗೊಂಡ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ನೀಡಿದರು.

94 ಅಂಗನವಾಡಿಗಳಿಗೆ ಸ್ವಂತ ಕಟ್ಟಡವಿಲ್ಲ

ಶಿಶು ಅಬಿವೃದ್ಧಿ ಯೋಜನಾಧಿಕಾರಿ ಸಿ.ಬೋರೇಗೌಡ ಮಾತನಾಡಿ, ತಾಲೂಕಿನಲ್ಲಿ ಒಟ್ಟು 380 ಅಂಗನವಾಡಿ ಕೇಂದ್ರಗಳಿದ್ದು, ಈ ಪೈಕಿ 94 ಕೇಂದ್ರಗಳಿಗ ಸ್ವಂತ ಕಟ್ಟಡವಿಲ್ಲ. 31 ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. 14 ಕೇಂದ್ರಗಳಿಗೆ ನಿವೇಶನವಿದೆ. 9 ಕೇಂದ್ರಗಳಿಗೆ ನಿವೇಶನ ಸಿಕ್ಕಿಲ್ಲ. 9 ಕೇಂದ್ರಗಳು ಸಮುದಾಯ ಭವನದಲ್ಲಿ ನಡೆಯುತ್ತಿದ್ದರೆ, 5 ಕೇಂದ್ರಗಳು ಗ್ರಾ.ಪಂ.ಕಟ್ಟಡದಲ್ಲಿ ನಡೆಯುತ್ತಿವೆ. ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ(ಕೆಆರ್‌ಐಡಿಎಲ್) ವತಿಯಿಂದ ನಿರ್ಮಾಣ ಹಂತದಲ್ಲಿರುವ 45 ಕೇಂದ್ರಗಳ ಕಟ್ಟಡ ಕಾಮಗಾರಿಗಳಿಗೆ ನೀರು ಮತ್ತು ವಿದ್ಯುತ್ ಸಂಪರ್ಕ ಶೀಘ್ರ ಕಲ್ಪಿಸಿಕೊಡಲು ಕ್ರಮವಹಿಸಲಾಗಿದೆ ಎಂದು ಮಾಹಿತಿ ನೀಡಿದರು. ಶೀಘ್ರ ಕಟ್ಟಡ ಕಾಮಗಾರಿ ಪೂರ್ಣಗೊಳಿಸುವಂತೆ ತಾ.ಪಂ.ಆಡಳಿತಾಧಿಕಾರಿ ಸಿದ್ದಗಂಗಮ್ಮ ಕೆಐಆರ್‌ಡಿಎಲ್ ಅಧಿಕಾರಿಗೆ ಸೂಚಿಸಿದರು.
ವಿಶೇಷ ಕಲಿಕಾ ಖಾತ್ರಿ
ಕ್ಷೇತ್ರ ಶಿಕ್ಷಣಾಧಿಕಾರಿ ಕಾಳನಾಯಕ ಮಾತನಾಡಿ, ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಬಲವರ್ಧನೆಗಾಗಿ ಕಲಿಕಾ ಖಾತ್ರಿ ಯೋಜನೆಯನ್ನು ಜಾರಿಗೊಳಿಸಿ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಪ್ರಗತಿಯತ್ತ ಕೊಂಡೊಯ್ಯುವ ಕಾರ್ಯ ನಡೆಸಲಾಗಿದೆ. ತಾಲೂಕಿನ 73 ಪ್ರೌಢಶಾಲೆಗಳಲ್ಲಿ ಯೋಜನೆ ಜಾರಿಗೊಂಡಿದೆ. ಅಲ್ಲದೆ, ನನ್ನ ಓದುವ ಸಮಯ ಯೋಜನೆ ಜಾರಿಗೊಳಿಸಿ ಮಕ್ಕಳು ಮನೆಯಲ್ಲಿ ವಿದ್ಯಾಭ್ಯಾಸ ನಡೆಸುವ ಅವಧಿ ಮತ್ತು ಓದುವ ಪರಿಯನ್ನು ಪರಿಶೀಲಿಸಲಾಗುತ್ತಿದೆ. ತಾಲೂಕಿನಲ್ಲಿ ಶೂನ್ಯ ಹಾಜರಾತಿ ಇರುವ ನಾಲ್ಕು ಶಾಲೆಗಳಿವೆ. ಒಬ್ಬ ವಿದ್ಯಾರ್ಥಿ ಹೊಂದಿರುವ ನಾಲ್ಕು ಶಾಲೆಗಳಿವೆ. ಪ್ರಾಥಮಿಕ ಶಾಲಾ ವಿಭಾಗದಲ್ಲಿ 119 ಮತ್ತು ಪ್ರೌಢಶಾಲಾ ವಿಭಾಗದಲ್ಲಿ 44 ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ ಎಂದರು.
12 ಲಕ್ಷ ರೂ.ಗೃಹಲಕ್ಷ್ಮಿ ಹಣ ವಾಪಸ್
ತಾಲೂಕಿನಲ್ಲಿ ಜುಲೈ ತಿಂಗಳಾಂತ್ಯಕ್ಕೆ ಒಟ್ಟು 76,243 ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 67,848 ಜನರಿಗೆ ಜುಲೈ ತಿಂಗಳವರೆಗೆ ಹಣ ಸಂದಾಯವಾಗಿದೆ. ಈ ನಡುವೆ 1,617 ಮೃತಪಟ್ಟ ಫಲಾನುಭವಿಗಳನ್ನು ಗುರುತಿಸಿದ್ದು, ಇವರ ಖಾತೆಗೆ 68 ಲಕ್ಷ ರೂ.ಹಣ ಸಂದಾಯವಾಗಿದ್ದು, ಈ ಪೈಕಿ 12 ಲಕ್ಷ ರೂ.ವಾಪಸ್ ಪಡೆಯಲಾಗಿದೆ. ಉಳಿದ ಹಣವನ್ನು ವಸೂಲು ಮಾಡುವ ಕಾರ್ಯ ಪ್ರಗತಿಯಲ್ಲಿದೆ ಎಂದು ಸಿಡಿಪಿಒ ಸಿ.ಬೋರೋಗೌಡ ತಿಳಿಸಿದರು.
ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಸುನಿತಾ ಮಾತನಾಡಿ, ಈ ಬಾರಿ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಮೂರು ಸಾವಿರ ಗಿಡಗಳನ್ನು ಬೆಳೆಸಲು ಸರ್ಕಾರ ಅನುದಾನ ನೀಡಿದೆ ಎಂದು ತಿಳಿಸಿದರು. ಸಭೆಯಲ್ಲಿ ತಾ.ಪಂ.ಕಾರ್ಯ ನಿರ್ವಹಣಾಧಿಕಾರಿ ಕೆ.ಹೊಂಗಯ್ಯ, ಯೋಜನಾಧಿಕಾರಿ ರಾಜೇಶ್, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.