ನೇಗಿಲಯೋಗಿ ಮಹಿಳೆಯರ ಹಿತೈಷಿಗಳ ಸೇವಾ ಬಳಗದಿಂದ ನಗರದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಸಾಧಕಿಯರನ್ನು ಸನ್ಮಾನಿಸಲಾಯಿತು. ಡಾ.ಎಂ.ಶ್ವೇತಾ ಸದಾನಂದ, ಜೆ.ಶೋಭಾ, ಸಂಧ್ಯಾ ಮಂಜುನಾಥ್, ಸುನಂದಾ, ರಾಣಿ ಮಹೇಶ್, ಶ್ರುತಿ ರಾಣಿತೇಜಸ್ ಇತರರು ಇದ್ದರು.
- ಕುಟುಂಬ, ಸಮಾಜ, ಕೆಲಸ ಎಂದು ಮಹಿಳೆ ಸದಾ ಒತ್ತಡದಲ್ಲಿಯೇ ಜೀವನ ಸಾಗಿಸುತ್ತಿದ್ದಾಳೆ
- ಹೃದಯ ಸಮಸ್ಯೆ ಜೊತೆಗೆ ಮೂಳೆ ಸಂಬಂಧಿತ ಸಮಸ್ಯೆಗೆ ಬಹುಬೇಗ ತುತ್ತಾಗುತ್ತಿದ್ದಾಳೆ
ಮೈಸೂರು:ಕುಟುಂಬ, ಕೆಲಸ, ಸಮಾಜ ಎಂದು ತನ್ನ ವೈಯಕ್ತಿಕ ಆರೋಗ್ಯದತ್ತ ಗಮನ ಕೊಡದೆ ಇರುವುದರಿಂದ ಮಹಿಳೆ ಬಹುಬೇಗ ಆರೋಗ್ಯ ಸಮಸ್ಯೆಗೆ ಸಿಲುಕಿಕೊಳ್ಳುತ್ತಿದ್ದಾರೆ ಎಂದು ಮೈಸೂರು ವೈದ್ಯಕೀಯ ಮಹಾವಿದ್ಯಾಲಯದ ಹಾಗೂ ಸಂಶೋಧನ ಸಂಸ್ಥೆಯ ಸಹ ಪ್ರಾಧ್ಯಾಪಕಿ ಡಾ.ಎಂ.ಶ್ವೇತಾ ಸದಾನಂದ ಬೇಸರ ವ್ಯಕ್ತಪಡಿಸಿದರು.
ನೇಗಿಲಯೋಗಿ ಮಹಿಳೆಯರ ಹಿತೈಷಿಗಳ ಸೇವಾ ಬಳಗ, ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್, ಮರುಳೇಶ್ವರ ಧರ್ಮದರ್ಶಿ ಟ್ರಸ್ಟ್ ಸಹಯೋಗದಲ್ಲಿ ಜಯನಗರದ ನೇಗಿಲಯೋಗಿ ಸೇವಾ ಭವನದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ, ಸನ್ಮಾನ ಹಾಗೂ ವ್ಹೀಲ್ ಚೇರ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಿಳೆ ಇಂದು ಎಲ್ಲ ಕ್ಷೇತ್ರದಲ್ಲಿಯೂ ದುಡಿಯುತ್ತಿದ್ದಾಳೆ. ಮನೆ ಒಳಗೆ ಹಾಗೂ ಹೊರಗೂ ಕೆಲಸ ಮಾಡುತ್ತಿರುವುದರಿಂದ ಕುಟುಂಬ, ಸಮಾಜ, ಕೆಲಸ ಎಂದು ಸದಾ ಒತ್ತಡದಲ್ಲಿಯೇ ಜೀವನ ಸಾಗಿಸುತ್ತಿದ್ದಾಳೆ. ಇದರಿಂದ ಅವಳು ತನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಹೀಗಾಗಿ ಮೂಳೆ ಸಂಬಂಧಿತ ಸಮಸ್ಯೆ ಜತೆಗೆ ಇತರ ಆರೋಗ್ಯ ಸಮಸ್ಯೆಗಳಿಗೆ ಬಹುಬೇಗ ತುತ್ತಾಗುತ್ತಿದ್ದಾಳೆ. ಇತ್ತೀಚಿನ ಅಧ್ಯಯನ ಪ್ರಕಾರ ಒತ್ತಡದ ಜೀವನದಿಂದ ಮಹಿಳೆಯರಲ್ಲಿಯೂ ಹೃದಯಾಘಾತ ಪ್ರಮಾಣ ಹೆಚ್ಚಾಗಿದೆ ಎಂದು ಹೇಳಿದರು.
‘ಶಕ್ತಿ’ ಎಂದು ಕರೆಯುವ ಮಹಿಳೆ ಇಂದು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ತಮ್ಮ ವೈಯಕ್ತಿಕ ಆರೋಗ್ಯದತ್ತ ಗಮನ ಹರಿಸಬೇಕು. ಪೌಷ್ಟಿಕ ಆಹಾರದ ಜತೆಗೆ ಕನಿಷ್ಠ ಅರ್ಧಗಂಟೆಯಾದರೂ ವ್ಯಾಯಾಮ, ವಾಕಿಂಗ್ ಮಾಡುವ ಮೂಲಕ ದೇಹವನ್ನು ಚಟುವಟಿಕೆಯಿಂದ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಹಿಳೆಯರಿಗೆ ಸಾಕಷ್ಟು ಕಟ್ಟುಪಾಡುಗಳು ಇದ್ದು, ಅವುಗಳ ನಡುವೆಯೇ ಆಕೆ ಬದುಕಬೇಕಿದೆ. ಇದರಿಂದ ಪ್ರತಿಭೆ ಇದ್ದರೂ ಸಾಧನೆ ಮಾಡಲು ಕೆಲವೊಮ್ಮೆ ಅಡ್ಡಿಯಾಗುತ್ತದೆ. ಆದ್ದರಿಂದ ಆಕೆಯ ಪ್ರತಿಭೆಯನ್ನು ಪ್ರೋತ್ಸಾಹಿಸುವ ಕೆಲಸ ಮಾಡಿದರೆ ಮಹಿಳೆ ಇನ್ನಷ್ಟು ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ನೇಗಿಲಯೋಗಿ ಮಹಿಳೆಯರ ಹಿತೈಷಿಗಳ ಸೇವಾ ಬಳಗ ಅಧ್ಯಕ್ಷೆ ಜೆ.ಶೋಭಾ ಮಾತನಾಡಿ, ಮಹಿಳೆ ಎಲ್ಲ ರಂಗದಲ್ಲಿಯೂ ಸಾಧನೆ ಮಾಡಿದ್ದರೂ ಕುಟುಂಬದವರ ಪ್ರೋತ್ಸಾಹ ಅಗತ್ಯ. ಪ್ರೋತ್ಸಾಹ ದೊರೆತರೆ ಮಹಿಳೆ ಇನ್ನಷ್ಟು ಎತ್ತರಕ್ಕೆ ಏರಬಹುದು. ನಮ್ಮ ಸೇವಾ ಬಳಗದಿಂದ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಹಿಳೆಯರಲ್ಲಿ ಆತ್ಮಸೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದರು.
ಅಂತಾರಾಷ್ಟ್ರೀಯ ಜಾನಪದ ಗಾಯಕ ಗೋನಾಳ ಸ್ವಾಮಿ (ಗೋ.ನಾ.ಸ್ವಾಮಿ) ಮಾತನಾಡಿ, ಇಂದಿನ ದಿನಗಳಲ್ಲಿ ಕೇವಲ ಭಾಷಣ ಮಾಡುವುದಕ್ಕಿಂತ ಜೀವನ ಹೇಗೆ ಮಾಡಬೇಕು, ವೃತ್ತಿಯನ್ನು ಕಟ್ಟಿಕೊಂಡು ಬದುಕುವುದು ಹೇಗೆ ಎನ್ನುವುದನ್ನು ತಿಳಿಸಿಕೊಡುವ ಅಗತ್ಯವಿದೆ. ಮಹಿಳೆ ಸಾಧನೆಗೆ ಪುರುಷರು ಹೇಗೆ ಬೆಂಬಲವಾಗಿ ನಿಲ್ಲುತ್ತಾರೆಯೋ ಹಾಗೆಯೇ ಪುರುಷರ ಸಾಧನೆಗೆ ಮಹಿಳೆ ಬೆಂಬಲವಾಗಿ ಇರುತ್ತಾಳೆ. ಆದ್ದರಿಂದ ಇತರೊಂದಿಗೆ ನಿಮ್ಮನ್ನು ಹೋಲಿಕೆ ಮಾಡಿಕೊಳ್ಳದೆ ಸಂಸ್ಕಾರ ವಂತರಾಗಿ ಸಂಸ್ಕಾರ ಸಾಗಿಸಬೇಕಿದೆ ಎಂದು ಹೇಳಿದರು.
ಮೈಸೂರಿನ ಮೂರನೇ ಜೆಎಂಎಫ್ ನ್ಯಾಯಾಲಯದ ಸಂಧ್ಯಾ ಮಂಜುನಾಥ್, ಮರುಳೇಶ್ವರ ಧರ್ಮದರ್ಶಿ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಮಹದೇವಯ್ಯ ಮಾತನಾಡಿದರು. ಇದೇ ಸಂದರ್ಭದಲ್ಲಿ ಮೈಸೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕಿ ಡಾ. ಎಚ್.ಎಸ್.ಕಾವ್ಯಶ್ರೀ, ಶಿವನಸಮುದ್ರದ ಕೆಪಿಸಿಎಲ್ ಎಇಇ ಜಿ.ಕುಸುಮಾ, ಪತ್ರಕರ್ತೆ ಸಹನಾಗೌಡ, ಪ್ರಗತಿಪರ ರೈತ ಮಹಿಳೆ ಲಕ್ಷ್ಮೀಪುರದ ಸವಿತಾ, ಉದ್ಯಮಿ ಬೆಂಗಳೂರಿನ ರಂಜಿತಾ ಸಿದ್ದೇಶ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಡಿ.ರವಿಕುಮಾರ್, ಸೇವಾ ಬಳಗದ ಗೌರವಾಧ್ಯಕ್ಷೆ ಸುನಂದಾ, ಕಾರ್ಯದರ್ಶಿ ರಾಣಿ ಮಹೇಶ್, ಖಜಾಂಚಿ ಶ್ರುತಿ ರಾಣಿತೇಜಸ್ ಇತರರು ಇದ್ದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.