ಬನ್ನಿಕುಪ್ಪೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸಾರ್ವಜನಿಕ ಆರೋಗ್ಯ ಪರೀಕ್ಷೆ ನಡೆಸಲಾಯಿತು.
ಬನ್ನಿಕುಪ್ಪೆ: ಮನುಷ್ಯ ದಿನನಿತ್ಯ ಸರಿಯಾದ ಆಹಾರ ಕ್ರಮ ಅನುಸರಿಸಿದರೆ ಯಾವ ರೋಗವೂ ಹತ್ತಿರ ಸುಳಿಯುವುದಿಲ್ಲ ಎಂದು ಹುಣಸೂರು ಅಪೋಲೊ ಆಸ್ಪತ್ರೆ ಪ್ರಸೂತಿ ತಜ್ಞೆ ಡಾ.ಕಬಿತಾ ತಿಳಿಸಿದರು.
ಹುಣಸೂರು ತಾಲೂಕಿನ ಬನ್ನಿಕುಪ್ಪೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಗರದ ಸರ್ಕಾರಿ ಮಹಿಳಾ ಕಾಲೇಜು ರೋಟರಿ ಕ್ಲಬ್, ಹುಣಸೂರು ಅಪೊಲೋ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸಾರ್ವಜನಿಕರಿಗೆ ಚಿಕಿತ್ಸೆ ನೀಡಿ ಮಾತನಾಡಿದರು. ಸಸ್ಯಾಹಾರಿಗಳಾದರೆ ಸೊಪ್ಪು, ತರಕಾರಿ, ಬೆಣ್ಣೆ, ತುಪ್ಪವನ್ನು ನಿಯಮಿತವಾಗಿ ಸೇವಿಸಿ. ಮಾಂಸಾಹಾರಿಗಳಾದರೆ ಮೀನು, ಮೊಟ್ಟೆ, ಚಿಕನ್ ಅನ್ನು ಮಿತವಾಗಿ ಸೇವಿಸಿದರೆ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.
ರೋಟರಿ ಕ್ಲಬ್ ಅಧ್ಯಕ್ಷ ಎಚ್.ಆರ್.ಕೃಷ್ಣಕುಮಾರ್, ಕಾರ್ಯಕ್ರಮಾಧಿಕಾರಿ ಡಾ.ಪ್ರಸನ್ನ, ಸಹ ಶಿಬಿರಾಧಿಕಾರಿ ಎಂ.ಸಿ.ಲಕ್ಷ್ಮಯ್ಯ ಮಾತನಾಡಿದರು. ಅಪೋಲೊ ಆಸ್ಪತ್ರೆಯ ವ್ಯವಸ್ಥಾಪಕ ಕೇಶವ್ ಮೂರ್ತಿ, ಸುಮಾ, ಶಿಬಿರದ ಕ್ಯಾಪ್ಟನ್ ಮಧುರಾ, ಹರ್ಷಿತಾ ಇತರರು ಇದ್ದರು ಶಿಬಿರದಲ್ಲಿ ಸುಮಾರು 50ಕ್ಕೂ ಹೆಚ್ಚು ರೋಗಿಗಳು ತಪಾಸಣೆಗೆ ಒಳಗಾದರು.