‘ಸ್ವಸ್ಥ ಮೈಸೂರು’ ಕಾರ್ಯಕ್ರಮಕ್ಕೆ ಶುಕ್ರವಾರ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು. ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಆರೋಗ್ಯ ವರ್ಲ್ಡ್ ಇಂಡಿಯಾ ಟ್ರಸ್ಟ್‌ನ ಡಾ.ನಳಿನಿ ಸಾಲಿಗ್ರಾಮ್ ಇತರರಿದ್ದರು.
- ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯ
- ‘ಸ್ವಸ್ಥ ಮೈಸೂರು’ ಕಾರ್ಯಕ್ರಮಕ್ಕೆ ಚಾಲನೆ
ಮೈಸೂರು: ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಆಹಾರ ಪದಾರ್ಥಗಳ ಬಳಕೆ, ಉತ್ತಮ ಜೀವನ ಶೈಲಿ ಅಳವಡಿಸಿಕೊಳ್ಳಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ನಗರದ ಕೃಷ್ಣರಾಜ ಬುಲೇವಾರ್ಡ್ ರಸ್ತೆಯಲ್ಲಿರುವ ಒಡೆಯರ್ ಸೆಂಟರ್ ಆರ್ಕಿಟೆಕ್ಚರ್ ಸಭಾಂಗಣದಲ್ಲಿ ಶ್ರೀ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ೌಂಡೇಷನ್, ಆರೋಗ್ಯ ವರ್ಲ್ಡ್ ಇಂಡಿಯಾ ಟ್ರಸ್ಟ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿಯಾಗಿ ಕಾರ್ಪೊರೇಟ್‌ಗಳು, ಸರ್ಕಾರಿ ಸಂಸ್ಥೆಗಳು, ನಾಗರಿಕ ಸಮಾಜ, ಶೈಕ್ಷಣಿಕ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಿರುವ ‘ಸ್ವಸ್ಥ ಮೈಸೂರು’ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಸ್ವಸ್ಥ ಮೈಸೂರು ಕಾರ್ಯಕ್ರಮ ಮಹತ್ವದ ಉದ್ದೇಶಿತ ಹಾಗೂ ಮೈಸೂರಿನ ಆರೋಗ್ಯ ಸ್ಥಿತಿಯನ್ನು ಉನ್ನತೀಕರಗೊಳಿಸುವ ಕಾರ್ಯಕ್ರಮ ಇದಾಗಿದೆ. ಸರ್ಕಾರದೊಂದಿಗೆ ಸಂಘ-ಸಂಸ್ಥೆಗಳು ಕೈ ಜೋಡಿಸಿದರೆ ಮಾತ್ರವೇ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದರು.
ಸಮಾಜದಲ್ಲಿ ಸಾಂಕ್ರಾಮಿಕವಲ್ಲದ ರೋಗಗಳ ಹೊರೆ ಕಡಿಮೆ ಮಾಡುವ ಮೂಲಕ ಆರೋಗ್ಯ ಮೈಸೂರನ್ನಾಗಿ ರೂಪಿಸಲು ಕಾರ್ಯಕ್ರಮ ಆಯೋಜಿಸಲಾಗಿದೆ. ದೇಶದಲ್ಲಿ ಸಾಂಕ್ರಾಮಿಕವಲ್ಲದ ರೋಗಗಳು ಹೆಚ್ಚಾಗುತ್ತಿವೆ. ಡಯಾಬಿಟಿಸ್, ಬಿಪಿ, ಕ್ಯಾನ್ಸರ್ ಇನ್ನಿತರ ಕಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ. ಇದಕ್ಕೆಲ್ಲ ನಮ್ಮ ದೈನಂದಿನ ಅಭ್ಯಾಸಗಳೇ ಕಾರಣ. ಇದೆಲ್ಲವನ್ನೂ ಕಂಡು ಸುಮ್ಮನೇ ಕೂರಲು ಸಾಧ್ಯವಿಲ್ಲ. ಜನರಿಗೆ ಆರೋಗ್ಯ ಕಾಪಾಡುಕೊಳ್ಳುವಂತೆ ತಿಳಿ ಹೇಳಬೇಕಾಗುತ್ತದೆ ಎಂದರು.
ರಾಜ್ಯದಲ್ಲಿ ಹಲವು ಆರೋಗ್ಯ ಕಾರ್ಯಕ್ರಮಗಳನ್ನು ರೂಪಿಸಿದ್ದು, ಉಚಿತವಾಗಿ ಹಲವು ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಡಯಾಬಿಟಿಸ್, ಬಿಪಿಗೆ ಉಚಿತವಾಗಿ ಔಷಧ ನೀಡಲಾಗುತ್ತಿದೆ. ಮಕ್ಕಳು ಕೂಡ ಮಾನಸಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಿ 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣ ಬಳಕೆಮಾಡದಂತೆ ರದ್ದು ಮಾಡಲಾಗಿದೆ. ಇದೆಲ್ಲಕ್ಕೂ ಮುಖ್ಯವಾಗಿ ಜನರಲ್ಲಿ ಆರೋಗ್ಯ ಅರಿವು ಮೂಡಿಸುವುದು ಮುಖ್ಯವಾಗಿದೆ. ಹಾಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಪೂರ್ಣ ಸಹಕಾರ ನೀಡಲಿದ್ದು, ದೀರ್ಘಕಾಲದ ಕಾರ್ಯಕ್ರಮವನ್ನಾಗಿ ರೂಪಿಸಿ ಆರೋಗ್ಯ ಮೈಸೂರು ನಿರ್ಮಾಣವಾಗಲಿ ಎಂದರು.
ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಮಾತನಾಡಿ, ಮೈಸೂರನ್ನು ಆರೋಗ್ಯ ನಗರವನ್ನಾಗಿ ರೂಪಿಸುವಲ್ಲಿ ಈ ಕಾರ್ಯಕ್ರಮ ರೂಪಿಸಲಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ಉದ್ಘಾಟಿಸಲಾಗಿದೆ. ಇದೀಗ ಮೈಸೂರಿನಲ್ಲಿ ಸ್ವಸ್ಥ ಮೈಸೂರು ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೊಂದಿಗೆ 2 ವರ್ಷಗಳ ಅವಧಿಗೆ ಒಡಂಬಡಿಕೆ ಮಾಡಿಕೊಳ್ಳಲಾಗುವುದು ಎಂದರು.
ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಆರೋಗ್ಯ ವರ್ಲ್ಡ್ ಇಂಡಿಯಾ ಟ್ರಸ್ಟ್‌ನ ಡಾ.ನಳಿನಿ ಸಾಲಿಗ್ರಾಮ್, ಯೋಗಗುರು ಆರ್ಚಾಯ ಭರತ್ ಶೆಟ್ಟಿ, ಖ್ಯಾತ ವೈದ್ಯರಾದ ಡಾ.ಸಿ.ಡಿ.ಶ್ರೀನಿವಾಸ್ ಮೂರ್ತಿ, ಡಾ.ಖಾದರ್ ವಾಲಿ, ಜಿಲ್ಲಾ ಸರ್ವೇಕ್ಷಾಧಿಕಾರಿ ಡಾ.ನಾಗರಾಜು, ಡಾ.ಪ್ರತೀಭಾ ಪೇರೆರಾ, ಶ್ರೀ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ೌಂಡೇಶನ್ ಕಾರ್ಯದರ್ಶಿ ರಿಜಿನಲ್ ವೆಸ್ಲಿ ಮತ್ತಿತರರಿದ್ದರು.