ಮೈಸೂರು ತಾಲೂಕು ಶರಣ ಸಾಹಿತ್ಯ ಪರಿಷತ್ತು ಮತ್ತು ಬಸವಮಾರ್ಗ ಫೌಂಡೇಷನ್(ರಿ)ನಿಂದ ನಗರದಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸವನ್ನು ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಉದ್ಘಾಟಿಸಿದರು. ಪ್ರೊ. ಮೈಸೂರು ಕೃಷ್ಣಮೂರ್ತಿ, ಡಾ.ಹೆಳವರಹುಂಡಿ ಸಿದ್ದಪ್ಪ, ಎಂ.ಚಂದ್ರಶೇಖರ್, ಎಸ್. ಬಸವರಾಜು, ದೇವರಾಜು ಪಿ.ಚಿಕ್ಕಹಳ್ಳಿ(ದೇಚಿ) ಇತರರರು ಇದ್ದರು.  
ಮೈಸೂರು

ಮನುಷ್ಯನಿಗೆ ಆರೋಗ್ಯವೇ ನಿಜವಾದ ಭಾಗ್ಯ: ಅಂಶಿ ಪ್ರಸನ್ನ ಕುಮಾರ್ ಅಭಿಮತ

ಪ್ರಮುಖ ಮುಖ್ಯಾಂಶಗಳು

  • ಮದ್ಯಪಾನ ವಾಸ್ತವದ ದಿನಗಳಲ್ಲಿ ಫ್ಯಾಷನ್ ಆಗಿ ಬದಲಾಗಿದೆ
  • ಅರಿವಿನ ಕೊರತೆ ನಮ್ಮನ್ನು ದುಶ್ಚಟಗಳಿಗೆ ದೂಡುತ್ತಿದೆ
ಮೈಸೂರು: ತಾಲೂಕು ಶರಣ ಸಾಹಿತ್ಯ ಪರಿಷತ್ತು ಮತ್ತು ಬಸವಮಾರ್ಗ ಫೌಂಡೇಷನ್(ರಿ) ವತಿಯಿಂದ ಮಂಗಳವಾರ ನಗರದ ಹೆಬ್ಬಾಳಿನಲ್ಲಿ ಇರುವ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದಲ್ಲಿ ‘ವಚನಗಳಲ್ಲಿ ವ್ಯಸನಮುಕ್ತ ಜೀವನ’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮನುಷ್ಯನಿಗೆ ಆರೋಗ್ಯವೇ ನಿಜವಾದ ಭಾಗ್ಯ. ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯ. ಕೆಟ್ಟ ವ್ಯಸನಗಳಿಗೆ ಮನುಷ್ಯ ಬಲಿಯಾಗಬಾರದು. ಆದರೆ ಕುಡಿತ, ಮದ್ಯಪಾನ ವಾಸ್ತವದ ದಿನಗಳಲ್ಲಿ ಫ್ಯಾಷನ್ ಆಗಿ ಬದಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. 
ಮದ್ಯವ್ಯಸನದಿಂದ ಹಲವು ಕುಟುಂಬಗಳು ತೊಂದರೆಗೆ ಸಿಲುಕಿವೆ. ಅರಿವಿನ ಕೊರತೆ ನಮ್ಮನ್ನು ದುಶ್ಚಟಗಳಿಗೆ ದೂಡುತ್ತಿದೆ. ಶಾಲೆ-ಕಾಲೇಜು ಹಂತದಲ್ಲೆ ಈ ಬಗ್ಗೆ ಅರಿವು ಮೂಡಿಸಬೇಕು. ವ್ಯಸನಿ ಗೌರವಯುತ ಜೀವನ ಮಾಡಲು ಮುಂದಾಗಬೇಕು. ಪ್ರತಿಯೊಬ್ಬರೂ ಸದೃಢ ಸಮಾಜ ನಿರ್ಮಾಣ ಮಾಡಲು ಕೈ ಜೋಡಿಸಬೇಕು ಎಂದು ಸಲಹೆ ನೀಡಿದರು.
‘ವಚನಗಳಲ್ಲಿ ವ್ಯಸನಮುಕ್ತ ಜೀವನ’ ವಿಷಯ ಕುರಿತು ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಮೈಸೂರು ಕೃಷ್ಣಮೂರ್ತಿ ಉಪನ್ಯಾಸ ನೀಡಿ, ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡಬೇಕು ಎಂದು ನಮ್ಮ ಶಿವ ಶರಣರು ದೊಡ್ಡ ಹೋರಾಟವನ್ನೇ ಮಾಡಿದರು. ತಮ್ಮ, ತಮ್ಮ ವಚನಗಳ ಮೂಲಕ ಸಮಾಜವನ್ನು ಎಚ್ಚರಿಸುವ ಕೆಲಸ ಮಾಡಿದರು. ವೇದ, ಉಪನಿಷತ್ತುಗಳಲ್ಲಿ ಇದ್ದ ಸಾರವನ್ನು ಸಾಮಾನ್ಯನಿಗೂ ಅರ್ಥವಾಗುವಂತೆ ಪದಗಳನ್ನು ಕಟ್ಟಿದರು. ಅದರ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದರು ಎಂದು ತಿಳಿಸಿದರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಡಾ.ಹೆಳವರಹುಂಡ ಸಿದ್ದಪ್ಪ ಮಾತನಾಡಿ, ಒಂದು ದೇಶವನ್ನು ಹಾಳು ಮಾಡಬೇಕು ಎಂದುಕೊಂಡರೆ ಆ ದೇಶಕ್ಕೆ ಬಾಂಬ್, ಮದ್ದು-ಗುಂಡುಗಳನ್ನು ಹಾಕುವ ಅವಶ್ಯಕತೆ ಇಲ್ಲ. ಆ ದೇಶದ ಯುವಕರು ವ್ಯಸನಕ್ಕೆ ಬಲಿಯಾದರೆ ಆ ದೇಶ ದಿವಾಳಿಯಾಗುತ್ತದೆ ಎಂದರು. 
 ಪಾಶ್ಚಿಮಾತ್ಯ ದೇಶಗಳು ಉದಾಹರಣೆಯಾಗಿ ನಮ್ಮ ಕಣ್ಣ ಮುಂದೆ ಇವೆ. ಅಲ್ಲದೆ  ಪಂಜಾಬ್ ರಾಜ್ಯದಲ್ಲಿ ಮನೆ, ಮನೆಗೂ ವ್ಯಸನಿಗಳು ಹುಟ್ಟುಕೊಂಡಿದ್ದಾರೆ. ಇದು ಇದೇ ಮಾದರಿಯಲ್ಲಿ ಮುಂದುವರಿದೆ ದೇಶದ ಕತೆ ಏನು ಎಂಬುದರ ಕುರಿತು ತುರ್ತಾಗಿ ಯೋಚಿಸಬೇಕಾಗಿದೆ ಎಂದು ಹೇಳಿದರು. 
ಶರಣ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಜಿಲ್ಲಾ ಅಧ್ಯಕ್ಷ ಎಂ.ಚಂದ್ರಶೇಖರ್ ಮಾತನಾಡಿ, ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಶರಣ ಸಾಹಿತ್ಯ ತಾಲೂಕು ಪರಿಷತ್ತು ತನ್ನದೆ ಆದ ಕೊಡುಗೆಯನ್ನು ಸಮಾಜಕ್ಕೆ ನೀಡುತ್ತ ಬರುತ್ತಿದೆ. ಕಟ್ಟ ಕಡೆಯ ವ್ಯಕ್ತಿಗೂ ಕೂಡ ಶರಣರ ತತ್ವಗಳು ತಲುಪಬೇಕು ಎನ್ನುವ ನಿಟ್ಟಿನಲ್ಲಿ ಕೆಲಸ ಮಾಡಿಕೊಂಡು ಬರುತ್ತಿದೆ ಎಂದು ತಿಳಿಸಿದರು. 
ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಶರಣ ದೇವರಾಜು ಪಿ.ಚಿಕ್ಕಹಳ್ಳಿ(ದೇಚಿ) ಮಾತನಾಡಿದರು. ಸಾಹಿತಿ, ಡಾ. ಮುಡಿಗುಂಡ ಎಸ್.ಪುಟ್ಟಪ್ಪ, ಗಾಯಕ ಚನ್ನಬಸಪ್ಪ, ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದ ವ್ಯವಸ್ಥಾಪಕ ಮಹೇಶ್, ಸಿಬ್ಬಂದಿ ಮಂಜುನಾಥ್, ಆನಂದ್ ಇತರರು ಇದ್ದರು.
15 ಸಾವಿರ ವ್ಯಸನಿಗಳಿಗೆ ಸೇವೆ 
ಬಸವಮಾರ್ಗ ಫೌಂಡೇಷನ್(ರಿ) ಸಂಸ್ಥಾಪಕ ಅಧ್ಯಕ್ಷ ಎಸ್. ಬಸವರಾಜು ಮಾತನಾಡಿ, ವ್ಯಸನಮುಕ್ತ ಸಮಾಜ ನಿರ್ಮಾಣದ ಕನಸು ಹೊತ್ತು ಮುನ್ನೆಡೆಯುತ್ತಿರುವ ಬಸವಮಾರ್ಗ ಫೌಂಡೇಷನ್ ಸಮಾಜ ಸೇವೆಗೆ ತನ್ನನ್ನು ತಾನು ಅರ್ಪಣೆ ಮಾಡಿಕೊಂಡಿದೆ. 6 ವರ್ಷಗಳಲ್ಲಿ 55 ಕುಡಿತ ಬಿಡಿಸುವ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಇದುವರೆಗೆ 15 ಸಾವಿರ ವ್ಯಸನಿಗಳಿಗೆ ಸೇವೆ ನೀಡಿದೆ. ಇದರಿಂದ ಇಂದು ಸಾವಿರಾರು ಕುಟುಂಬಗಳು ನೆಮ್ಮಂದಿಯಿಂದಿವೆ ಎಂದು ವಿವರಿಸಿದರು.