ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಿಂದ ಹಾಡಿ ಮಕ್ಕಳಿಗೆ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. 
ಮೈಸೂರು

ಡಿ.ಬಿ.ಕುಪ್ಪೆ ಆಶ್ರಮ ಶಾಲೆ ಮಕ್ಕಳಿಗೆ ಆರೋಗ್ಯ ತಪಾಸಣೆ

ಪ್ರಮುಖ ಮುಖ್ಯಾಂಶಗಳು

  • ಮಕ್ಕಳ ಆರೋಗ್ಯ ಚೆನ್ನಾಗಿದ್ದರೆ ಅವರ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ
  • ಪ್ರತಿವರ್ಷ 10 ರಿಂದ 15 ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸುತ್ತಿದ್ದೇವೆ
ಮೈಸೂರು:ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ, ರಾಜ್ಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಿಂದ ಫಾರುಕ್ ಅಕಾಡೆಮಿ ಆಫ್ ಮೆಡಿಕಲ್ ಎಜುಕೇಷನ್ ಆಸ್ಪತ್ರೆ ಸಹಯೋಗದಲ್ಲಿ ಎಚ್.ಡಿ. ಕೋಟೆ ತಾಲೂಕು ಡಿ.ಬಿ.ಕುಪ್ಪೆ ಆಶ್ರಮ ಶಾಲೆಯ 165 ವಿದ್ಯಾರ್ಥಿಗಳಿಗೆ ಕಣ್ಣು ಮತ್ತು ಆರೋಗ್ಯ ತಪಾಸಣೆ ನಡೆಸಲಾಯಿತು.
ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಉಪನಿರ್ದೇಶಕಿ ಎಚ್.ಎಸ್.ಗಿರಿಜಾಂಬ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿವಿಧ ಆಶ್ರಮ ಶಾಲೆಗಳಲ್ಲಿ ಇನ್ನೂ 9 ಕಣ್ಣಿನ ತಪಾಸಣಾ ಶಿಬಿರಗಳನ್ನು ಮಾಡಲಾಗುವುದು. ಯುವಕರಲ್ಲಿ ಸ್ವಯಂ ಉದ್ಯೋಗದ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ರಾಷ್ಟ್ರೀಯ ವಿಚಾರ ಸಂಕಿರಣ, ವಿಭಾಗೀಯ ವಿಚಾರ ಸಂಕಿರಣ, ಬುಡಕಟ್ಟು ಜನರ ಹಬ್ಬಗಳ ಆಚರಣೆಗಳನ್ನು ನಡೆಸಲಾಗುವುದು. ಇಂದು ಐಸ್ಕ್ರೀನ್ ಟೆಸ್ಟ್, ಮಾನಸಿಕ ಕಾಯಿಲೆ ಬಗ್ಗೆ, ಇಸಿಜಿ, ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ ಪರೀಕ್ಷೆ ಹಾಗೂ ಸಾಮಾನ್ಯ ತಪಾಸಣೆ ನಡೆಸಲಾಯಿತು ಎಂದು ಹೇಳಿದರು.
ಮಕ್ಕಳಿಗೆ ಹೆಚ್ಚಿನ ಚಿಕಿತ್ಸೆ ಬೇಕಾದರೆ ಮೈಸೂರಿಗೆ ಕರೆತಂದು ಚಿಕಿತ್ಸೆ ಕೊಡಿಸಲಾಗುವುದು. ಮಕ್ಕಳ ಆರೋಗ್ಯ ಚೆನ್ನಾಗಿದ್ದರೆ ಅವರ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ. ಆರೋಗ್ಯದ ಜತೆಗೆ ವಿದ್ಯಾರ್ಥಿಗಳು ಚೆನ್ನಾಗಿ ಓದಬೇಕು. ಉತ್ತಮ ಅಂಕಗಳನ್ನು ಪಡೆದು ಸರ್ಕಾರದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದರು.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಕಲ್ಯಾಣಾಧಿಕಾರಿ ಜಿ.ಆರ್.ಮಹೇಶ್ ಮಾತನಾಡಿ, ಮಕ್ಕಳು ಶಾಲೆಗಳಲ್ಲಿ ಉಳಿಯಲು ನರ್ಸ್, ವಾರ್ಡನ್, ಸಿಬ್ಬಂದಿ, ವಾಚ್‌ಮನ್‌ಗಳನ್ನು ನೇಮಕ ಮಾಡಲು ಸರ್ಕಾರದ ಗಮನಕ್ಕೆ ತಂದಿದ್ದೇವೆ. ಮುಂದಿನ ದಿನಗಳಲ್ಲಿ ಕಿತ್ತೂರು ರಾಣಿ ಚನ್ನಮ್ಮ, ಮುರಾರ್ಜಿ ದೇಸಾಯಿ ವಸತಿ ಶಾಲೆಯಂತೆ ಗುಣಮಟ್ಟದ ಶಿಕ್ಷಣವನ್ನು ಆಶ್ರಮ ಶಾಲೆಗಳಲ್ಲಿಯೂ ನೀಡಲಾಗುವುದು. ಪ್ರತಿವರ್ಷ 10 ರಿಂದ 15 ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸುತ್ತಿದ್ದೇವೆ. ಈ ಆರೋಗ್ಯ ಶಿಬಿರವನ್ನು ಯಶಸ್ವಿಯಾಗಿ ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು. ಶಿಕ್ಷಕರು ಮಕ್ಕಳಲ್ಲಿರುವ ನ್ಯೂನತೆಗಳನ್ನು ಗುರುತಿಸಿ ವೈದ್ಯರಿಗೆ ತಿಳಿಸಿ ಚಿಕಿತ್ಸೆ ಕೊಡಿಸಬೇಕು ಎಂದರು.
ಲೆಕ್ಕಾಧಿಕಾರಿ ಬಿ.ಆರ್.ಭವ್ಯಾ, ತಾಲೂಕು ವ್ಯವಸ್ಥಾಪಕ ನಾಗರಾಜ್, ಶಿಕ್ಷಕ ಸುರೇಶ್, ವೈದ್ಯರಾದ ಡಾ. ಮೋಹನ್‌ಕುಮಾರ್, ಡಾ. ರವಿಕುಮಾರ್, ಡಾ.ದಿನೇಶ್, ಡಾ.ರಾಮಕೃಷ್ಣಯ್ಯ, ಡಾ.ಕಲಾವತಿ, ವೈದ್ಯರಾದ ಡಾ. ಕೀರ್ತಿ ಪಿ.ಮೂರ್ತಿ, ಡಾ.ರಾಜಮಣಿ, ಡಾ. ಪ್ರೀತಮ್, ಡಾ. ಎಚ್.ಸಿ. ಚಂದನ್, ಡಾ. ಜಿ.ಎಲ್.ನಂದಿನಿ, ಸಂಯೋಜಕ ನದೀಮ್ ಇತರರು ಇದ್ದರು.