ಹುಣಸೂರು ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ರೋಟರಿ ವತಿಯಿಂದ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ ವಿದ್ಯಾರ್ಥಿನಿಯರು ತಪಾಸಣೆಗೊಳಗಾದರು. ಶಾಮಣ್ಣ ಧರ್ಮಾಪುರ, ಲೂಯೀಸ್ ಪೆರೇರಾ, ಡಾ.ಪ್ರಸನ್ನ, ಡಾ.ತೇಜಸ್ ಇತರರಿದ್ದರು.
ಹುಣಸೂರು : ರೋಟರಿ ಕ್ಲಬ್ ಹುಣಸೂರು ಮತ್ತು ಬಸವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತಪಾಸಣೆಗೊಳಗಾದರು.
ಆಸ್ಪತ್ರೆಯ ತಜ್ಞೆ ಡಾ.ನವ್ಯಾ ಮಾತನಾಡಿ, ಹದಿಹರೆಯದ ಹೆಣ್ಣುಮಕ್ಕಳು ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದು ಅತ್ಯಗತ್ಯ ಎಂದರು.
ವಿಟಮಿನ್ ಡಿ ಕೊರತೆಯಿಂದಾಗಿ ಮೂಳೆಗಳ ಸವೆತ, ರಕ್ತ ಹೀನತೆಯಂತಹ ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ. ಹಾಗಾಗಿ ಪೌಷ್ಟಿಕ ಆಹಾರಗಳ ಸೇವನೆಯಿಂದ ಆರೋಗ್ಯ ಸಮತೋಲನ ಮಾಡಿಕೊಳ್ಳಬೇಕು ಎಂದರು. ಶಿಬಿರದಲ್ಲಿ ಮೂಳೆಗಳ ತಪಾಸಣೆ, ರಕ್ತಹೀನತೆ, ಬಿಪಿ, ಡಯಾಬಿಟಿಕ್ ಮತ್ತು ವೈಯಕ್ತಿಕ ಸಮಸ್ಯೆ ಕುರಿತು ಕೌನ್ಸೆಲಿಂಗ್ ನಡೆಸಿ ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಲಾಗಿದೆ ಎಂದು ವಿವರಿಸಿದರು.
ರೋಟರಿ ಅಧ್ಯಕ್ಷ ಶಾಮಣ್ಣ ಧರ್ಮಾಪುರ ಮಾತನಾಡಿ, ರೋಟರಿ ಸಂಸ್ಥೆ ಹದಿಹರೆಯದ ವಿದ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ಆರೋಗ್ಯ ರಕ್ಷಣೆಗೆ ಕಾಳಜಿ ವಹಿಸಿ ಶಿಬಿರಗಳನ್ನು ಆಯೋಜಿಸುತ್ತಿದೆ ಎಂದರು. ಡಾ.ತೇಜಸ್, ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜು, ಸಹಾಯಕ ಪ್ರಾಧ್ಯಾಪಕ ಡಾ.ಪ್ರಸನ್ನ, ರೋಟರಿ ಕಾರ್ಯದರ್ಶಿ ಲೂಯಿಸ್ ಪೆರೇರಾ, ಆಸ್ಪತ್ರೆ ವ್ಯವಸ್ಥಾಪಕ ಲೋಕೇಶ್ ಮತ್ತು ವಿದ್ಯಾರ್ಥಿನಿಯರು ಇದ್ದರು.