ಹೋಟೆಲ್ ಉದ್ಯೋಗದ ಸಾಂದರ್ಭಿಕ ಚಿತ್ರ
ಮೈಸೂರು: ವಿದೇಶದ ಹೋಟೆಲ್‌ವೊಂದರಲ್ಲಿ ಕೆಲಸ ಖಾಲಿ ಇದೆ ಎಂಬ ಸಾಮಾಜಿಕ ಜಾಲತಾಣದ ಜಾಹೀರಾತನ್ನು ನಂಬಿದ ಮೂವರು ವ್ಯಕ್ತಿಗಳು ಬರೋಬ್ಬರಿ 37.35 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ.
ನಗರದ ಲಷ್ಕರ್ ಮೊಹಲ್ಲಾದ ಹಸ್ನಾ ಪರ್ವೀನ್, ಮೊಹಮ್ಮದ್ ಯಹಿಯಾ ಹಾಗೂ ಬೆಂಗಳೂರಿನ ತಸ್ನಿಂ ಬಾನು ಹಣ ಕಳೆದುಕೊಂಡವರು. ಮೊಹಮ್ಮದ್ ಯಹಿಯಾ ಈ ಹಿಂದೆ ಇಂಗ್ಲೆಂಡ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. ಅನಾರೋಗ್ಯ ಹಿನ್ನೆಲೆಯಲ್ಲಿ 2025ರ ಆಗಸ್ಟ್‌ನಲ್ಲಿ ದೇಶಕ್ಕೆ ಮರಳಿದರು. ನಂತರ 2025ರ ನವೆಂಬರ್ ನಂತರ ಕೆಲಸಕೋಸ್ಕರ ಆನ್‌ಲೈನ್‌ನಲ್ಲಿ ಹುಡುಕಾಟ ನಡೆಸುತ್ತಿದ್ದರು.
ಈ ಸಂದರ್ಭ ಅವರ ಕಣ್ಣಿಗೆ ಸಾಮಾಜಿಕ ಜಾಲತಾಣದಲ್ಲಿ ಯುಕೆಯ ಸೆಂಟ್ರಲ್ ಪಾರ್ಕ್ ಹೋಟೆಲ್‌ನಲ್ಲಿ ಶೆಫ್ ಹುದ್ದೆ ಖಾಲಿ ಇರುವುದು ಕಂಡು ಬಂತು. ಜಾಹೀರಾತುದಾರರನ್ನು ಸಂಪರ್ಕಿಸಿದ ಸಂದರ್ಭ ನೋಂದಣಿಗೆ 24,999 ರೂ. ಕಳುಹಿಸುವಂತೆ ಸೂಚಿಸಿದ ಮೇರೆಗೆ ಆ ಹಣವನ್ನು ಕಳುಹಿಸಿಕೊಡಲಾಯಿತು. ಆ ನಂತರ ಲೈಸನ್ಸ್, ಇನ್ಸೂರೆನ್ಸ್, ಯುಕೆನಲ್ಲಿ ಬ್ಯಾಂಕ್ ಖಾತೆ ತೆರೆಯುವ ಉದ್ದೇಶ ಸೇರಿದಂತೆ ವಿವಿಧ ಕಾರಣಗಳನ್ನು ನೀಡಿ ಒಟ್ಟು 37,35,834 ರೂ.ಗಳನ್ನು ವಂಚಕರು ಪಡೆದುಕೊಂಡಿದ್ದಾರೆ. 2025ರ ಡಿಸೆಂಬರ್‌ನಿಂದ ನಿರಂತರವಾಗಿ ವಂಚಕರಿಗೆ ಅವರು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ.
ನಗರದ ಲಷ್ಕರ್ ಮೊಹಲ್ಲಾದ ಹಸ್ನಾ ಪರ್ವೀನ್, ಮೊಹಮ್ಮದ್ ಯಹಿಯಾ ಪತಿ, ಪತ್ನಿಯರಾಗಿದ್ದು, ಇವರ ಬಳಿ ಹಣ ಖಾಲಿಯಾದ ನಂತರ ಬೆಂಗಳೂರಿನಲ್ಲಿರುವ ಮೊಹಮ್ಮದ್ ಯಹಿಯಾ ಅಣ್ಣನ ಪತ್ನಿ ತಸ್ನಿಂ ಬಾನು ಅವರಿಂದಲೂ ಹಣ ಪಡೆದು ವಂಚಕರಿಗೆ ನೀಡಲಾ ಗಿದೆ. ಈ ಕುರಿತು ಸೆನ್ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.