ಎಚ್.ಡಿ.ಕೋಟೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.
ಎಚ್.ಡಿ.ಕೋಟೆ: ನಮ್ಮ ದೇಶದ ಸಂವಿಧಾನ ಜೀವ ನೀಡುವ ಸಂಜೀವಿನಿ ಎಂದು ತಹಸೀಲ್ದಾರ್ ಶ್ರೀನಿವಾಸ್ ಅಭಿಪ್ರಾಯಪಟ್ಟರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದಷ್ಟು ಪ್ರಬಲವಾದ ಆಯುಧ ಯಾವುದೂ ಇಲ್ಲ. ಏಕೆಂದರೆ ಬೇರೆಲ್ಲ ಆಯುಧಗಳು ರಕ್ಷಣೆಯ ಮುಖವಾಡ ಧರಿಸಿ ಜೀವಗಳನ್ನು ತೆಗೆಯುತ್ತಿದ್ದರೂ ಸಂವಿಧಾನ ಮಾತ್ರ ಜೀವ ನೀಡುವ ಸಂಜೀವಿನಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾದ ಭಾರತವು ವಿವಿಧತೆಯಲ್ಲಿ ಏಕತೆ ಸಾಧಿಸಿ, ಅಭಿವೃದ್ಧಿಯ ಪಥದಲ್ಲಿ ಮುಂದುವರಿಯಲು ದಿಕ್ಕು ತೋರಿಸಿದ ನಮ್ಮ ದೇಶದ ಶ್ರೇಷ್ಠ ಸಂವಿಧಾನ. ಪ್ರತಿಯೊಬ್ಬ ಪ್ರಜೆಗೂ ರಾಜಕೀಯ, ಸಾಮಾಜಿಕ, ಆರ್ಥಿಕ ಸಮಾನತೆಯನ್ನು ಒದಗಿಸಿದ ಸಂವಿಧಾನದ ಮೌಲ್ಯಗಳನ್ನು ಭಾರತೀಯರಾದ ನಾವು ಕಾಪಾಡಬೇಕು. ಪ್ರಜಾಪ್ರಭುತ್ವ ರಾಷ್ಟ್ರ ನಮ್ಮ ಭಾರತಕ್ಕೆ ಉತ್ತಮ ಸಂವಿಧಾನವನ್ನು ಕೊಟ್ಟ ಮಹಾನಾಯಕ ಅಂಬೇಡ್ಕರ್. ಸಂವಿಧಾನ ಸಮರ್ಪಣಾ ದಿನ ಒಂದು ದಿನದ ಕಾರ್ಯಕ್ರಮವಾಗದೆ ಪ್ರತಿ ಹಳ್ಳಿಯ ಮನೆಯ ಮಕ್ಕಳಿಗೂ ಅರಿವು ಮೂಡಿಸುವ ಕಾರ್ಯಕ್ರಮವಾಗಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣ ಸಮನ್ವಯ ಅಧಿಕಾರಿ ಕೃಷ್ಣಯ್ಯ ಮಾತನಾಡಿ, ಸಂವಿಧಾನದ ಬಗ್ಗೆ ಮಾತನಾಡಲು ಮಿತಿ ಇರುವುದಿಲ್ಲ. ಸಂವಿಧಾನ ಎಂದರೆ ಅದೊಂದು ಕಾನೂನು ಪುಸ್ತಕ. ಅಂಬೇಡ್ಕರ್ ಮತ್ತು ಸಂವಿಧಾನವನ್ನು ಅರ್ಥ ಮಾಡಿಕೊಳ್ಳುವ ರೀತಿ ಸರಿ ಇರಬೇಕು. ಶಾಲೆಯಲ್ಲಿ ಸಂವಿಧಾನವನ್ನು ಪಠಣ ಮಾಡಲು ಸರ್ಕಾರ ಅವಕಾಶ ನೀಡಿದೆ. ಸಂವಿಧಾನ ಪ್ರಚುರಪಡಿಸುವ ಕೆಲಸ ಇನ್ನೂ ಆಗಬೇಕು ಎಂದರು.
ಹಿಂದಿನ ಕಾಲದಲ್ಲಿ ಶಿಕ್ಷಣ ಪಡೆದುಕೊಳ್ಳುವ ವ್ಯವಸ್ಥೆ ಎಲ್ಲರಿಗೂ ಇರಲಿಲ್ಲ. ವರ್ಣಾಶ್ರಮ ವ್ಯವಸ್ಥೆ ಇದ್ದ ಕಾರಣ ಮೇಲು-ಕೀಳು ಭಾನವನೆಯಿಂದ ಸಮಾನ ಶಿಕ್ಷಣ ಪಡೆಯಲು ಸಾಧ್ಯವಿರಲಿಲ್ಲ. ಸಂವಿಧಾನ ಜಾರಿಯಾದ ನಂತರ ಎಲ್ಲರಿಗೂ ಸಮಾನ ಅವಕಾಶ ಸಿಗಲು ಸಾಧ್ಯವಾಯಿತು ಎಂದರು.
ಸಂವಿಧಾನದ ಪ್ರಸ್ತಾವನೆ ಅರ್ಥ ಮಾಡಿಕೊಂಡರೆ ನಾವು ಹೇಗೆ ಇರಬೇಕು ಎಂಬುದನ್ನು ಅರಿಯಕೊಳ್ಳಬಹುದು. ದೇಶವನ್ನು ರಕ್ಷಣೆ ಮಾಡುವ ಸಾರ್ವಜನಿಕ ಗ್ರಂಥ ಇದೆ ಎಂದರೆ ಅದು ಸಂವಿಧಾನ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಿಂದ ಸಂವಿಧಾನ ರಥ ಅಂಬೇಡ್ಕರ್ ಭವನದವರೆಗೆ ತೆರಳಿತು. ಇಒ ಧರಣೀಶ್, ಟಿಎಚ್‌ಒ ಡಾ.ರವಿಕುಮಾರ್, ನರಸಿಂಹಮೂರ್ತಿ, ಹೈರಿಗೆ ಶಿವರಾಜು, ಸೋಗಹಳ್ಳಿ ಶಿವಣ್ಣ, ಅಕ್ಬರ್ ಪಾಷ, ಪೊಲೀಸ್ ಇನ್ಸ್‌ಸ್ಪೆಕ್ಟರ್ ಗಂಗಾಧರ್, ಬಿಇಒ ರಾಜು, ಜವರಯ್ಯ, ಬಸವರಾಜು, ವೇಣುಗೋಪಾಲ್, ಅನುಷಾ ಕೋಟೆ, ಶೈಲಾ ಸುಧಾಮಣಿ, ಸೌಮ್ಯಾ ಮಂಜುನಾಥ್, ನಾಗರಾಜು, ಸಣ್ಣಕುಮಾರ್, ಕಾಳಸ್ವಾಮಿ, ಎಡಿಎಲ್ಆರ್ ಬಸವರಾಜು, ಶಿವಯ್ಯ, ಅಶೋಕ್ ಇದ್ದರು.