ಎಚ್.ಡಿ.ಕೋಟೆ ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ದಮ್ಮನಕಟ್ಟೆ ಸಫಾರಿ ಕೇಂದ್ರ ತೆರೆಯಲು ಒತ್ತಾಯಿಸಿ ತಾಲೂಕು ಪ್ರಗತಿಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಶ್ರೀನಿವಾಸ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. 
ಮೈಸೂರು

ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ

ಎಚ್.ಡಿ.ಕೋಟೆ: ತಾಲೂಕಿನ ದಮ್ಮನಕಟ್ಟೆ ಸಫಾರಿ ಮುಚ್ಚಿರುವುದರಿಂದ ನೂರಾರು ಕುಟುಂಬಗಳು ಉದ್ಯೋಗವಿಲ್ಲದೆ ಅತಂತ್ರರಾಗಿದ್ದಾರೆ. ಹಾಗಾಗಿ ಈ ಕೂಡಲೇ ಸಫಾರಿ ಕೇಂದ್ರ ತೆರೆಯುವಂತೆ ಒತ್ತಾಯಿಸಿ ತಾಲೂಕು ಪ್ರಗತಿಪರ ಸಂಘಟನೆಗಳ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ತಾಲೂಕು ಆಡಳಿತಸೌಧದಲ್ಲಿ ಸೇರಿದ ಪ್ರತಿಭಟನಾಕಾರರು, ತಾಲೂಕಿನ ಸಾವಿರಾರು ನಿರುದ್ಯೋಗಿ ಯುವಕರಿಗೆ ತಾಲೂಕಿನಲ್ಲಿ ಸಫಾರಿ ಕೇಂದ್ರ ಇದ್ದ ಕಾರಣ ರೆಸಾರ್ಟ್‌ಗಳಲ್ಲಿ ಅಡುಗೆ ಭಟ್ಟರಿಂದ ಹಿಡಿದು ವಾಹನ ಚಾಲನೆ ಮಾಡುವವರಿಗೆ ಕೆಲಸ ಸಿಕ್ಕಿತು. ಕೈ ತುಂಬ ಸಂಬಳ ಬರುವಂತಾಗಿ ತಮ್ಮ ಕುಟುಂಬ ನಿರ್ವಹಣೆ ಮಾಡಲು ಸಹಾಯವಾಗಿತ್ತು. ಇದರ ಜತೆಗೆ ನೂರಾರು ಕುಟುಂಬಗಳು ಬೀದಿ ಬದಿ ವ್ಯಾಪಾರಸ್ಥರು, ಬೇಕರಿ, ಟೀ ಅಂಗಡಿ, ಹೋಟೆಲ್ ಸೇರಿದಂತೆ ಹಲವಾರು ಸ್ವಯಂ ಉದ್ಯೋಗ ನಡೆಸಲು ಸಫಾರಿ ಅನುಕೂಲ ಮಾಡಿಕೊಟ್ಟ ಕಾರಣ ಉತ್ತಮ ಬದುಕು ಕಟ್ಟಿಕೊಂಡಿದ್ದರು. ಆದರೆ ಕಳೆದ ಎರಡು ತಿಂಗಳಿಂದ ಸಫಾರಿ ಕೇಂದ್ರ ಮುಚ್ಚಿರುವ ಕಾರಣ ಇವರ ಬದುಕು ಈಗ ಅತಂತ್ರವಾಗಿದೆ. ರೆಸಾರ್ಟ್‌ಗಳಿಗೆ ಪ್ರವಾಸಿಗರು ಬಾರದೆ ಇರುವ ಕಾರಣ ಮಾಲೀಕರು ಕಾರ್ಮಿಕರನ್ನು ಅನಿವಾರ್ಯವಾಗಿ ಕೆಲಸದಿಂದ ತೆಗೆಯಲು ಮುಂದಾಗಿದ್ದಾರೆ. ಇದರಿಂದ ಸಾವಿರಾರು ಯುವಕರು ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿ ಇದ್ದಾರೆ. ಹಾಗಾಗಿ ಈ ಕೂಡಲೇ ಸಫಾರಿ ತೆರೆಯುವಂತೆ ಒತ್ತಾಯಿಸಿದರು.
ದಸಂಸ ತಾಲೂಕು ಸಂಚಾಲಕ ಸಣ್ಣಕುಮಾರ್ ನೂರಾರು ವರ್ಷಗಳಿಂದಲೂ ಕಾಡಂಚಿನ ಪ್ರದೇಶಗಳಲ್ಲಿ ಮಾನವ-ಕಾಡು ಪ್ರಾಣಿಗಳ ನಿರಂತರವಾಗಿ ಸಂಘರ್ಷ ನಡೆದುಕೊಂಡು ಬಂದಿದೆ. ಇದು ನಿನ್ನೆ, ಮೊನ್ನೆಯದಲ್ಲ, ಮಾನವ ಹಾಗೂ ಪ್ರಾಣಿ ಸಂಘರ್ಷ ನಡೆಯುತ್ತಲೇ ಬಂದಿದೆ. ಇದರ ತಡೆಗಾಗಿ ಸರ್ಕಾರಗಳು ವೈಜ್ಞಾನಿಕವಾದ ಕಾರಣಗಳನ್ನು ಹುಡುಕುವ ಕೆಲಸವಾಗಬೇಕು. ಆದರೆ ಇತ್ತೀಚೆಗೆ ಸರಗೂರು ತಾಲೂಕಿನಲ್ಲಿ ನಡೆದ ಹುಲಿ ದಾಳಿ ಪ್ರಕರಣವನ್ನು ಮುಂದಿಟ್ಟುಕೊಂಡು ಸರ್ಕಾರ ಬಡವರ ಬದುಕು ಕಸಿದುಕೊಂಡಿರುವುದು ಸರಿಯೇ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ ಹಾಗಾಗಿ ಸರ್ಕಾರ ಕೂಡಲೇ ಸಫಾರಿ ಕೇಂದ್ರ ತೆರೆದು ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡ ಬೀರಂಬಳ್ಳಿ ಪ್ರಭಾಕರ್ ಮಾತನಾಡಿ, ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಸರ್ಕಾರದ ಜಂಗಲ್ ಲಾಡ್ಜ್ ರೆಸಾರ್ಟ್ ಸೇರಿದಂತೆ ಖಾಸಗಿ ರೆಸಾರ್ಟ್‌ಗಳು ಇರುವುದರಿಂದ ತಾಲೂಕಿಗೆ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಸರ್ಕಾರಕ್ಕೆ ಆದಾಯ ಬರುತ್ತಿದೆ. ದಮ್ಮನಕಟ್ಟೆ ಸಫಾರಿ ಕೇಂದ್ರ ನಿಲ್ಲಿಸಿರುವ ಕಾರಣ ತಾಲೂಕಿನಲ್ಲಿ ಪ್ರವಾಸೋದ್ಯಮಕ್ಕೆ ಬಾರಿ ಹೊಡೆತ ಬಿದ್ದು ಸಾವಿರಾರು ಯುವಕರು ಕೆಲಸ ಕಳೆದುಕೊಂಡು, ನೂರಾರು ಕುಟುಂಬಗಳು ಬೀದಿಗೆ ಬೀಳುವ ಸನ್ನಿವೇಶ ಕಾಣುವಂತೆ ಆಗಿದೆ. ಮುಂದೊಂದು ದಿನ ಬದುಕು ಕಳೆದುಕೊಂಡ ಸಮುದಾಯಗಳು ದಿಕ್ಕು ದೆಸೆಯಿಲ್ಲದೆ ನಾಶ ಆಗಬಹುದಾದ ಸನ್ನಿವೇಶದಲ್ಲಿ ಇದ್ದಾರೆ. ಹಾಗಾಗಿ ಸಫಾರಿ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.
ನಂತರ ತಹಸೀಲ್ದಾರ್ ಶ್ರೀನಿವಾಸ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಮುಖಂಡರಾದ ಚಾ.ಶಿವಕುಮಾರ್, ಅನುಷ ಕೋಟೆ, ಕೃಷ್ಣ ಮಟಕೆರೆ, ಗೋವಿಂದರಾಜು, ಗ್ಯಾಸ್ ಪ್ರಕಾಶ್, ಪುಟ್ಟಮಾದು ಕೋಟೆ, ಉದಯ ಕೋಟೆ, ಕೃಷ್ಣ ಕುರ್ಣೇಗಾಲ, ಬಾಬು, ಸಮೀರ್, ಅಲ್ತಾಫ್, ಸತೀಶ್ ಕುಮಾರ್, ಶಿವಯ್ಯ ಇದ್ದರು.