ಕೆ.ಆರ್.ನಗರ ತಾಲೂಕಿನ ಮಾರಗೌಡನಹಳ್ಳಿ ಗ್ರಾಮದಲ್ಲಿ ಎಪಿಎಂಸಿ ಮಾಜಿ ಸದಸ್ಯ ಬಂಡಹಳ್ಳಿ ಕುಚೇಲ ರವರ ಶ್ರೀ ವೀರಭದ್ರೇಶ್ವರ ಫ್ಯೂಯಲ್ಸ್‌ನ್ನು ಕೇಂದ್ರ ಬೃಹತ್ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಿದರು. ಮಾಜಿ ಸಚಿವ ಸಾ.ರಾ.ಮಹೇಶ್, ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮಾಜಿ ಶಾಸಕರಾದ ಕೆ.ಮಹದೇವ್, ಅಶ್ವಿನ್ ಇನ್ನಿತರರು ಇದ್ದರು. 
ಮೈಸೂರು

ತಂಬಾಕು ಬೆಳೆಗಾರರ ಸಮಸ್ಯೆಗೆ ಸ್ಪಂದಿಸುವೆ

ಎ. ಆರ್. ರಘುರಾಮ
ಕೆ.ಆರ್.ನಗರ : ತಂಬಾಕು ಬೆಳೆಗಾರರಿಗೆ ಉತ್ತಮ ದರ ದೊರಕಬೇಕು. ದರ ಏರುಪೇರುಗಳಿಂದ ಆಗುತ್ತಿರು ನಷ್ಟ ಮತ್ತು ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಹಾಗೂ ಐಟಿಸಿ ಕಂಪನಿ ಪ್ರಮುಖರೊಂದಿಗೆ ಮಾತನಾಡಿದ್ದೇನೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಮಾರಗೌಡನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಖಾಸಗಿ ಕಾರ್ಯಕ್ರಮದದಲ್ಲಿ ಅವರು ಮಾತನಾಡಿದರು. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಂಬಾಕು ಮಂಡಳಿ ಆದೇಶ ಹೊರಡಿಸಬೇಕು. ಈ ನಿಟ್ಟಿನಲ್ಲಿ ನನ್ನ ಯತ್ನವಿದೆ. ರೈತರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಿಕೊಡಲು ಶ್ರಮಿಸುವೆ ಎಂದರು.
ಈ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದಲ್ಲಿ ರೈತರಿಗೆ ಉಳಿಗಾಲ ಇಲ್ಲ. ಬಹಳ ಕಷ್ಟಪಟ್ಟು ಬೆಳೆದ ಮಾವು ಬೆಳೆಗಾರರಿಗೆ ಕೇಂದ್ರ ಸರ್ಕಾರದ ವತಿಯಿಂದ ಸಬ್ಸಿಡಿ ಹಾಗೂ ಬೆಂಬಲ ಬೆಲೆ ಘೋಷಣೆ ಮಾಡಿದ್ದೇವೆ. ರಾಜ್ಯ ಸರ್ಕಾರದಿಂದ ಭತ್ತ, ರಾಗಿ ಹಾಗೂ ಇತರೆ ಬೆಳೆಗಳ ಪರವಾಗಿ ಯಾವುದೇ ಬೆಂಬಲ ಬೆಲೆ ನೀಡಿಲ್ಲ. ರೈತರು ಸಮಸ್ಯೆಗೀಡಾಗಿದ್ದರೂ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಕಿಡಿಕಾರಿದರು.
ನಾನು ಕೇಂದ್ರ ಸಚಿವನಾಗಿದ್ದರೂ ನಮ್ಮ ನಾಡಿನ ಕೃಷಿಕರ ಕಷ್ಟ ಸುಖಗಳಿಗೆ ಸದಾ ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದ್ದರು.ಮಾಜಿ ಸಚಿವ ಸಾ.ರಾ.ಮಹೇಶ್, ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮಾಜಿ ಶಾಸಕರಾದ ಕೆ.ಮಹದೇವ್, ಅಶ್ವಿನ್, ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ತಾಲೂಕು ಜೆಡಿಎಸ್ ಅಧ್ಯಕ್ಷರಾದ ಹಂಪಾಪುರ ಕುಮಾರ್, ಮೆಡಿಕಲ್ ರಾಜಣ್ಣ, ರಾಜ್ಯ ಕಾರ್ಯದರ್ಶಿ ಚಂದ್ರಶೇಖರ್, ಎಪಿಎಂಸಿ ಮಾಜಿ ಸದಸ್ಯ ಬಂಡಹಳ್ಳಿ ಕುಚೇಲ, ಗ್ರಾಪಂ ಅಧ್ಯಕ್ಷೆ ಸವಿತಾ ಹಾಜರಿದ್ದರು.