02ಊಆಏ0007 ಎಚ್.ಡಿ.ಕೋಟೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ(ಕೆಡಿಪಿ) 20 ಅಂಶಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿದರು. 
ಮೈಸೂರು

ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ

ಎಚ್.ಡಿ.ಕೋಟೆ: ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನಲ್ಲಿ ಗಾಂಜಾ, ಲಾಟರಿ, ಅಕ್ರಮ ಮದ್ಯ ಮತ್ತು ಜೂಜಾಟ ಹೆಚ್ಚಾಗಿದ್ದು, ಇದಕ್ಕೆ ಕಡಿವಾಣ ಹಾಕುವಂತೆ ಪೊಲೀಸ್ ಅಧಿಕಾರಿಗಳಿಗೆ ಶಾಸಕ ಅನಿಲ್ ಚಿಕ್ಕಮಾದು ಖಡಕ್ ಸೂಚನೆ ನೀಡಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸೋಮವಾರ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ(ಕೆಡಿಪಿ) 20 ಅಂಶದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹೊರಗಿನಿಂದ ತಾಲೂಕಿಗೆ ಬಂದು ಜೂಜಾಡಿಸುತ್ತಿರುವವರ ಬಗ್ಗೆ ನನ್ನ ಗಮನಕ್ಕೆ ಬಂದ ನಂತರ ಮೂರು ನಾಲ್ಕು ಬಾರಿ ಕ್ರಮ ಕೈಗೊಳ್ಳಲು ನಿಮಗೆ ತಿಳಿಸಿದರೂ ನಿಯಂತ್ರಣವಾಗಿಲ್ಲ ಎಂದು ಎರಡು ತಾಲೂಕಿನ ಪೊಲೀಸ್ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಇದಕ್ಕೆ ಉತ್ತರಿಸಿದ ಎಚ್.ಡಿ.ಕೋಟೆ ಪಟ್ಟಣ ಠಾಣೆ ಇನ್‌ಸ್ಪೆಕ್ಟರ್ ಗಂಗಾಧರ್, ಈಗಾಗಲೇ ಜೂಜು ಆಡುವವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಲಾಟರಿ ಮಾರುವವರನ್ನು ಬಂಧಿಸಿ ಬಳಿಕ ಠಾಣೆಗೆ ಕರೆಸಿ ಎಚ್ಚರಿಕೆ ನೀಡಿದ್ದು ಮುಂದಿನ ದಿನಗಳಲ್ಲಿ ಲಾಟರಿ ಮಾರುವುದು ಕಂಡುಬಂದರೆ ಅವರ ಹೆಸರಿನಲ್ಲಿ ರೌಡಿಶೀಟರ್ ತೆರೆಯಲಾಗುವುದು. ಅಲ್ಲದೆ ಗಡಿಪಾರಿಗೂ ಸಹ ಮೇಲಧಿಕಾರಿಗಳಿಗೆ ಶಿಫಾರಸು ಮಾಡಲಾಗುತ್ತದೆ ಎಂದು ತಿಳಿಸಿದರು.
ತಾಲೂಕಿನ ಮೈಸೂರು-ಮಾನಂದವಾಡಿ ರಸ್ತೆಯಲ್ಲಿ ಹೆಚ್ಚು ಅಪಘಾತಗಳು ನಡೆದು ಸಾವು ನೋವು ಹೆಚ್ಚಾಗಿದೆ. ಅಪಘಾತ ತಡೆಯಲು ಸೂಚನಾ ಫಲಕ ಮತ್ತು ರಸ್ತೆ ಉಬ್ಬುಗಳನ್ನು ಹಾಕುವಂತೆ ಸೂಚಿಸಿದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪ್ರಸಾದ್ ಮಾತನಾಡಿ, ತಾಲೂಕಿನಲ್ಲಿ ಕಳೆದ ಸಾಲಿನಲ್ಲಿ 880 ಮಿ.ಮೀ. ಮಳೆ ಆಗಬೇಕಿತ್ತು. ಆದರೆ ಅಗತ್ಯಕ್ಕಿಂತ ಹೆಚ್ಚು ಅಂದರೆ 980 .7 ಮಿ.ಮೀ. ಮಳೆ ಆಗಿದ್ದು, ಉತ್ತಮ ಬೆಳೆ ಬಂದಿದೆ ಎಂದರು.
ಭತ್ತ 4,400 ಹೆಕ್ಟೆರ್ ಪ್ರದೇಶ, ರಾಗಿ 5,890 ಹೆಕ್ಟೇರ್, ಮೆಕ್ಕೆಜೋಳವನ್ನು 31,587 ಹೆಕ್ಟೇರ್, ಹತ್ತಿ 6,300 ಹೆಕ್ಟೇರ್, 5,100 ಹೆಕ್ಟೇರ್ ಪ್ರದೇಶದಲ್ಲಿ ತಂಬಾಕು ಬೆಳೆ ಬೆಳೆದು ರೈತರು ಲಾಭ ಗಳಿಸಿದ್ದಾರೆ ಎಂದರು.
ಕಳೆದ ಬಾರಿ ಬೇರೆಡೆ ರಸಗೊಬ್ಬರ ಕೊರತೆ ಕಂಡುಬಂದಿತ್ತು. ನಮ್ಮ ತಾಲೂಕಿಗೆ 27,615 ಮೆಟ್ರಿಕ್ ಟನ್ ಗೊಬ್ಬರ ಸರಬರಾಜಾಗಿದ್ದು, ರಸಗೊಬ್ಬರ ಸಮಸ್ಯೆ ತಲೆದೋರಿಲ್ಲ ಎಂದು ಹೇಳಿದರು.
ಸಿಡಿಪಿಒ ದೀಪಾ ಮಾತನಾಡಿ, ಸರಗೂರು ಮತ್ತು ಎಚ್.ಡಿ.ಕೋಟೆ ತಾಲೂಕಿನಲ್ಲಿ 74,614 ಗೃಹಲಕ್ಷ್ಮಿ ಫಲಾನುಭವಿಗಳು ಹೆಸರು ನೋಂದಣಿ ಆಗಿದ್ದು 72,762 ಮಂದಿಗೆ ಹಣ ಸಂದಾಯವಾಗಿದೆ ಎಂದರು.
ತಾಲೂಕಿನಲ್ಲಿ 69 ಅಂಗನವಾಡಿ ಕಟ್ಟಡಗಳು ದುರಸ್ತಿಗೆ ಬಂದಿವೆ, 15 ಕಟ್ಟಡಗಳು ಬಾಡಿಗೆ ಕಟ್ಟಡದಲ್ಲಿವೆ, 45 ಕಟ್ಟಡಗಳನ್ನು ಕೆಡವಿ ಹೊಸದಾಗಿ ಕಟ್ಟಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ನೇತ್ರಾವತಿ ಮಾತನಾಡಿ, ತಾಲೂಕಿನಲ್ಲಿ 4,750 ರೈತರು ಸುಮಾರು 3,600 ಹೆಕ್ಟೇರ್ ಪ್ರದೇಶದಲ್ಲಿ ಶುಂಠಿ ಬೆಳೆಯುತ್ತಿದ್ದಾರೆ. 2,100 ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ಬೆಳೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಅಬಕಾರಿ ನಿರೀಕ್ಷಕ ಶಿವರಾಜು ಮಾತನಾಡಿ, ತಾಲೂಕಿನಲ್ಲಿ ಕಳೆದ 10 ವರ್ಷಗಳಲ್ಲಿ ಕಳ್ಳಬಟ್ಟಿ ತಯಾರಿ ನಡೆಯುತ್ತಿತ್ತು. ಈಗ ಅದು ನಿಂತಿದ್ದು, ಹಾಡಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಪಟ್ಟಣದ ತಾಯಿ ಮತ್ತು ಸಾರ್ವಜನಿಕ ಆಸ್ಪತ್ರೆಯಲ್ಲಿ ರಾತ್ರಿ ವೇಳೆಯಲ್ಲಿ ವೈದ್ಯರು ಇರುವುದಿಲ್ಲ ಹಾಗೂ ಕೆಲ ವೈದ್ಯರು ಖಾಸಗಿ ಕ್ಲಿನಿಕ್ ನಡೆಸುವ ವೈದ್ಯರು ನಿಗದಿತ ಸಮಯಕ್ಕಿಂತ ಬೇಗ ತೆರಳುತ್ತಿದ್ದಾರೆ ಎಂದು ಸಾರ್ವಜನಿಕರಿಂದ ದೂರುಗಳು ಕೇಳಿಬಂದಿದೆ. ಜತೆಗೆ ಹೆರಿಗೆ ಮತ್ತು ಶಸ್ತ್ರಚಿಕಿತ್ಸೆ ಮಾಡಲು ವೈದ್ಯರು ರೋಗಿಗಳಿಂದ ಹಣಕ್ಕೆ ಬೇಡಿಕೆ ಇಡುತ್ತಿರುವ ಬಗ್ಗೆ ದೂರು ಕೇಳಿಬಂದಿದ್ದು, ಗಮನಹರಿಸುವಂತೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಪೂರ್ಣಿಮಾಗೆ ಸೂಚಿಸಿದರು.
ಸಭೆಯಲ್ಲಿ ಐಟಿಡಿಪಿ ಅಧಿಕಾರಿ ಮಲ್ಲೇಶ್, ತಹಸೀಲ್ದಾರ್‌ಗಳಾದ ಶ್ರೀನಿವಾಸ್, ಮೋಹನ್ ಕುಮಾರಿ, ಕಾರ್ಯ ನಿರ್ವಹಣಾಧಿಕಾರಿಗಳಾದ ಪ್ರೇಮಕುಮಾರ್, ಧರಣೇಶ್, ಕೆಡಿಪಿ ನಾಮ ನಿರ್ದೇಶನ ಸದಸ್ಯರಾದ ಗಿರೀಶ್, ಸುರೇಶ್, ಕಾಳಸ್ವಾಮಿ, ಉಪಕಾರಿ, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷರಾದ ಚಾಮರಾಜು, ಚಲುವರಾಜು, ತಾಲೂಕು ಮಟ್ಟದ ಅಧಿಕಾರಿಗಳಾದ ಡಾ.ರವಿಕುಮಾರ್, ರಮೇಶ್, ಸುರೇಶ್, ಮಹೇಶ್, ಗಣೇಶ್, ಗೋವಿಂದ ನಾಯಕ, ನಟಶೇಖರ ಮೂರ್ತಿ, ಬಿಇಒ ಸಿ.ಎನ್ ರಾಜು, ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಗಂಗಾಧರ್, ಪ್ರಸನ್ನ ಕುಮಾರ್, ಸಬ್‌ಇನ್‌ಸ್ಪೆಕ್ಟರ್‌ಗಳಾದ ಚಂದ್ರಾಸನ್, ಕಿರಣ್, ಅರಣ್ಯ ಇಲಾಖೆ ಅಧಿಕಾರಿಗಳಾದ ಸಿದ್ದರಾಜು, ಹನುಮಂತ ರಾಜು, ರವಿಕುಮಾರ್, ಅನಿತಾ ರಾಜ್, ಅಮೃತಾ ರಾಜು, ಅಬಕಾರಿ ಇನ್‌ಸ್ಪೆಕ್ಟರ್ ಶಿವರಾಜ್, ದೀಪಾ, ಹರ್ಷಿತಾ, ನೇತ್ರಾವತಿ ಶಶಿಕಲಾ ಇದ್ದರು.