ಮಹಿಳಾ ದೌರ್ಜನ್ಯ ತಡೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ
ಎಚ್.ಡಿ.ಕೋಟೆ: ಹಿಂದೆ ಗಂಡು ಹೊರಗೆ ದುಡಿಯುತ್ತಿದ್ದ ಸಂದರ್ಭದಲ್ಲಿ ಹೆಣ್ಣು ಪುರುಷರಷ್ಟೇ ಸಮಾನವಾಗಿ ಮನೆಯಲ್ಲಿ ದುಡಿಯುತ್ತಿದ್ದಳು, ಇದು ಅಂದು ಸಮಾಜದ ಕಣ್ಣಿಗೆ ಕಾಣುತ್ತಿರಲಿಲ್ಲ ಎಂಬುದು ವಿಪರ್ಯಾಸದ ಸಂಗತಿ ಎಂದು ಮೈಸೂರಿನ ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಡಾ.ರಶ್ಮಿಚನ್ನಯ್ಯ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ಮೈಸೂರು ವಿಶ್ವವಿದ್ಯಾಲಯ, ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜು ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದೊಂದಿಗೆ ಬುಧವಾರ ಆಯೋಜಿಸಿದ್ದ ಮಹಿಳಾ ದೌರ್ಜನ್ಯ ತಡೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಿಳೆ ಮನೆಯಲ್ಲಿ ಕುಳಿತು ಕಾಲ ಕಳೆಯುತ್ತಾಳೆ ಎಂದು ಪುರುಷರು ತಿಳಿದುಕೊಂಡಿದ್ದರು. ಇದನ್ನು ಸಹಿಸದ ಮಹಿಳೆ ಮನೆಯಿಂದ ಹೊರಬಂದು ದುಡಿಯುವ ಮೂಲಕ ಗಂಡಿಗಿಂತ ಏನೂ ಕಡಿಮೆ ಇಲ್ಲ ಎಂದು ತೋರಿಸಿದ್ದು, ಎಲ್ಲ ಕ್ಷೇತ್ರಕ್ಕೂ ಮಹಿಳೆ ಲಗ್ಗೆ ಇಟ್ಟಿದ್ದಾಳೆ ಎಂದು ತಿಳಿಸಿದರು.
ಬಿಳಿಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ.ರತ್ನಾ ಮಾತನಾಡಿ, ಮಹಿಳೆ ದೌರ್ಜನ್ಯ ತಡೆಯಲು ಕೇಂದ್ರ ಸರ್ಕಾರ ಪಾಶ್ ಕಾಯ್ದೆಯನ್ನು ಜಾರಿಗೆ ತಂದಿದೆ ಎಂದರು.
ಕಾಲೇಜುಗಳಲ್ಲಿ, ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ, ಕಾರ್ಖಾನೆಗಳಲ್ಲಿ, ಕ್ರೀಡಾ ಕ್ಷೇತ್ರದಲ್ಲಿ, ರಾಜಕೀಯ ಕ್ಷೇತ್ರದಲ್ಲಾಗಲಿ ಉಳಿದ ಯಾವುದೇ ಕ್ಷೇತ್ರದಲ್ಲಾಗಲಿ ಮಹಿಳೆಗೆ ದೌರ್ಜನ್ಯ ನಡೆದರೆ ದೌರ್ಜನ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳವುದಲ್ಲದೆ, ಮಹಿಳೆಗೆ ನ್ಯಾಯ ಒದಗಿಸುವ ಕಾನೂನಿನ ಸುರಕ್ಷತಾ ಹಾದಿಗಳಿವೆ ಎಂದರು.
ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ.ಸೋಮಣ್ಣ ಮಾತನಾಡಿ, ಹಿಂದಿನ ದಿನಗಳಲ್ಲಿ ಶಿಕ್ಷಣದ ಕೊರತೆಯಿಂದಾಗಿ ಮುಖ್ಯವಾಹಿನಿಗೆ ಬರಲು ಮಹಿಳೆಯರು ಹಿಂದೇಟು ಹಾಕುತ್ತಿದ್ದರು. ಆದರೀಗ ಶಿಕ್ಷಣವನ್ನು ಪಡೆದ ಮಹಿಳೆಯು ಎಲ್ಲ ಕ್ಷೇತ್ರದಲ್ಲೂ ನಾನೇನು ಕಡಿಮೆ ಇಲ್ಲ ಎಂಬಂತೆ ಮಹಿಳೆಯರ ಪಾತ್ರ ಹೆಚ್ಚಾಗಿ ಕಾಣತೊಡಗಿದ್ದೇವೆ ಎಂದರು.
ಇತ್ತೀಚೆಗೆ ಪಾಕಿಸ್ತಾನ ವಿರುದ್ಧ ಭಾರತ ನಡೆಸಿದ ದಾಳಿ (ಆಪರೇಷನ್ ಸಿಂಧೂರ)ಯಲ್ಲಿ ಸೇನೆಯ ನೇತೃತ್ವವನ್ನು ವಹಿಸಿಕೊಂಡಿದ್ದುದು ಮಹಿಳೆಯರೇ ಎನ್ನುವುದು ಮೆಚ್ಚುವ ವಿಷಯವಾಗಿದೆ ಎಂದರು.
ಹಿಂದಿನ ದಿನಗಳಲ್ಲಿ ಪಾಲಕರು 10ರಿಂದ 12 ಮಂದಿ ಮಕ್ಕಳಿಗೆ ಜನ್ಮ ನೀಡುತ್ತಿದ್ದರು. ಕಾಲರಾ, ಪ್ಲೇಗ್, ಮಹಾಮಾರಿ, ಅಮ್ಮದಂತಹ ಕಾಯಿಲೆಗಳು ಬಂದಾಗ ಸಾವಿಗೀಡಾಗಿ ಬದುಕುಳಿಯುವವರ ಸಂಖ್ಯೆ ಕಡಿಮೆ ಇತ್ತು, ಈ ಕಾರಣಕ್ಕಾಗಿ ಹೆಚ್ಚು ಮಕ್ಕಳಿಗೆ ಜನ್ಮ ನೀಡುತ್ತಿದ್ದರು ಎಂದರು.
ಆಧುನಿಕ ಯುಗ ಬೆಳೆದಂತೆ ಆಹಾರದಲ್ಲಿ ರೋಗ ನಿರೋಧಕಶಕ್ತಿ ಇಲ್ಲದ ಆಹಾರ ಸೇವಿಸುತ್ತಿದ್ದು ಮನುಷ್ಯರು ಸಣ್ಣ ಕಾಯಿಲೆಯನ್ನೂ ತಡೆಯಲು ಶಕ್ತಿ ಇಲ್ಲದಂತಾಗುತ್ತಿದೆ ಎಂದು ಬೇಸರಿಸಿದರು.
ಎನ್‌ಎಸ್‌ಎಸ್‌ನಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ವಿಭಾಗದಲ್ಲಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಜಯ ಗಳಿಸಿದವರನ್ನು ಅಭಿನಂದಿಸಲಾಯಿತು.
ಪ್ರಾಂಶುಪಾಲರಾದ ಡಾ.ಜೆ.ಎನ್.ವೆಂಕಟೇಶ್, ಮೈಸೂರು ಮಹಾರಾಜ ಕಾಲೇಜಿನ ವಿಶ್ರಾಂತ ಪ್ರೊ.ಚಂದ್ರೇಗೌಡ, ಪ್ರಥಮ ದರ್ಜೆ ಸಹಾಯಕ ರಾಜೇಶ್, ಉಪನ್ಯಾಸಕರಾದ ರಾಮಚಂದ್ರ, ಕಲ್ಲೇಶ್‌ಗೌಡ, ಅವಿನಾ, ಚಂದನಾ, ಚಿತ್ರಾ, ಚಿಕ್ಕದೇವಿ, ಸಂಗೀತಾ, ಶಾಂಭವಿ, ಚನ್ನಕೇಶವ, ಸಿದ್ದೇಗೌಡ, ರವಿ, ರಾಮಚಂದ್ರ, ಮಹೇಂದ್ರ, ಮಹದೇವು, ಸಿದ್ದರಾಜು, ಮಂಜು, ಪ್ರಕಾಶ್ ನಾಯಕ್, ಸಿದ್ದೇಗೌಡ, ದಿಲೀಪ್, ಸೋಮಶೇಖರ್ ಇದ್ದರು.